ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ| ಸಮೀಪಿಸುತ್ತಿದೆ ಮುಂಗಾರು: ಸಮಸ್ಯೆಗಳು ನೂರು

ಇನ್ನೂ ಕೆಲ ಕಡೆಗಿಲ್ಲ ಸಮರ್ಪಕ ಚರಂಡಿ, ಸಿ.ಸಿ.ರಸ್ತೆ ವ್ಯವಸ್ಥೆ: ರಸ್ತೆಗಳ ಮೇಲೆ ನಿಲ್ಲುವ ಚರಂಡಿ ಕೊಳಚೆ
Published 22 ಮೇ 2023, 23:38 IST
Last Updated 22 ಮೇ 2023, 23:38 IST
ಅಕ್ಷರ ಗಾತ್ರ

ಭೀಮಣ್ಣ ಬಾಲಯ್ಯ

ಕಲಬುರಗಿ: ಮಳೆಗಾಲ ಸಮೀಪಿಸುತ್ತಿದ್ದು, ಚರಂಡಿಗಳು ಪಥ ಬದಲಿಸಿ ಮನೆಗಳಿಗೆ ನುಗ್ಗುವುದರಿಂದ ನಗರದ ಕೆಲ ಬಡಾವಣೆಗಳು, ಕೊಳೆಗೇರಿ ಪ್ರದೇಶಗಳು ಹಾಗೂ ಅಲೆಮಾರಿ ಸಮುದಾಯಗಳ ಜನರು ಆತಂಕಗೊಂಡಿದ್ದಾರೆ.

ಮಾಂಗರವಾಡಿ, ಗುಲ್ಲಾಬಾವಡಿ, ರಾಜಾಪುರ, ವಿಜಯನಗರ, ಹೀರಾನಗರ, ಬಸವನಗರ ಹಾಗೂ ಕುಷ್ಠರೋಗಿಗಳ ಕಾಲೊನಿಗಳ ಜನರಿಗೆ ಪ್ರತಿ ಮಳೆಗಾಲ ಆತಂಕ ಹೊತ್ತು ತರುತ್ತದೆ.

ಈ ಪ್ರದೇಶಗಳಲ್ಲಿ ಕೆಲ ಕಡೆ ಚರಂಡಿ ಹಾಗೂ ಸಿ.ಸಿ. ರಸ್ತೆ ಸೌಲಭ್ಯವಿಲ್ಲ. ಮಳೆಗಾಲದಲ್ಲಿ ಚರಂಡಿಯಲ್ಲಿನ ಕೊಳಚೆ ರಸ್ತೆಗೆ ಬಂದು ಜನರನ್ನು ಗೋಳಿನ ದವಡೆಗೆ ತಳ್ಳುತ್ತದೆ. ನಿರಂತರ ನೀರು ಪೂರೈಕೆ ಯೋಜನೆ ಕಾಮಗಾರಿಗೆ ರಸ್ತೆಗಳನ್ನು ಅಗೆಯಲಾಗಿದ್ದು, ಅದನ್ನು ಮುಚ್ಚುವ ಗೋಜಿಗೆ ಹೋಗಿಲ್ಲ. ಆದ್ದರಿಂದ ಖಾಲಿ ನಿವೇಶನ ಹಾಗೂ ತಗ್ಗು ಪ್ರದೇಶಗಳು ನೀರು ತುಂಬಿಕೊಂಡು ನಿಲ್ಲುತ್ತವೆ. ದುರ್ವಾಸನೆ ಬೀರುತ್ತವೆ.

ಎಸ್‌ಟಿಬಿಟಿ ಕ್ರಾಸ್‌ ಬಳಿ ಇರುವ ಮಾಂಗರವಾಡಿ ಕೊಳೆಗೇರಿ ಪ್ರದೇಶದಲ್ಲಿ ಸುಮಾರು 200 ಮನೆಗಳಿವೆ. ಇಲ್ಲಿ ವಾಸಿಸುವವರಲ್ಲಿ ಬಹುತೇಕರು ದಿನಗೂಲಿ ಕಾರ್ಮಿಕರು. ಸಮರ್ಪಕವಾದ ಚರಂಡಿ ಹಾಗೂ ಸಿ.ಸಿ.ರಸ್ತೆ ನೋಡಲೂ ಸಿಗುವುದಿಲ್ಲ. ಮಳೆಗಾಲದಲ್ಲಿ ಇಲ್ಲಿನ ಮನೆಗಳ ಮುಂದಿನ ಆವರಣ ಚರಂಡಿ ನೀರಿನಿಂದ ಆವೃತವಾಗುತ್ತದೆ. ಕುಡಿಯುವ ನೀರಿನ ಪೈಪ್‌ಗಳು ಅಲ್ಲಿಯೇ ಇರುವುದರಿಂದ ಅದಕ್ಕೆ ಕೊಳಚೆ ನೀರು ಸೇರಿದ ಉದಾಹರಣೆಯೂ ಇದೆ.

ಮಕ್ಕಳು ಹಾಗೂ ಹಿರಿಯ ನಾಗರಿಕರು ಮಳೆ ಹಾಗೂ ಕೊಳಚೆ ನೀರಿನಲ್ಲಿಯೇ ನಡೆದುಕೊಂಡು ಹೋಗಬೇಕು. ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಭೀತಿಯೂ ಎದುರಾಗುತ್ತದೆ.

‘ತೆಗೆದ ಹೂಳನ್ನು ಚರಂಡಿ ಮೇಲೆ ಹಾಕಲಾಗುತ್ತದೆ. ಅದು ದುರ್ವಾಸನೆ ಬೀರುತ್ತದೆ. ಮಳೆ ಬಂದಾಗ ಮತ್ತೆ ಚರಂಡಿ ಸೇರಿ ಕಟ್ಟಿಕೊಂಡು ಕೊಳಚೆ ಮೇಲೆ ಬರುತ್ತದೆ ಎಂದು ನಿವಾಸಿಗಳು ದೂರುತ್ತಾರೆ.

ಐವಾನ್‌ ಇ ಶಾಹಿ ರಸ್ತೆ ಬದಿಯಲ್ಲಿರುವ ಗುಲ್ಲಾಬಾವಡಿಯಲ್ಲಿ 500ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಇಲ್ಲಿ ದುಡಿಯುವ ವರ್ಗದವರ ಸಂಖ್ಯೆಯೇ ಹೆಚ್ಚು.

ಇಲ್ಲಿಯ ಹೂಳು ತುಂಬಿದ ಚರಂಡಿಗಳು ಹಾಗೂ ತಗ್ಗು ಪ್ರದೇಶಗಳೇ ಸಮಸ್ಯೆಯ ಮೂಲ. ಮಳೆಗಾಲದಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹ ವಾಗುತ್ತದೆ. ತಗ್ಗಿನಲ್ಲಿರುವ ಮನೆಗಳಿಗೆ ಚರಂಡಿ ನೀರು ನುಗ್ಗುತ್ತದೆ.

ಮಹಾತ್ಮ ಗಾಂಧಿ ಕುಷ್ಠರೋಗಿಗಳ ಕಾಲೊನಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಜನರು ವಾಸಿಸುತ್ತಾರೆ. ಮಳೆಬಂದಾಗ ಕಾಲೊನಿಯ ಕೆಲ ಕಡೆ ಸಮಸ್ಯೆಗಳು ಎದುರಾಗುತ್ತವೆ. ರಾಜಾಪುರ, ವಿಜಯನಗರ, ಹೀರಾನಗರ ಹಾಗೂ ಬಸವನಗರಗಳಲ್ಲಿಯೂ ಜನರು ಇದೇ ಸಮಸ್ಯೆಗಳನ್ನು ಎದು ರಿಸುತ್ತಿದ್ದಾರೆ.

ಜಗತ್‌ ವೃತ್ತದ ಬಳಿಯ ರಾಜಕಾಲುವೆಯ ಹೂಳನ್ನು ನಿಯಮಿತವಾಗಿ ತೆಗೆಯಬೇಕು ಎನ್ನುವುದು ಜನರ ಒತ್ತಾಯ.

ನಗರ ಹೊರವಲಯದ ಶಹಾಬಾದ್‌ ರಸ್ತೆಯಲ್ಲಿ ಬುಡ್ಗ ಜಂಗಮ ಅಲೆಮಾರಿ ಸಮುದಾಯಕ್ಕೆ ಸೇರಿದ 400 ಕುಟುಂಬಗಳು ನೆಲೆಸಿವೆ. ಇಲ್ಲಿನ ಜನರು ಪ್ಲಾಸ್ಟಿಕ್ ಬಿಂದಿಗೆ, ಸಾಬೂನು ಮಾರಾಟ, ಚಿಂದಿ ಆಯುವುದು ಹಾಗೂ ಕೂಲಿ ಕೆಲಸ ಮಾಡುತ್ತಾರೆ.

ಮಳೆಗಾಲದಲ್ಲಿ ಈ ಪ್ರದೇಶ ಕೆಸರು ಗದ್ದೆಯಂತಾಗುತ್ತದೆ. ಜೋಪಡಿಗಳಿಗೆ ನೀರು ನುಗ್ಗುತ್ತದೆ. ಆಗ ಇಲ್ಲಿಯ ನಿವಾಸಿಗಳು ಜೋಪಡಿಗಳನ್ನು ಕಿತ್ತು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಾಕುತ್ತಾರೆ. ಇಲ್ಲಿಯ ಕೆಲ ಜೋಪಡಿಗಳಿಗೆ ವಿದ್ಯುತ್ ಸಂಪರ್ಕ ಇಲ್ಲ. ರಾತ್ರಿಯಾಗುತ್ತಿದ್ದಂತೆ ಕತ್ತಲೆ ಆವರಿಸುತ್ತದೆ. ವಿಷಜಂತುಗಳ ಭೀತಿ ಎದುರಾಗುತ್ತದೆ.

ಮಳೆಗಾಲಕ್ಕೂ ಮುನ್ನ ಸಮಸ್ಯೆಗಳನ್ನು ಬಗೆಹರಿಸಬೇಕು. ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜನ ಒತ್ತಾಯಿಸುತ್ತಾರೆ.

ಹುಸೇನಪ್ಪ
ಹುಸೇನಪ್ಪ
ಅಲ್ಲಮಪ್ರಭು ನಿಂಬರ್ಗಾ
ಅಲ್ಲಮಪ್ರಭು ನಿಂಬರ್ಗಾ
ವಿಶಾಲ ದರ್ಗಿ
ವಿಶಾಲ ದರ್ಗಿ

ಮಳೆಗಾಲದಲ್ಲಿ ಜೀವನ ಕಷ್ಟವಾಗುತ್ತದೆ. ಕೆಸರಿನಲ್ಲಿಯೇ ಬದುಕಿನ ಬಂಡಿ ಎಳೆಯಬೇಕಾದ ಸ್ಥಿತಿ ಎದುರಾಗುತ್ತದೆ. ಮಳೆಗಾಲಕ್ಕೂ ಮುನ್ನ ಸಮಸ್ಯೆ ಬಗೆಹರಿಸಬೇಕು.

-ಹುಸೇನಪ್ಪ ಅಲೆಮಾರಿ ಸಮುದಾಯದ ಮುಖಂಡ

ಮಳೆಗಾಲದಲ್ಲಿ ಸಮಸ್ಯೆ ಉಂಟಾಗುವ ಕೊಳೆಗೇರಿ ಪ್ರದೇಶಗಳನ್ನು ಗುರುತಿಸಿ ಚರಂಡಿಯಲ್ಲಿಯ ಹೂಳು ತೆಗೆಯಬೇಕು. ಮಣ್ಣು ಹಾಕಿ ತಗ್ಗು ಪ್ರದೇಶಗಳನ್ನು ಎತ್ತರಿಸಬೇಕು.

- ಅಲ್ಲಮಪ್ರಭು ನಿಂಬರ್ಗಾ ಸ್ಲಂ ಜನಾಂದೋಲನ ಸಮಿತಿ

ಇನ್ನೂ ಎರಡು ದಿನಗಳಲ್ಲಿ ಅಧಿಕಾರಿಗಳ ಹಾಗೂ ಸದಸ್ಯರ ಸಭೆ ಕರೆದು ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಮಾಡಿಕೊಳ್ಳಬೇಕಾದ ಸಿದ್ಧತೆಗಳ ಕುರಿತು ಚರ್ಚಿಸಲಾಗುವುದು.

-ವಿಶಾಲ ದರ್ಗಿ ಮೇಯರ್‌ ಮಹಾನಗರ ಪಾಲಿಕೆ

ಸಿದ್ಧತೆಗೆ ಬೇಕು ವೇಗ ಮಳೆಗಾಲ ಸಮೀಪಿಸುತ್ತಿದ್ದು ಅದನ್ನು ಎದುರಿಸಲು ಮಹಾನಗರ ಪಾಲಿಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ಸಿದ್ಧತಾ ಕಾರ್ಯಗಳು ಆಮೆಗತಿಯಲ್ಲಿ ನಡೆಯುತ್ತಿವೆ. ಚರಂಡಿ ಹಾಗೂ ರಾಜಕಾಲುವೆಯ ಹೂಳು ತೆಗೆದು ಸಿಮೆಂಟ್‌ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಎರಡು ತಂಡಗಳು ಕೆಲಸ ಮಾಡುತ್ತಿವೆ. ಮಳೆಗಾಲದ ಹೊತ್ತಿಗೆ ಕೆಲಸ ಮುಗಿಸಬೇಕಾದ ಸವಾಲು ಎದುರಾಗಿದೆ. ಹೀರಾಪುರ ಬಳಿಯ ರಾಜಕಾಲುವೆಗಿಲ್ಲ ಗೋಡೆ: ನಗರದ ಹೀರಾಪುರದ ಮಸೀದಿ ಬಳಿ ಹಾದು ಹೋಗುವ ರಾಜಕಾಲುವೆಗೆ ಸಿಮೆಂಟ್ ಗೋಡೆ ನಿರ್ಮಿಸಿಲ್ಲ. ಹೂಳು ತುಂಬಿರುವುದರಿಂದ ಅಲ್ಲಿಯೂ ನೀರು ನುಗ್ಗುವ ಭೀತಿ ಇದೆ. ಸಿಮೆಂಟ್‌ ಗೋಡೆ ನಿರ್ಮಿಸಬೇಕು ಎಂದು ಇಲ್ಲಿನ ನಿವಾಸಿಗಳು ಒತ್ತಾಯಿಸುತ್ತಾರೆ. ಈ ರಾಜಕಾಲುವೆ ಬಸವನಗರ ಬಳಿಯೂ ಹರಿಯುತ್ತದೆ. ಅಲ್ಲಿ ಚರಂಡಿ ನೀರು ಮಳೆ ನೀರಿನ ಜತೆ ಸೇರಿ ಬಡಾವಣೆಯ ಖಾಲಿ ನಿವೇಶನಗಳಲ್ಲಿ ನಿಲ್ಲುತ್ತದೆ.

ಕೆಳ ಸೇತುವೆಗಳಿಗೆ ಬೇಕಿದೆ ಕಾಯಕಲ್ಪ ನಗರದ ಅಲ್ಲಲ್ಲಿ ಕೆಳ ಸೇತುವೆಗಳನ್ನು ನಿರ್ಮಿಸಲಾಗಿದೆ. ಅಲ್ಲಿಯ ರಸ್ತೆಗಳು ಕಿತ್ತು ಹೋಗಿವೆ. ಗುಂಡಿಗಳು ನಿರ್ಮಾಣವಾಗಿದ್ದು ಮಳೆಗಾಲದಲ್ಲಿ ನೀರು ನಿಲ್ಲುತ್ತದೆ. ಆಗ ಜನರಿಗೆ ಸಂಚಾರಕ್ಕೆ ತೊಂದರೆಯಾಗುತ್ತದೆ. ಕೆಲವರು ವಾಹನಗಳಿಂದ ಬಿದ್ದು ಗಾಯ ಮಾಡಿಕೊಂಡ ಉದಾಹರಣೆಗಳೂ ಇವೆ. ಕೆಲ ಕಡೆ ಕೆಳ ಸೇತುವೆಗಳು ಕೊಳಚೆ ನೀರು ತುಂಬಿಕೊಂಡು ಉಪಯೋಗಕ್ಕೆ ಬಾರದಂತಾಗಿವೆ. ಗೋದುತಾಯಿ ನಗರದ ಬಳಿಯ ಸೇತುವೆ ಸಾಂಕ್ರಾಮಿಕ ರೋಗಗಳ ಉತ್ಪತ್ತಿ ತಾಣವಾಗಿ ಪರಿವರ್ತನೆಯಾಗಿದೆ. ಇಲ್ಲಿನ ನಿವಾಸಿಗಳು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಬಸವನಗರ ಬಳಿ ಇರುವ ರೈಲ್ವೆ ಕೆಳ ಸೇತುವೆಯಲ್ಲಿ ಮಳೆಗಾಲದಲ್ಲಿ ಮೊಳಕಾಲುದ್ದ ನೀರು ನಿಲ್ಲುತ್ತದೆ. ಈ ಸೇತುವೆ‌ಯ ಮುಂದೆ ಎತ್ತರದ ಪ್ರದೇಶ ಇರುವುದರಿಂದ ನೀರು ಸರಾಗವಾಗಿ ಹರಿಯುವುದಿಲ್ಲ. ಸೇತುವೆಯ ರಸ್ತೆಯಲ್ಲಿ ಗುಂಡಿಗಳಿರುವುದರಿಂದ ಮಳೆಗಾಲದಲ್ಲಿ ಇಲ್ಲಿ ಸಂಚಾರ ಜಟಿಲವಾಗುತ್ತದೆ. ಆದ್ದರಿಂದ ಸಂಬಂಧಿಸಿದವರು ನಗರದ ಕೆಳ ಸೇತುವೆಗಳಿ ಗೆ ಕಾಯಕಲ್ಪ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT