ಶನಿವಾರ, ಡಿಸೆಂಬರ್ 7, 2019
25 °C

ಬಾಡುತ್ತಿದ್ದ ಬೆಳೆಗೆ ಜೀವಕಳೆ ತಂದ ಮಳೆ

ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಎರಡು ದಿನ ಸುರಿದ ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶದ ಪ್ರಮಾಣ ಹೆಚ್ಚಾಗಿದೆ. ಬಾಡುತ್ತಿದ್ದ ಬೆಳೆಗೆ ಮಳೆ ಜೀವಕಳೆ ತುಂಬಿದೆ.

ಜಿಲ್ಲೆಯಲ್ಲಿ ಜೂನ್‌ ತಿಂಗಳಲ್ಲಿ ಉತ್ತಮ ಮಳೆಯಾಗಿತ್ತು. ಹೀಗಾಗಿ ರೈತರು ಹೆಸರು, ಸೋಯಾ, ಉದ್ದು, ತೊಗರಿ ಬಿತ್ತನೆ ಮಾಡಿದ್ದರು. ಆದರೆ, ಜುಲೈ ತಿಂಗಳು ಹಾಗೂ ಆಗಸ್ಟ್‌ ಮೊದಲ ಎರಡು ವಾರ ಮಳೆ ಆಗಲೇ ಇಲ್ಲ.

ಹೆಸರು ಬೆಳೆ ರಾಶಿಗೆ ಬಂದಿದ್ದು, ಅಲ್ಲಲ್ಲಿ ರಾಶಿಯೂ ನಡೆಯುತ್ತಿದೆ. ಆದರೆ ಸೋಯಾ, ಎಳ್ಳು ಮತ್ತು ಉದ್ದಿನ ಬೆಳೆಗೆ ತೇವಾಂಶದ ಕೊರತೆ ತೀವ್ರವಾಗಿ ಕಾಡಿತ್ತು. ಕೆಲವೆಡೆ ಬೆಳೆ ಒಣಗಿದ್ದು, ಈಗ ಮಳೆಯಾದರೂ ಅದು ಚೇತರಿಸಿಕೊಳ್ಳುವುದಿಲ್ಲ ಎಂದು ರೈತರು ಹೇಳುತ್ತಿದ್ದಾರೆ.

ಜೂನ್‌ ತಿಂಗಳಲ್ಲಿ ಮಳೆಯಾಗಿದ್ದರಿಂದ ರೈತರು ಹೇಗೂ ಮಳೆ ಬಂದೇ ಬರುತ್ತದೆ ಎಂಬ ವಿಶ್ವಾಸದಿಂದ ಬಿತ್ತನೆ ಮಾಡಿದ್ದರು. ನಿಗದಿತ ಗುರಿಯ ಶೇಕಡ 96 ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ.

ತೊಗರಿಗೆ ಆಸರೆ: ಜಿಲ್ಲೆಯಲ್ಲಿ ಪ್ರತಿ ವರ್ಷ ಸರಾಸರಿ 3.25 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗುತ್ತದೆ. ಹತ್ತಿ ಬಿತ್ತನೆ ಮಾಡುತ್ತಿದ್ದ ರೈತರೂ ಈ ಬಾರಿ ತೊಗರಿ ಬಿತ್ತನೆ ಮಾಡಿದ್ದಾರೆ. ಹೀಗಾಗಿ ಈ ವರ್ಷ 4.40 ಲಕ್ಷ ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆಯಾಗಿದೆ.

‘ಮಳೆ ಹಾಗೂ ತೇವಾಂಶದ ಕೊರತೆಯಿಂದಾಗಿ ತೊಗರಿ ಬೆಳೆಯ ಬೆಳವಣಿಗೆಯಲ್ಲಿ ಕುಂಠಿತಗೊಂಡಿತ್ತು. ಈ ವಾರದಲ್ಲಿ ಮಳೆಯಾಗದಿದ್ದರೆ ಬೆಳೆ ಸಂಪೂರ್ಣ ಬಾಡಿ ಭಾರೀ  ನಷ್ಟ ಸಂಭವಿಸುತ್ತಿತ್ತು. ಈಗ ಸುರಿದ ಮಳೆ ತೊಗರಿ ಬೆಳೆಗೆ ಸಂಜೀವಿನಿಯಂತಾಗಿದೆ’ ಎಂದು ಫರಹತಾಬಾದ್ ರೈತ ಮಲ್ಲೇಶ ಹೇಳುತ್ತಾರೆ.

‘ಈಗ ಮಳೆಯಾಗಿರುವುದು ತೊಗರಿಗೆ ನೆರವಾಗಿದೆ. ಆದರೆ ಈಗಾಗಲೇ ಕೆಲವೆಡೆ ಸೋಯಾ, ಉದ್ದು, ಎಳ್ಳು ಬೆಳೆ ಬಾಡಿ ಹೋಗಿದೆ. ಅದು ಚೇತರಿಸಿಕೊಳ್ಳುವುದು ಕಷ್ಟ’ ಎಂದು ಸೇಡಂ ತಾಲ್ಲೂಕು ಅಡಕಿಯ ರೈತ ಶರಣಪ್ಪ ಹೇಳುತ್ತಾರೆ.

ಶೇಕಡ 60ರಷ್ಟು ಆದ್ರತೆ: ‘ಶುಕ್ರವಾರ ಜಿಲ್ಲೆಯ ಕೆಲವೆಡೆ ಅಲ್ಪ ಮಳೆಯಾಗಿದೆ. ತಂಪು ವಾತಾವರಣ ಇದ್ದು, ಆದ್ರತೆಯ ಪ್ರಮಾಣ ಶೇಕಡ 60ರಷ್ಟಿದೆ’ ಎಂಬುದು ಹವಾಮಾನ ಇಲಾಖೆಯ ಮಾಹಿತಿ.

ಬಿಡುವು ಪಡೆದ ಮಳೆ

ಎರಡು ದಿನ ಬಿಟ್ಟು ಬಿಟ್ಟು ಸುರಿದ ಮಳೆ ಶುಕ್ರವಾರ ಬಿಡುವು ಪಡೆದಿತ್ತು. ಕಲಬುರ್ಗಿಯಲ್ಲಿ ಮಧ್ಯಾಹ್ನ ಸ್ವಲ್ಪ ಹನಿಗಳು ಉದುರಿದವು. ಇಡೀ ದಿನ ಮೋಡ ಮುಸುಕಿದ ವಾತಾವರಣ ಇತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು