ರಫೇಲ್ ಹಗರಣ: ಜಂಟಿ ಸದನ ಸಮಿತಿ ರಚನೆಗೆ ಆಗ್ರಹ

7

ರಫೇಲ್ ಹಗರಣ: ಜಂಟಿ ಸದನ ಸಮಿತಿ ರಚನೆಗೆ ಆಗ್ರಹ

Published:
Updated:
Prajavani

ಕಲಬುರ್ಗಿ: ರಫೇಲ್ ಹಗರಣಕ್ಕೆ ಸಂಬಂಧಿಸಿದಂತೆ ಜಂಟಿ ಸದನ ಸಮಿತಿ ರಚಿಸಬೇಕು ಮತ್ತು ಅದರ ಮೂಲಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನಾ ಪ್ರದರ್ಶನ ನಡೆಸಿದರು.

‘ಅಚ್ಛೇ ದಿನ್’ ಘೋಷವಾಕ್ಯದೊಂದಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರವು ದೇಶದ ರಕ್ಷಣಾ ವ್ಯವಸ್ಥೆಯಲ್ಲೇ ಭ್ರಷ್ಟಾಚಾರ ಎಸಗಿದೆ. ಯುಪಿಎ ನೇತೃತ್ವದ ಸರ್ಕಾರವು ಒಂದು ಯುದ್ಧ ವಿಮಾನಕ್ಕೆ ₹526 ಕೋಟಿಯಂತೆ 126 ವಿಮಾನಗಳ ಖರೀದಿಗೆ ಒಡಂಬಡಿಕೆ ಮಾಡಿಕೊಂಡಿತ್ತು. ಆದರೆ, ಬಿಜೆಪಿ ಸರ್ಕಾರ ತಲಾ ₹1,600 ಕೋಟಿಯಂತೆ 36 ವಿಮಾನಗಳನ್ನು ಖರೀದಿಸಲು ಒಡಂಬಡಿಕೆ ಮಾಡಿಕೊಂಡಿದೆ. ಅಲ್ಲದೆ, ಸರ್ಕಾರಿ ಒಡೆತನದ ಸಂಸ್ಥೆಯಾದ ಎಚ್‌ಎಎಲ್‌ ಬದಲು ಅಂಬಾನಿ ಒಡೆತನದ ಕಂಪನಿಗೆ ಗುತ್ತಿಗೆ ನೀಡಿದೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಬಿಜೆಪಿ ಹಿರಿಯ ನಾಯಕರಾದ ಅರುಣ ಶೌರಿ ಮತ್ತು ಶತ್ರುಘ್ನ ಸಿನ್ಹಾ ಅವರು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ರಫೇಲ್ ತನಿಖೆ ಕುರಿತು ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಸಿಎಜಿ) ವರದಿ ನೀಡಿದೆ ಎಂದು ಬಿಜೆಪಿಯವರು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ. ಆದರೆ, ಸಿಎಜಿ ಅಧ್ಯಕ್ಷರಾಗಿರುವ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರಿಗೇ ಈ ಬಗ್ಗೆ ಗೊತ್ತಿಲ್ಲ. ಆದ್ದರಿಂದ ಈ ಬಗ್ಗೆ ಜಂಟಿ ಸದನ ಸಮಿತಿಯಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಈರಣ್ಣ ಪಾಟೀಲ ಝಳಕಿ, ಓವೈಜ್ ಶೇಖ್, ಶಿವಾನಂದ ಹೊನಗುಂಟಿ, ಶರಣು ಕಡಗಂಚಿ, ಶರಣು ವಾರದ, ಶಕೀಲ್, ಅಮರ್ ಶಿರವಾಳ, ರೋಶನ್ ಕಡೇಕರ್, ಪರಶುರಾಮ ನಾಟೇಕರ್ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !