ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮ್ಯಾಂಡಸ್’ ಪ್ರಭಾವ; ಶೀತಗಾಳಿ, ಮಳೆ

ರೈತರ ಮೊಗದಲ್ಲಿ ಕಳೆ ತಂದ ಮಳೆ; ತಪ್ಪದ ಆತಂಕ
Last Updated 12 ಡಿಸೆಂಬರ್ 2022, 5:46 IST
ಅಕ್ಷರ ಗಾತ್ರ

ಕಲಬುರಗಿ: ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ಮ್ಯಾಂಡಸ್ ಪರಿಣಾಮ ಜಿಲ್ಲೆಯಲ್ಲಿ ಮೋಡ ಮುಸುಕಿದ ವಾತಾವರಣದೊಂದಿಗೆ ಭಾನುವಾರ ಮಳೆ ಸುರಿಯಿತು.

ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಬೆಳಿಗ್ಗೆ ಮಂಜು ಆವರಿಸಿದ್ದರೆ ಮಧ್ಯಾಹ್ನ ಮೋಡ ಮುಸುಕಿದ ವಾತಾರಣ ಕಂಡುಬಂತು.

ಬೆಳಿಗ್ಗೆ 11ಕ್ಕೆ ಶುರುವಾದ ಜಿಟಿಜಿಟಿ ಮಳೆ ಮಧ್ಯಾಹ್ನ 12 ಗಂಟೆವರೆಗೂ ಮುಂದುವರೆಯಿತು. ಮಳೆ ಜತೆಗೆ ಶೀತಗಾಳಿ ಬೀಸಿದ್ದರಿಂದ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ನಡುಗುತ್ತ ಸಾಗಿದರು.

ಸಂಜೆ ವೇಳೆ ನಗರದಲ್ಲಿ ಜೋರು ಮಳೆ ಸುರಿದಿದ್ದರಿಂದ ರಸ್ತೆಗಳ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತು. ಸೂಪರ್ ಮಾರ್ಕೆಟ್‌, ಜಗತ್ ವೃತ್ತ, ಗೋವಾ ಹೋಟೆಲ್‌, ಆನಂದ ಹೋಟೆಲ್, ಅಗ್ನಿಶಾಮಕ ಕಚೇರಿ ಮುಂಭಾಗದ ರಸ್ತೆಯ ಗುಂಡಿಗಳು ಮಳೆ ನೀರಿನಿಂದ ಆವೃತವಾಗಿದ್ದವು. ಇದರಿಂದ ದ್ವಿಚಕ್ರ ವಾಹನ ಸವಾರರು ಪರದಾಡುತ್ತಾ ಸಾಗಿದರು.

ಭಾನುವಾರ ಆಗಿದ್ದರಿಂದ ಸರ್ಕಾರಿ, ಖಾಸಗಿ, ಬ್ಯಾಂಕ್ ಉದ್ಯೋಗಿಗಳು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಮನೆಯಿಂದ ಹೊರಬರಲಿಲ್ಲ. ಅಸ್ತಮಾ, ಶ್ವಾಸಕೋಶ ಸಂಬಂಧಿತ ಜನರು ಮನೆಯಿಂದ ಹೊರಗೆ ಬರದಂತಹ ಸ್ಥಿತಿ ನಿರ್ಮಾಣವಾಗಿತ್ತು. ವಾತಾವರಣದಲ್ಲಿ ವಿಪರೀತ ಚಳಿ ಇದ್ದು, ಉಷ್ಣಾಂಶ ಕೂಡ ಗಣನೀಯವಾಗಿ ಕುಸಿಯಿತು.

ಸದಾ ಚಟುವಟಿಕೆಗಳಿಂದ ಕೂಡಿರುತ್ತಿದ್ದ ನಗರದ ಸೂಪರ್ ಮಾರ್ಕೆಟ್‌, ಗಂಜ್, ಬಂಬೂ ಬಜಾರ್, ಎಪಿಎಂಸಿ, ರಾಮಮಂದಿರ ವೃತ್ತ, ಕಣ್ಣಿ ಮಾರ್ಕೆಟ್ ಸೇರಿದಂತೆ ಇತರೆಡೆ ಬಿರುಸಿನ ವ್ಯಾಪಾರ ಇರಲಿಲ್ಲ. ಜಿಲ್ಲೆಯ ಚಿತ್ತಾಪುರ, ಕಾಳಗಿ, ಚಿಂಚೋಳಿ, ಶಹಾಬಾದ್, ಆಳಂದ, ಅಫಜಲಪುರ ಸೇರಿದಂತೆ ಹಲವೆಡೆ ಮಳೆಯಾಯಿತು.

‘ಹೂ ಬಿಟ್ಟು, ಮೊಗ್ಗು ಕಟ್ಟಿದ ತೊಗರಿ ಹಾಗೂ ಕಡಲೆ, ಜೋಳ, ಕುಸುಬಿ ಬಿತ್ತನೆ ಮಾಡಿದ ರೈತರಲ್ಲಿ ಮಂದಹಾಸ ಮೂಡಿದೆ. ಮಳೆಯಿಂದಾಗಿ ಸಮೃದ್ಧಿಯ ಹೂ ಬಿಟ್ಟು ಉತ್ತಮ ಫಸಲು ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ, ಮಳೆ ನಿಂತ ಬಳಿಕ ಮಂಜು ಕವಿದ ವಾತಾವರಣ ಕಂಡುಬಂರೆ ಬೆಳೆಗಳ ಹೂಗಳು, ಮೊಗ್ಗು ಕಳಚಿ ಬೀಳುತ್ತವೆ ಎಂಬ ಆತಂಕ ಇದೆ’ ಎನ್ನುತ್ತಾರೆ ಕೃಷಿಕ ಸಾಯಬಣ್ಣ ಸುಗ್ಗಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT