ಬುಧವಾರ, ಸೆಪ್ಟೆಂಬರ್ 22, 2021
25 °C
ಮುಲ್ಲಾಮಾರಿ ನದಿಗೆ ಪ್ರವಾಹ; ಕೆರೆ ಕಟ್ಟೆಗಳಿಗೆ ನೀರು

ಚಿಂಚೋಳಿ: ನಾಗರಾಳ ಜಲಾಶಯ ಬಹುತೇಕ ಭರ್ತಿ

ಜಗನ್ನಾಥ ಡಿ. ಶೇರಿಕಾರ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ತಾಲ್ಲೂಕಿನ ವಿವಿಧೆಡೆ ಭಾನುವಾರ ಉತ್ತಮ ಮಳೆಯಾಗಿದೆ. ಮಳೆಯಿಂದ ಹೊಳೆಗಳು ತುಂಬಿ ಹರಿದವು. ಚಂದನಕೇರಾ ಗ್ರಾಮದ ಅಗಸಿಯಲ್ಲಿಯೇ ಮಳೆ ನೀರು ಪ್ರವಾಹದೋಪಾದಿಯಲ್ಲಿ ಹರಿದು ಜನರಲ್ಲಿ ಆತಂಕ ಉಂಟುಮಾಡಿತ್ತು.

ತಾಲ್ಲೂಕಿನ ಜನರ ಬೆನ್ನೆಲುಬಾಗಿರುವ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯಕ್ಕೆ ಒಳ ಹರಿವು ಹೆಚ್ಚಿದೆ. ತಾಲ್ಲೂಕಿನ ಚಂದನಕೇರಾ ಹಾಗೂ ಐನಾಪುರ ಮತ್ತು ಕಮಲಾಪುರ ತಾಲ್ಲೂಕಿನ ಚೇಂಗಟಾ, ಮರಗುತ್ತಿ ಮತ್ತು ಸೊಂತ ಸುತ್ತಲೂ ಭಾರಿ ಮಳೆಯಾಗಿದ್ದರಿಂದ ಮುಲ್ಲಾಮಾರಿ ನದಿ ಮೈದುಂಬಿ ಹರಿಯುತ್ತಿದೆ.

ತಾಲ್ಲೂಕಿನ ಕೊಟಗಾ ಬಳಿ ಮುಲ್ಲಾಮಾರಿಗೆ ನಿರ್ಮಿಸಿದ ಬಾಂದಾರು ಸೇತುವೆಯ ಕೆಳಮಟ್ಟದ ಗೇಟುಗಳನ್ನು ಹಾಕಲಾಗಿದೆ. ಇದರಿಂದ ಬಾಂದಾರಿನಲ್ಲಿ ತುಂಬಿ ಹರಿಯುತ್ತಿರುವುದು ಕಾಣಿಸಿತು. ಗ್ರಾಮದ ಹಲವಾರು ಯುವಕರು ಬಾಂದಾರು ಬಳಿ ತೆರಳಿ ನೀರನ್ನು ವೀಕ್ಷಿಸಿ ಖುಷಿಪಟ್ಟರು ಎಂದು ಗೌಡಪ್ಪ ಪಾಟೀಲ ತಿಳಿಸಿದ್ದಾರೆ.

10 ಗಂಟೆಯಲ್ಲಿ 12 ಇಂಚು ನೀರು: ನಾಗರಾಳ ಜಲಾಶಯಕ್ಕೆ ಬೆಳಿಗ್ಗೆ 8 ಗಂಟೆಯಿಂದ ಒಳ ಹರಿವು ಹೆಚ್ಚಾಗಿದೆ. ಜಲಾಶಯಕ್ಕೆ 10 ತಾಸಿನಲ್ಲಿ 12 ಇಂಚು (ಒಂದು ಅಡಿ) ನೀರು ಬಂದಿದೆ. ಸದ್ಯ ಒಳ ಹರಿವು 500 ಕ್ಯೂಸೆಕ್‌ಗಿಂತಲೂ ಜಾಸ್ತಿ ಇದೆ.

‘ಜಲಾಶಯದಲ್ಲಿ ಶನಿವಾರ ನೀರಿನ ಮಟ್ಟ 489.64 ಮೀಟರ್‌ ದಾಖಲಾಗಿತ್ತು. ಭಾನುವಾರ ಸಂಜೆಗೆ ನೀರಿನ ಮಟ್ಟ 490 ಮೀಟರ್‌ಗೆ ತಲುಪಿದೆ. ಜಲಾಶಯದ ನೀರಿನ ಗರಿಷ್ಠ ಮಟ್ಟ 491 ಮೀಟರ್‌ ಇದೆ’ ಎಂದು ಜಲಾಶಯದ ಸಹಾಯಕ ಎಂಜಿನಿಯರ್‌ ಹಣಮಂತ ತಿಳಿಸಿದರು.

‘ಜಲಾಶಯದ ಮೇಲ್ಭಾಗದಲ್ಲಿ ಮತ್ತಷ್ಟು ಮಳೆಯಾದರೆ ಯಾವುದೇ ಕ್ಷಣದಲ್ಲಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಮುಲ್ಲಾಮಾರಿ ನದಿಗೆ ಬಿಡಲಾಗುತ್ತದೆ. ನದಿ ದಂಡೆಯ ಗ್ರಾಮಗಳ ಜನರು ನದಿಗೆ ಇಳಿಯುವಾಗ ಮತ್ತು ದನ ಕರುಗಳನ್ನು ಬಿಡುವಾಗ ಎಚ್ಚರಿಕೆ ವಹಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಹೊಳೆಯಂತೆ ಗೋಚರಿಸಿದ ರಸ್ತೆ: ಮಳೆಯಿಂದ ಐನಾಪುರ ಗ್ರಾಮದ ಪ್ರವೇಶದಲ್ಲಿರುವ ಅಗಸಿ ನಾಲಾ ಮೈದುಂಬಿ ಹರಿದಿದೆ. ಈ ನಾಲಾ ಪ್ರಸಕ್ತ ವರ್ಷ ಮಳೆಗಾಲದಲ್ಲಿಯೇ ಮೊದಲ ಬಾರಿಗೆ ಮೈದುಂಬಿಕೊಂಡಿದೆ. ತಾಲ್ಲೂಕಿನ ಚಂದನಕೇರಾ ಗ್ರಾಮದ ಅಗಸಿಯಲ್ಲಿ ಸಿಮೆಂಟ್‌ ಕಾಂಕ್ರೀಟ್‌ ರಸ್ತೆಯಲ್ಲಿ ಒಂದು ಅಡಿಗಿಂತಲೂ ಎತ್ತರದಲ್ಲಿದೆ ಹರಿದಿದೆ ಎಂದು ಗ್ರಾಮದ ಮುಖಂಡ ಬಾಬುರಾವ್‌ ಭೂಂಯಾರ್‌ ತಿಳಿಸಿದ್ದಾರೆ.

ಸಣ್ಣ ನೀರಾವರಿ ಕೆರೆಗಳಿಗೂ ಶುಕ್ರದೆಸೆ: ‘ತಾಲ್ಲೂಕಿನ ಹೂಡದಳ್ಳಿ, ಮುಕರಂಬಾ, ತುಮಕುಂಟಾ, ಚಂದನಕೇರಾ, ಕೆರೆಗಳು ಭರ್ತಿ ಅಂಚಿಗೆ ತಲುಪಿವೆ. ಐನಾಪುರ ಹಳೆ ಮತ್ತು ಹೊಸ ಕೆರೆ, ಚಿಕ್ಕಲಿಂಗದಳ್ಳಿ, ನಾಗಾಈದಲಾಯಿ, ಹುಲ್ಸಗೂಡ, ಹಸರಗುಂಡಗಿ, ಕೆರೆಗಳಿಗೂ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದಿದೆ’ ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶಿವಶರಣಪ್ಪ ಕೇಶ್ವಾರ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು