ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಗೆ ಕುತ್ತು ತಂದಿಟ್ಟ ಸಮೃದ್ಧಿಯ ‘ವರ್ಷಧಾರೆ’

Last Updated 31 ಜುಲೈ 2022, 6:07 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯಲ್ಲಿ ವರುಣನ ಆರ್ಭಟ ತೀವ್ರಗೊಂಡಿದೆ. ಶನಿವಾರ ಒಂದೇ ದಿನ 224 ಮಿ.ಮೀ. ಮಳೆಯಾಗಿದ್ದು, ನಗರದಲ್ಲಿ ರಸ್ತೆಗಳು ಹಾಗೂ ಗ್ರಾಮೀಣ ಭಾಗದ ಜಮೀನಿನ ಬೆಳೆಗಳು ಜಲಾವೃತವಾದವು.

ಶುಕ್ರವಾರ ತಡರಾತ್ರಿ 11.30ಕ್ಕೆ ಶುರುವಾದ ಮಳೆ ಬೆಳಿಗ್ಗೆ 6ರವರೆಗೆ ಎಡೆಬಿಡದೆ ಸುರಿಯಿತು. ಶನಿವಾರ ಬೆಳಿಗ್ಗೆಯಿಂದ ಬಿಸಿಲಿನ ವಾತಾವರಣ ಇತ್ತು. ಮಧ್ಯಾಹ್ನ 2.10ರ ಬಳಿಕ ಗುಡುಗು ಸಹಿತ ಜೋರಾಗಿ ಆರ್ಭಟಿಸಿದ ವರುಣ ರಾತ್ರಿವರೆಗೂ ಮುಂದುವರೆಯಿತು.

ಒಂದು ದಿನದಲ್ಲಿ ಬಿದ್ದ ವಿಪರೀತ ಮಳೆಯಿಂದ ನಗರದ ಬಹುತೇಕ ರಸ್ತೆಗಳು ನೀರಿನಿಂದ ತುಂಬಿದ್ದವು. ವಾಹನ ಸವಾರರು ಹಾಗೂ ಪಾದಚಾರಿಗಳ ಪರದಾಡಿದರು.

ಕೋರ್ಟ್– ಶರಣಬಸವೇಶ್ವರ ದೇವಸ್ಥಾನದ ರಸ್ತೆಯಲ್ಲಿ ಮೊಳಕಾಲುದ್ದ ನೀರು ನಿಂತು, ಇಡೀ ರಸ್ತೆ ಹೊಳೆಯಂತೆ ಕಾಣಿಸಿತು. ನಗರದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತು. ತಗ್ಗು ಪ್ರದೇಶದ ಮನೆಗಳು, ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಚರಂಡಿಯ ನೀರು ರಸ್ತೆಯ ಮೇಲೆಲ್ಲ ಹರಿದಾಡಿ ಅಲ್ಲಲ್ಲಿ ಪ್ಲಾಸ್ಟಿಕ್‌, ಬಟ್ಟೆ, ಕಟ್ಟಿಗೆಯಂತಹ ತ್ಯಾಜ್ಯವನ್ನು ಹರಡಿತು. ಕೆಲವು
ಕಡೆ ಶಾರ್ಟ್‌ ಸರ್ಕಿಟ್‌ನಿಂದ ವಿದ್ಯುತ್ ಪೂರೈಕೆಯು ತಾತ್ಕಾಲಿಕವಾಗಿ ಸ್ಥಗಿತ ವಾಯಿತು. ಸತತ
ಮಳೆಯಿಂದಾಗಿ ಮಣ್ಣಲ್ಲಿ ತೇವಾಂಶ ಹೆಚ್ಚಾಗಿ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಜುಲೈ ಆರಂಭದಲ್ಲಿ ಎಡೆಬಿಡದೆ ಬಿದ್ದ ಮಳೆಗೆ ತೊಗರಿ, ಸೋಯಾ, ಹತ್ತಿ ಬೆಳೆಗಳು
ಒಣಗಿದವು. ಮರು ಬಿತ್ತನೆ ಮಾಡಿದ ಬೆಳೆಗಳು ಮತ್ತೆ ಮಳೆಗೆ ಸಿಲುಕಿ ಮಣ್ಣು ಪಾಲಾಗುವ ಆತಂಕ ರೈತರನ್ನು ಕಾಡುತ್ತಿದೆ.

‘ಸತತ ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಬೆಳೆಗಿಂತ ಹುಲ್ಲಿನ ಕಳೆ ಕೀಳಲು ಹೆಚ್ಚು ವೆಚ್ಚ ಮಾಡಬೇಕಾದ ಪರಿಸ್ಥಿತಿ ಇದೆ. ಜಮೀನಿನ ತಗ್ಗು ಪ್ರದೇಶದಲ್ಲಿ ನೀರು ನಿಂತು ಇಡೀ ಹೊಲ ಕೆರೆಯಂತೆ ಭಾಸವಾಗುತ್ತಿದೆ. ಹೂವಾಡುವ ಹಂತದಲ್ಲಿ ಇರುವ ಹೆಸರು,
ಉದ್ದಿನ ಬೆಳೆಗಳ ಮೊಗ್ಗುಗಳು ಉದುರುತ್ತಿವೆ. ನೆಲಕ್ಕೆ ಸಮೃದ್ಧಿಯಾಗುವಷ್ಟು ಮಳೆ ಬಿದ್ದರೂ ಬೆಳೆ ಮಣ್ಣು ಪಾಲಾಗುತ್ತಿದೆ’ ಎನ್ನುತ್ತಾರೆ ಕೃಷಿಕ ಮನೋಹರ.

ಎಲ್ಲೆಲ್ಲಿ ಎಷ್ಟು ಮಳೆ?: ಜುಲೈ 29ರ ಮಧ್ಯರಾತ್ರಿ ಮತ್ತು ಜುಲೈ 31ರ ನಡುವೆ ಕಲಬುರಗಿ ನಗರ 224 ಮಿ.ಮೀ. ಅಫಜಲಪುರದ ಬಳೂರ್ಗಿಯಲ್ಲಿ 125 ಮಿ.ಮೀ, ಬಿದನೂರು 112, ಚೌಡಾಪುರ 99, ಚಿತ್ತಾಪುರ ಪಟ್ಟಣ 138, ವಾಡಿ 106, ಶಹಾಬಾದ್ 94, ಜೇವರ್ಗಿಯ ಮದ್ರಿ 137, ಸೇಡಂನ ಮೋತಕಪಲ್ಲಿ 85, ಚಿಂಚೋಳಿ
37, ಆಳಂದ 37 ಮಿ.ಮೀ. ಮಳೆಯಾಗಿದೆ.

ತುಂಬಿದ ನದಿ, ಹಳ್ಳಗಳ ಒಡಲು

ಭೀಮಾ, ಕಾಗಿಣಾ, ಮುಲ್ಲಾಮಾರಿ, ಬೆಣ್ಣೆತೊರಾ ಸೇರಿದಂತೆ ಹಲವು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ನೆರೆಯ ತಗ್ಗು ಪ್ರದೇಶದ ಜಮೀನು ಹಾಗೂ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ.

ಚಿತ್ತಾಪುರ ತಾಲ್ಲೂಕಿನ ಬಳವಡಗಿ ಗ್ರಾಮದ ಸುಮಾರು 40 ಮನೆಗಳಿಗೆ ಹಳ್ಳದ ನೀರು ನುಗ್ಗಿದೆ. ಶಹಾಬಾದ್‌ನ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಜಲಾವೃತ್ತವಾಯಿತು. ಗೋಳಾ (ಕೆ) ಗ್ರಾಮ ರಸ್ತೆಯ ಸಂಪರ್ಕ ಕಡಿತಗೊಂಡಿತು. ಕಾಳಗಿ ತಾಲ್ಲೂಕಿನ ಟೆಂಗಳಿ ಗ್ರಾಮದ ಸಿದ್ದಣ್ಣ ಗುರಲಿಂಗಪ್ಪ ಅವರಿಗೆ ಸೇರಿದ ಎರಡು ಎತ್ತುಗಳು ಸಿಡಿಲು ಬಡಿದು ಸಾವನ್ನಪ್ಪಿವೆ.

ಶೀಘ್ರವೇ ಬೆಳೆ ಹಾನಿ ಸಮೀಕ್ಷೆ

ಕಳೆದ 2–3 ದಿನಗಳಿಂದ ಯಥೇಚ್ಛವಾಗಿ ಮಳೆ ಸುರಿಯುತ್ತಿದೆ. ತಗ್ಗು ಪ್ರದೇಶದ ಜಮೀನುಗಳಿಗೆ ನೀರು ನಿಂತು ಬೆಳೆಹಾನಿಯಾಗಿದ್ದು ಗಮನಕ್ಕೆ ಬಂದಿದ್ದು ಹಾನಿಯ ಪ್ರಮಾಣವನ್ನು ಶೀಘ್ರವೇ ಸಮೀಕ್ಷೆ ಮಾಡಲಾಗುವುದು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಜಮೀನಿಗಳಲ್ಲಿ ನಿಂತ ಮಳೆ ನೀರು ಹರಿದು ಹೋದ ಮೇಲೆ ಹಾನಿ ಸಮೀಕ್ಷೆ ಮಾಡಲು ಅನುಕೂಲವಾಗುತ್ತಿದೆ. ಮಳೆಯ ಪ್ರಮಾಣ ತಗ್ಗಿದ ತಕ್ಷಣವೇ ಅಧಿಕಾರಿಗಳ ತಂಡವನ್ನು ಬೆಳೆ ಹಾನಿಯ ಸಮೀಕ್ಷೆಗೆ ಕಳುಹಿಸಿ, ವರದಿಯಲ್ಲಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT