ಶನಿವಾರ, ಸೆಪ್ಟೆಂಬರ್ 19, 2020
27 °C
ಇಡೀ ರಾತ್ರಿ ಸುರಿದ ವರ್ಷಧಾರೆ; ಕಮಲಾಪುರದಲ್ಲಿ 72 ಮಿಲಿ ಮೀಟರ್ ಮಳೆ

ಭಾರಿ ಮಳೆಗೆ ತತ್ತರಿಸಿದ ಕಲಬುರ್ಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನ ಜಾವ ಸುರಿದ ಮಳೆಗೆ ನಗರವು ತತ್ತರಿಸಿದ್ದು, ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿತ್ತು. ಬಿರುಸಾಗಿ ಸುರಿದ ಮಳೆ ಮನೆಗಳನ್ನು ನಡುಗಡ್ಡೆಯನ್ನಾಗಿಸಿತ್ತು. ಕಮಲಾಪುರ ತಾಲ್ಲೂಕಿನಲ್ಲಿ ಅತ್ಯಧಿಕ 72 ಮಿಲಿ ಮೀಟರ್ ಮಳೆಯಾಗಿದ್ದು, ಕಲಬುರ್ಗಿ ನಗರದಲ್ಲಿ 54 ಮಿಲಿ ಮೀಟರ್‌ ಮಳೆ ದಾಖಲಾಗಿದೆ.

ಕಲಬುರ್ಗಿಯ ನಗರದ ಅತ್ತರ ಕೌಂಪೌಂಡ್ ಬಳಿಯ ಸಿದ್ದೇಶ್ವರ ನಗರದಲ್ಲಿ ಇಂದು ನಸುಕಿನ ಜಾವ ಮನೆಯೊಂದು ಕುಸಿದು ಬಿದ್ದು ಮೂವರಿಗೆ ಗಾಯಗಳಾಗಿವೆ.

ಕುಸನೂರ ರಸ್ತೆಯಲ್ಲಿ ಇರುವ ಪೂಜಾ ಕಾಲೊನಿ, ಶಹಾಬಾದ‌ ರಸ್ತೆ ಕೆಲ ಕಾಲೊನಿಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಗಂಗಾ ನಗರ ಕಣಿ ಪ್ರದೇಶದ ಕೆಳ ಭಾಗದ‌ ಮನೆಗಳಿಗೆ ನೀರು ನುಗ್ಗಿದೆ. ಪೂಜಾ ಕಾಲೊನಿಯ ಶಿಕ್ಷಕ‌ ಭೀಮಸಿಂಗ್ ರಾಠೋಡ ಅವರ ಮನೆಗೆ ನೀರು ನುಗ್ಗಿ ವಸ್ತುಗಳು ಹಾಳಾಗಿ ಹೋಗಿವೆ.

ಸೇಡಂ ರಸ್ತೆ, ಕೇಂದ್ರ ಬಸ್ ನಿಲ್ದಾಣ, ಜೇವರ್ಗಿ ಕ್ರಾಸ್ ಬಳಿಯ ವಾಣಿಜ್ಯ ಸಂಕೀರ್ಣಕ್ಕೆ ನೀರು ನುಗ್ಗಿದೆ.

ಬೆಳಿಗ್ಗೆ ಬಿಡುವು ಕೊಟ್ಟಿತು ಎನ್ನುವಷ್ಟರಲ್ಲಿ ಮತ್ತೆ ಸುಮಾರು ಅರ್ಧಗಂಟೆ ಜಿಟಿಜಿಟಿ ಮಳೆ ಸುರಿಯಿತು. ಇದರಿಂದಾಗಿ ಮಾರುಕಟ್ಟೆಯಲ್ಲಿ ವಹಿವಾಟು ಅಸ್ತವ್ಯಸ್ತವಾಯಿತು. ಇದೇ 17ರಂದು ನಡೆಯುವ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ನಗರದ ವೃತ್ತಗಳು, ಸರ್ಕಾರಿ ಕಟ್ಟಡಗಳಿಗೆ ವಿದ್ಯುತ್ ಅಲಂಕಾರ ನಡೆಯುತ್ತಿದ್ದು, ಕಾರ್ಮಿಕರು ಮಳೆಯಲ್ಲಿ ನೆನೆಯುತ್ತಲೇ ಕೆಲಸ ಮುಂದುವರಿಸಿದರು.

ಇಬ್ಬರ ರಕ್ಷಣೆ: ತಾಲ್ಲೂಕಿನ ಹಾಗರಗಾ–ಖಾಜಾ ಕೋಟನೂರ ಗ್ರಾಮಗಳ ಮಧ್ಯದಲ್ಲಿರುವ ಹಳ್ಳ ಸತತ ಮಳೆಗೆ ಉಕ್ಕಿ ಹರಿದಿದ್ದರಿಂದ ಹಳ್ಳದ ಪಕ್ಕದ ದನದ ಕೊಟ್ಟಿಗೆಯಲ್ಲಿದ್ದ ರುದ್ರಪ್ಪ ಹಾಗೂ ರಾಜು ಬಟ್ಟು ಯಾದವ್ ಅವರನ್ನು ಅಗ್ನಿಶಾಮಕ ಅಧಿಕಾರಿ ಟಿ. ಪರಶುರಾಮ ಹಾಗೂ ತಂಡದವರು ಬೋಟ್ ಬಳಸಿ ರಕ್ಷಿಸಿದರು.

ಸಹಾಯಕ ಅಗ್ನಿಶಾಮಕ ಅಧಿಕಾರಿ ಮಚ್ಚೇಂದ್ರನಾಥ, ಸಿಬ್ಬಂದಿಯಾದ ವಿಠ್ಠಲ, ಗಬ್ಬರ್ ಸಿಂಗ್, ಪ್ರಕಾಶ್, ಮೊಹಮ್ಮದ್ ಖಲೀಲ್, ಶೇಖ್ ಜಿಲಾನಿ, ಬಸವರಾಜ, ಪ್ರಮೋದ ಬೆಳ್ಳಂಡಗಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಕಾಗಿಣಾ ಪ್ರವಾಹ: ಸೇತುವೆ ಮುಳುಗಡೆ

ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದ ಹತ್ತಿರ ಕಾಗಿಣಾ ನದಿಗೆ ಕಟ್ಟಿರುವ ಸೇತುವೆ ಮಂಗಳವಾರ ರಾತ್ರಿ ಪ್ರವಾಹದಲ್ಲಿ ಮುಳುಗಡೆಯಾಗಿದೆ.

ಸತತ ಮಳೆ ಹಾಗೂ ಬೆಣ್ಣೆತೊರಾ, ನಾಗರಾಳ, ಮುಲ್ಲಾಮಾರಿ ಜಲಾಶಯಗಳಿಂದ ನೀರು ಹೊರಕ್ಕೆ ಬಿಟ್ಟಿದ್ದರಿಂದ ಕಾಗಿಣಾ ನದಿಯು ಪ್ರವಾಹದಿಂದ ಉಕ್ಕಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ರಾತ್ರಿ ಸೇತುವೆಯ ಮೇಲೆ ನೀರು ಬಂದು ಈ ಮಾರ್ಗದ ಸಾರಿಗೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಮುಂಜಾಗ್ರತಾ ಕ್ರಮವಾಗಿ ಯಾವ ವಾಹನವೂ ನದಿಯತ್ತ ಹೋಗದಂತೆ ತಡೆಯಲು ಚಿತ್ತಾಪುರ ಮತ್ತು ಮಾಡಬೂಳ ಪೊಲೀಸರು ನಿಗಾ ವಹಿಸುವಂತೆ ಸೂಚಿಸಲಾಗಿದೆ ಎಂದು ಚಿತ್ತಾಪುರ ತಹಶೀಲ್ದಾರ್ ಉಮಾಕಾಂತ ಹಳ್ಳೆ ತಿಳಿಸಿದ್ದಾರೆ.

ಮಳಖೇಡ ಸೇತುವೆ ಮೇಲಿನ ಸಂಚಾರ ಬಂದ್: ನಗರದಿಂದ ಸೇಡಂ, ಗುರುಮಠಕಲ್ ಕಡೆಗೆ ತೆರಳುವ ಮಾರ್ಗದಲ್ಲಿ ಬರುವ ಮಳಖೇಡ ಸೇತುವೆಯನ್ನು ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ರಾತ್ರಿ ಬಂದ್ ಮಾಡಲಾಗಿದೆ.

ಜಿಲ್ಲೆಯಾದ್ಯಂತ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನ ಜಾವದವರೆಗೆ ಭಾರಿ ಮಳೆಯಾಗಿದ್ದರಿಂದ ಮಳಖೇಡ ಬಳಿ ಹರಿಯುವ ಕಾಗಿಣಾ ನದಿ ತುಂಬಿ ಹರಿಯುತ್ತಿದೆ. ಯಾವುದೇ ಕ್ಷಣದಲ್ಲಿ ನೀರು ಸೇತುವೆ ಮೇಲೆ ಬರುವ ಸಂಭವವಿದೆ. ಹೀಗಾಗಿ ಸೇತುವೆಯ ಮೇಲಿನಿಂದ ಸಾರ್ವಜನಿಕ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು‌ ಮಳಖೇಡ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು