ಆಳಂದ: ತಾಲ್ಲೂಕಿನ ವಿವಿಧೆಡೆ ಮಂಗಳವಾರ ದಿನವಿಡೀ ಜಿಟಿಜಿಟಿ ಮಳೆಯು ಸುರಿಯಿತು.
ಮುಂಗಾರು ಆರಂಭವಾಗಿ 2 ತಿಂಗಳಾದರೂ ಮಳೆ ಕೊರತೆಯಿಂದಾಗಿ ಆತಂಕದಲ್ಲಿದ್ದ ರೈತರಿಗೆ ಮಂಗಳವಾರ ಸುರಿದ ಮಳೆಯು ಹರ್ಷ ಮೂಡಿಸಿದೆ. ಪಟ್ಟಣ ಸೇರಿದಂತೆ ಖಜೂರಿ, ನರೋಣಾ, ಮಾದನ ಹಿಪ್ಪರಗಿ, ನಿಂಬರ್ಗಾ ವಲಯದಲ್ಲಿ ಮಳೆಯು ಸೋಮವಾರ ರಾತ್ರಿಯಿಂದ ಆರಂಭವಾಗಿದೆ. ಜಿಟಿಜಿಟಿ ಮಳೆಯು ಬೆಳಗ್ಗೆ ಜನರ ಓಡಾಟಕ್ಕೆ ಅಡ್ಡಿಯಾದರೂ ಮಳೆ ಆಗಮನ ಸಂತಸಕ್ಕೆ ಕಾರಣವಾಯಿತು.
ವಿದ್ಯಾರ್ಥಿಗಳು ಬೆಳಗ್ಗೆ ಕೊಡೆ ಕೈಯಲ್ಲಿ ಹಿಡಿದು ತೆರಳಿದರು. ತಾಲ್ಲೂಕಿನಲ್ಲಿ ಕೆಲ ರೈತರೂ ಅಲ್ಪ ಮಳೆಯಲ್ಲಿಯೂ ಮುಂಗಾರು ಬಿತ್ತನೆ ಕೈಗೊಂಡಿದ್ದಾರೆ. ವಿಶೇಷವಾಗಿ ಖಜೂರಿ ವಲಯದಲ್ಲಿ ಅಧಿಕ ಸಂಖ್ಯೆಯಲ್ಲಿ ರೈತರೂ ಬಿತ್ತನೆ ಮಾಡಿದರು. ಸೋಯಾಬಿನ್, ಉದ್ದು, ಹೆಸರು ಬಿತ್ತನೆ ಮಾಡಿದ ರೈತರೂ ಮಳೆ ವಿಳಂಭವಾದ ಆತಂಕದಲ್ಲಿ ಇದ್ದರು.
ಜೂನ್ ಕೊನೆ ವಾರದಲ್ಲಿ ಬಿತ್ತನೆ ಮಾಡಿದ ರೈತರ ಬೆಳೆಗೆ ಇಂದು ಸುರಿದ ಮಳೆಯು ಶಕ್ತಿ ನೀಡಿದೆ. ಚಿಂಚೋಳಿ, ನಿರಗುಡಿ, ಖಜೂರಿ, ತಡೋಳಾ, ಪಡಸಾವಳಿ, ಹೆಬಳಿ, ಮಟಕಿ ಮತ್ತಿತರ ಗ್ರಾಮದ ವ್ಯಾಪ್ತಿಯಲ್ಲಿನ ರೈತರೂ ಮುಂಗಾರು ಬೆಳೆಗಳ ಪಾಲಿಗೆ ಮಳೆ ವರದಾನವಾಯಿತು ಎಂದು ಮಟಕಿ ರೈತ ಮಂಜುನಾಥ ಬಿರಾದಾರ ತಿಳಿಸಿದರು.
ನಿಂಬರ್ಗಾ, ಮಾದನ ಹಿಪ್ಪರಗಿ ,ನರೋಣಾ ವಲಯದಲ್ಲಿ ಮಳೆ ಪ್ರಮಾಣ ಕಡಿಮೆ ಆಗಿರುವ ಕಾರಣ ಬಹುತೇಕ ರೈತರೂ ಬಿತ್ತನೆ ಕೈಗೊಂಡಿರಲಿಲ್ಲ. ಇಂದು ದಿನವಿಡೀ ಜಿಟಿಜಿಟಿ ಮಳೆಯು ಉತ್ತಮವಾಗಿದೆ. ಇದರಿಂದ ರೈತರೂ ತೊಗರಿ ಬಿತ್ತನೆಗೆ ಅಗತ್ಯವಾದ ಮಳೆಯಾಗಿದೆ. ಈಗಾಗಲೇ ತೊಗರಿ ಬೀಜ ಹಾಗೂ ರಸಗೊಬ್ಬರ ಖರೀದಿಸಿ ಸಂಗ್ರಹಿಸಿಟ್ಟಿದ್ದ ರೈತರಿಗೆ ಖುಷಿ ನೀಡಿದೆ. ಹೆಸರು, ಉದ್ದು ಬಿತ್ತನೆ ಅವಧಿ ಮುಗಿದ ಹಿನ್ನಲೆಯಲ್ಲಿ ಈ ಬಾರಿ ತೊಗರಿ, ಸೋಯಾಬಿನ್ ಇಲ್ಲವೇ ಸೂರ್ಯಕಾಂತಿ ಬೆಳೆಯನ್ನು ಹೆಚ್ಚಾಗಿ ಬಿತ್ತನೆ ಸಾಧ್ಯತೆಗಳಿವೆ. ರೈತರಲ್ಲಿ ಎರಡು ದಿನದಿಂದ ಸುರಿಯುತ್ತಿರುವ ಮಳೆಯು ಕೃಷಿ ಚಟುವಟಿಕೆಗಳಿಗೆ ಮತ್ತೆ ಚಾಲನೆ ನೀಡಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.