ಕಲಬುರಗಿ: ‘ಹಾವ್ನಾಲಗೆ ಮಿಂಚು ನೆಕ್ಕುತಲಿದೆ ಕತ್ತಲೆಯನು; ಕಕ್ಕುತಲಿದೆ ಬುವಿಗಣ್ಣನು ಮಿಂಚ್ಹಕ್ಕಿಯ ಚಂಚು! ಆಕಾಶವೆ ನೀರಾಯ್ತೆನೆ ಸುರಿಯುತ್ತಿದೆ ಭೋರ್ಭೋರೆನೆ...’ ಎಂಬ ರಾಷ್ಟ್ರಕವಿ ಕುವೆಂಪು ಅವರ ‘ವರ್ಷ ಭೈರವ’ ಕವಿತೆಯ ಈ ಸಾಲು ಕಳೆದ ಎರಡು ದಿನ ಮಳೆ ಸೃಷ್ಟಿಸಿರುವ ಪರಿಸ್ಥಿತಿಗೆ ಅರ್ಥಗರ್ಭಿತವಾಗಿದೆ.
ಜಿಲ್ಲೆಯಲ್ಲಿ ಭಾನುವಾರವೂ ಗುಡುಗು, ಮಿಂಚಿನೊಂದಿಗೆ ಮುಸಲಧಾರೆ ಮುಂದುವರಿದಿದ್ದು, ‘ವರ್ಷವೈಭವ’ ಕಳೆ ಕಟ್ಟಿತು. ಹಗಲು–ರಾತ್ರಿಯ ವ್ಯತ್ಯಾಸವಿಲ್ಲದೇ ಹುಯ್ದ ಮಳೆಯಿಂದಾಗಿ ಇಡೀ ಕಲಬುರಗಿ ಎರಡನೇ ದಿನವೂ ಮುಸುಕುಹೊದ್ದು ಮಲಗಿದಂತೆ ತೋರಿತು. ಮಳೆ ನೀರಿನ ಮಜ್ಜನಕ್ಕೆ ನೆಲ ತೋಯ್ದು ತೊಪ್ಪೆಯಾಗಿದ್ದು, ಮಳೆಯ ಹಾಡಿಗೆ ಮೈ–ಮನ ಮುದಗೊಂಡಿತು.
ಮಳೆ ಅಬ್ಬರಿಸಿ, ಬೊಬ್ಬಿರಿದು ಆರ್ಭಟಿಸುತ್ತಲೇ ಇರುವುದರಿಂದ ನಗರ, ಗ್ರಾಮಾಂತರ ಪ್ರದೇಶವೆನ್ನದೇ ಎಲ್ಲೆಲ್ಲೂ ನೀರು ತುಂಬಿದೆ. ಕೆರೆಕಟ್ಟೆಗಳು ಮೈದುಂಬಿವೆ. ಕಾಗಿಣಾ, ಬೆಣ್ಣೆತೊರಾ, ಮುಲ್ಲಾಮಾರಿ, ಕಮಲಾವತಿ, ರೌದ್ರಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಅಲ್ಲಲ್ಲಿ ಸೇತುವೆಗಳು ಮುಳುಗಡೆಯಾಗಿವೆ.
ತಗ್ಗು ಪ್ರದೇಶದ ಮನೆಗಳಿಗೆ ಹಳ್ಳದ ನೀರು ನುಗ್ಗಿದ್ದು, ಮನೆ ವಾಸಿಗಳನ್ನು ಹೊರ ಹಾಕಿದೆ. ನಗರ ಪ್ರದೇಶವನ್ನೂ ಒಳಗೊಂಡು ಬಡಾವಣೆಗಳು ಜಲಾವೃತವಾಗಿವೆ. ಕಿರು ಮೃಗಾಲಯದಲ್ಲಿ ಒಂದೂವರೆ ಅಡಿಗಳಷ್ಟು ನೀರು ನಿಂತಿದೆ. ಪಾದಚಾರಿ ಮಾರ್ಗ, ಮಕ್ಕಳ ಉದ್ಯಾನ, ಆಸನಗಳು, ಜೋಕಾಲಿ ಸೇರಿದಂತೆ ಹಲವು ಆಟಿಕೆಗಳು ಜಲಾವೃತವಾಗಿವೆ. ಮೃಗಾಲಯದಲ್ಲಿನ ಪ್ರಾಣಿಗಳು ಪರದಾಡಿದವು.
ಚಿಂಚೋಳಿಯ ಕಾನನ ಪ್ರದೇಶದಲ್ಲಿ ಮಳೆ ತನ್ನ ರುದ್ರರೂಪ ತಾಳಿದ್ದು, ಸಣ್ಣ–ಪುಟ್ಟ ಝರಿಗಳು ನೋಡುಗರಿಗೆ ನಯನ ಮನೋಹರವಾಗಿ, ಹಿತ ಭಾವ ತಂದವು. ಬೆಣ್ಣೆತೋರಾ, ನಾಗರಾಳ, ಚಂದ್ರಂಪಳ್ಳಿ ಜಲಾಶಯಗಳ ನೀರು ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿವೆ. ಬಿಟ್ಟೂಬಿಡದೇ ಬಂದೆರಗುತ್ತಿರುವ ವರುಣನಿಂದಾಗಿ ನದಿ, ಹಳ್ಳಗಳ ಪಾತ್ರದ ನಿವಾಸಿಗಳಿಗೆ ಭಯ ಹುಟ್ಟಿಸುತ್ತಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಸೇಡಂ ತಾಲ್ಲೂಕಿನ ರಿಬ್ಬನಪಲ್ಲಿಯಲ್ಲಿ 131 ಮಿ.ಮೀ., ಮೋತಕಪಲ್ಲಿಯಲ್ಲಿ 105.5 ಮಿ.ಮೀ., ಕಲಬುರಗಿಯ ರಾಜಪುರದಲ್ಲಿ 105.5 ಮಿ.ಮೀ. ಹಾಗೂ ಕುರಿಕೋಟಾದಲ್ಲಿ 99 ಮಿ.ಮೀ. ಅತ್ಯಧಿಕ ಮಳೆಯಾಗಿದೆ. ಮುಂದಿನ ಎರಡು ದಿನ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.
ಎಡೆಬಿಡದೆ ಸುರಿದ ಮಳೆಯಿಂದಾಗಿ ನಗರದ ಮಾಣಿಕೇಶ್ವರಿ ಕಾಲೊನಿ ಶಕ್ತಿನಗರ ಪ್ರಶಾಂತ ನಗರ ತಾರಪೈಲ್ ಬಡಾವಣೆ ವಿಜಯನಗರ ಹಳೆ ಜೇವರ್ಗಿ ರಸ್ತೆ ಸಮತಾ ಕಾಲೊನಿ ಬ್ರಹ್ಮಪೂರ ಸೇರಿದ ಮುಂತಾದ ಕಡೆ ಮಳೆಯ ನೀರು ರಸ್ತೆಗಳ ಮೇಲೆ ಹೊಳೆಯಂತೆ ಹರಿಯಿತು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ಅಲ್ಲಿನ ನಿವಾಸಿಗಳು ಸಂಕಷ್ಟ ಅನುಭವಿಸುವಂತಾಯಿತು. ಮಳೆ ನೀರು ಚರಂಡಿಯಲ್ಲಿ ಸರಾಗವಾಗಿ ಹರಿದು ಹೋಗದೆ ರಸ್ತೆಯ ಹರಿದಾಡಿತು. ಮಳೆ ತಂದೊಡ್ಡಿದ ಸಂಕಷ್ಟಕ್ಕೆ ವಾಹನಗಳ ಸವಾರರು ನಿವಾಸಿಗಳು ಪಾಲಿಕೆಗೆ ಹಿಡಿಶಾಪ ಹಾಕಿದರು. ಶನಿವಾರ ತಡರಾತ್ರಿ ನಗರದ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿ ಜನರು ಕತ್ತಲೆಯಲ್ಲಿ ಕಾಲಕಳೆಯುವಂತಾಯಿತು. ಸತತ ಮಳೆಯಿಂದಾಗಿ ವ್ಯಾಪಾರ ಚಟುವಟಿಕೆಗಳಿಗೆ ಹಿನ್ನಡೆಯಾಗಿದ್ದು ಕೃಷಿ ಚಟುವಟಿಕೆಗಳು ಸ್ಥಗಿತಗೊಂಡವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.