ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗೆ ಬೀದಿಪಾಲಾದ ಬದುಕು

ಮಾತೋಳಿ: ಸಂಕಷ್ಟದಲ್ಲಿ 10 ಕುಟುಂಬಗಳು, ನೆರವಿಗೆ ಮನವಿ
Last Updated 27 ಜುಲೈ 2020, 4:51 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನ ಮಾತೋಳಿ ಗ್ರಾಮದಲ್ಲಿ ಶುಕ್ರವಾರ ಭಾರಿ ಮಳೆಯಿಂದ ಹೊಸ ಬಡಾವಣೆಯಲ್ಲಿರುವ 10 ಮನೆಗಳಿಗೆ ನೀರು ನುಗ್ಗಿ ಕುಟುಂಬಗಳು ಬೀದಿ ಪಾಲಾಗಿವೆ.

ಇಲ್ಲಿಯವರೆಗೂ ತಾಲ್ಲೂಕು ಆಡಳಿತ ಸ್ಪಂದಿಸದಿರುವುದರಿಂದ ನಿತ್ಯ ಜೀವನ ಸಾಗಿಸುವುದು ಇವರಿಗೆ ಕಷ್ಟಕರವಾಗಿದೆ. ಮನೆಗೆ ನೀರು ನುಗ್ಗಿ 3 ದಿನ ಕಳೆದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳಾಗಲೀ ಕಂದಾಯ ಇಲಾಖೆ ದವರಾಗಲೀ ಭೇಟಿ ನೀಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಕುಟುಂಬಗಳು ನರಕಯಾತನೆ ಅನುಭವಿಸುತ್ತಿವೆ. ಮನೆಗೆ ನೀರು ಹೊಕ್ಕಿರುವುದರಿಂದ ಮಲಗಿಕೊಳ್ಳಲು, ಅಡುಗೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಬೆಳಕಿನ ವ್ಯವಸ್ಥೆ ಇಲ್ಲ. ಮಳೆ ನೀರಿನಿಂದ ತೊಂದರೆಗೆ ಒಳಗಾದ ವೆಂಕಟೇಶ ಮೊರೆ, ಭೀಮಾಶಂಕರ ಬಗಲಿ, ಗುರಪ್ಪ ಬಗಲಿ, ಗುರುದತ್ತ ಪಾಟೀಲ, ಮೈಬೂಬ ಅಲ್ಲಾವುದ್ದೀನ ನದಾಫ್ ಕುಟುಂಬಗಳು ಕಷ್ಟದಲ್ಲಿವೆ.

‘ಸರ್ಕಾರ ನಮಗೆ ಮನೆ ಕಟ್ಟಿಸಿಕೊಡಬೇಕು. ನಾವು ಶೆಡ್‌ ಹಾಕೊಕೊಂಡು ವಾಸವಾಗಿದ್ದೇವೆ. ಮಗ್ಗಲಲ್ಲೇ ಹಳ್ಳ ಹರಿಯುತ್ತದೆ. ಹೆಚ್ಚು ಮಳೆ ಬಂದರೆ ಮನೆಯಲ್ಲಿ ನೀರು ನುಗ್ಗುತ್ತದೆ. ಬದುಕಲು ಭಯವಾಗುತ್ತಿದೆ. ಮನೆಗೆ ನೀರು ಬರದಂತೆ ತಡೆಗೋಡೆ ಕಟ್ಟಬೇಕು. ಇಲ್ಲವೇ ಎತ್ತರದಲ್ಲಿ ಮನೆ ಕಟ್ಟಿಸಿಕೊಡಬೇಕು’ ಎಂಬುದು ಅವರು ಮನವಿ ಮಾಡಿದ್ದಾರೆ.

ಗ್ರಾಮದ ಮುಖಂಡರಾದ ಮಹಾಂತಪ್ಪ ಬಬಲೇಶ್ವರ ಅವರು ಮಾಹಿತಿ ನೀಡಿ, ‘ಮಾತೋಳಿ ಗ್ರಾಮದ ಹೊಸ ಬಡಾವಣೆಯಲ್ಲಿ 10 ಮನೆಗಳಿವೆ, ಮಳೆ ಬಂದರೆ ಮನೆಗೆ ನೀರು ನುಗ್ಗುತ್ತದೆ. ಸರ್ಕಾರ ವಿಶೇಷ ಅನುದಾನದಲ್ಲಿ ಮನೆ ಮಂಜೂರು ಮಾಡಬೇಕು ಮತ್ತು ಎತ್ತರದ ಪ್ರದೇಶದಲ್ಲಿ ಮನೆ ಕಟ್ಟುವ ವ್ಯವಸ್ಥೆಯಾಗಬೇಕು. ಅಲ್ಲಿಯವರೆಗೆ ಮನೆಗೆ ನೀರು ನುಗ್ಗದಂತೆ ವ್ಯವಸ್ಥೆಯಾಗಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT