ಬುಧವಾರ, ನವೆಂಬರ್ 13, 2019
18 °C
ರಾಯಚೂರು, ಕೊಪ್ಪಳ, ಕಲಬುರ್ಗಿ ಜಿಲ್ಲೆಯಲ್ಲಿ ಭಾರಿ ಮಳೆ

ಮಳೆ: ಪ್ರವಾಹಕ್ಕೆ ಕೊಚ್ಚಿ ಹೋದ ವೃದ್ಧ, ಬಾಲಕ

Published:
Updated:

ಕ‌ಲಬುರ್ಗಿ: ಕಲ್ಯಾಣ ಕರ್ನಾಟಕ ಭಾಗದ ರಾಯಚೂರು, ಕೊಪ್ಪಳ ಹಾಗೂ ಕಲಬುರ್ಗಿ ಜಿಲ್ಲೆಗಳಲ್ಲಿ ಭಾನುವಾರ ರಾತ್ರಿಯಿಂದ ಸೋಮವಾರ ಸಂಜೆವರೆಗೆ ಭಾರಿ ಮಳೆಯಾಗಿದ್ದು, ಎರಡು ಪ್ರತ್ಯೇಕ ಘಟನೆಗಳಲ್ಲಿ ಪ್ರವಾಹಕ್ಕೆ ವೃದ್ಧ ಹಾಗೂ ಬಾಲಕ ಕೊಚ್ಚಿ ಹೋಗಿದ್ದಾರೆ.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ತೆಗ್ಗಿಹಾಳ ಗ್ರಾಮದಲ್ಲಿ ಹನುಮಪ್ಪ ಹೊಳಿಯಪ್ಪ ನಂದಿಹಾಳ (65) ಎಂಬ ವೃದ್ಧ ಹಳ್ಳದ ಪ್ರವಾಹಕ್ಕೆ ಸಿಲುಕಿ ಮೃತಪಟ್ಟರು. ದನ–ಕರುಗಳಿಗೆ ನೀರು ಕುಡಿಸಲು ಹಳ್ಳದ ಕಡೆ ಹೋಗಿದ್ದ ಸಂದರ್ಭ, ನೀರಿನ ಸೆಳವಿಗೆ ಸಿಕ್ಕಿ ತೇಲಿಹೋದರು. ಸುಮಾರು 5 ಕಿ.ಮೀ ದೂರದ ಬನ್ನಟ್ಟಿ ಗ್ರಾಮದ ಸೇತುವೆಯ ಹತ್ತಿರ ಅವರ ಶವ ಪತ್ತೆಯಾಗಿದೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಚಿಂಚೋಡಿ ಬಳಿ ಹರಿದ ಕೃಷ್ಣಾನದಿಯಲ್ಲಿ ನೀರಿನ ಪ್ರಮಾಣ ಏಕಾಏಕಿ ಜಾಸ್ತಿಯಾಗಿದ್ದರಿಂದ ಗ್ರಾಮದ ಸಂತೋಷ ದೇವೇಗೌಡ (16) ಎಂಬ ಬಾಲಕ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ. ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. 

ಕೃಷ್ಣಾನದಿಗೆ ದಿಢೀರ್ ಪ್ರವಾಹ: ಮಹಾರಾಷ್ಟ್ರ ಸೇರಿದಂತೆ ರಾಜ್ಯದ ಕೃಷ್ಣಾನದಿ ಕಣಿವೆಗಳಲ್ಲಿ ಸತತ ಮಳೆ ಸುರಿಯುತ್ತಿದ್ದು, ಒಳಹರಿವು ಹೆಚ್ಚಾಗಿದ್ದರಿಂದ ನಾರಾಯಣಪುರ ಜಲಾಶಯದಿಂದ ನದಿಗೆ ಸೋಮವಾರದಿಂದ 1.71 ಲಕ್ಷ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ. ಇದರಿಂದ ಜಿಲ್ಲೆಯ ನದಿತೀರಗಳಲ್ಲಿ ದಿಢೀರ್‌ ಪ್ರವಾಹ ಪರಿಸ್ಥಿತಿ ತಲೆದೋರಿದೆ.

ನಾರಾಯಣಪುರ ಜಲಾಶಯಕ್ಕೆ ಒಂದು ಲಕ್ಷಕ್ಕೂ ಅಧಿಕ ಕ್ಯುಸೆಕ್ ಅಡಿ ಒಳಹರಿವು ಬರುತ್ತಿದೆ. ಬೆಳಿಗ್ಗೆ 8 ಗಂಟೆಗೆ 60 ಸಾವಿರ ಕ್ಯುಸೆಕ್ ಇದ್ದ ಹೊರಹರಿವು ಪ್ರಮಾಣವನ್ನು ಗಣನೀಯ ಏರಿಕೆ ಮಾಡಲಾಗಿದೆ. ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲ್ಲೂಕುಗಳ ನದಿತೀರದ ಗ್ರಾಮಗಳಲ್ಲಿ ಜಾಗೃತಿ ವಹಿಸುವುದಕ್ಕೆ ಜಿಲ್ಲಾಡಳಿತವು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದೆ.

ಅಮರ್ಜಾ ಅಣೆಕಟ್ಟೆಗೆ ನೀರು, ಸಂಚಾರಕ್ಕೆ ಅಡ್ಡಿ: ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕಿನ ವಿವಿಧೆಡೆ ಸುರಿದ ಭಾರಿ ಮಳೆಗೆ ಅಮರ್ಜಾ ಅಣೆಕಟ್ಟೆ ಸೇರಿದಂತೆ ಹಲವು ಕೆರೆ, ಹಳ್ಳಕೊಳ್ಳಗಳು ತುಂಬಿ ಹರಿದಿವೆ. ಖಜೂರಿ ವಲಯದಲ್ಲಿ 13 ಸೆಂ.ಮೀ. ಮಳೆ ದಾಖಲಾಗಿದೆ. ಸಾಲೇಗಾಂವ, ಕಿಣ್ಣಿ ಸುಲ್ತಾನ, ಮಟಕಿ, ತೆಲೆಕುಣಿ, ಹೊನ್ನಳ್ಳಿ ಕೆರೆಗಳು ಸಂಪೂರ್ಣ ಭರ್ತಿಯಾಗಿವೆ. ಮೂರು ವರ್ಷಗಳಿಂದ ತಳಮಟ್ಟ ತಲುಪಿದ್ದ ಅಮರ್ಜಾ ಅಣೆಕಟ್ಟೆ ಶೇ 40ರಷ್ಟು ಭರ್ತಿಯಾಗಿದೆ. ಅಣೆಕಟ್ಟೆ ಹಿನ್ನೀರು ಭಾಗದಲ್ಲಿ ಉತ್ತಮ ಮಳೆಯಾದ ಪರಿಣಾಮ ಮಟಕಿ, ಹೆಬಳಿ, ಪಡಸಾವಳಿ, ಜೀರಹಳ್ಳಿ, ಶಕಾಪುರ ಹಳ್ಳಗಳು ತುಂಬಿ ಹರಿದಿವೆ. ಶಕಾಪುರ ಬಳಿ ಇರುವ ಸೇತುವೆ ಮೇಲಿಂದ ನೀರು ಹೋಗಿದೆ. ಇದರ ಪರಿಣಾಮ ಬೆಳಗ್ಗೆ ಆಳಂದ–ಸೊಲ್ಲಾಪುರ ಮಾರ್ಗ ಮಧ್ಯದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

ಆಳಂದ ಶುಕ್ರವಾಡಿ, ದಣ್ಣೂರು, ಹಳ್ಳಿ ಸಲಗರ, ಎಲೆನಾವದಗಿ ಕೆರೆಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿದೆ. ಆಳಂದ–ತಡಕಲ ಮಧ್ಯದ ದಬದಬಿ ಹಳ್ಳವು ತುಂಬಿ ಹರಿದ ಪರಿಣಾಮ ಈ ಭಾಗದ ಸಂಚಾರ ಸ್ಥಗಿತವಾಗಿತ್ತು. ರುದ್ರವಾಡಿ ಗ್ರಾಮದ ರೈತ ವೀರಭದ್ರಪ್ಪ ಜುಬ್ರೆ ಅವರು ಎತ್ತು ಬಾವಿ ದಂಡೆಯಲ್ಲಿ ಕಟ್ಟಿದ ಪರಿಣಾಮ ನೀರಿನಲ್ಲಿ ಮುಳುಗಿ ಮೃತಪಟ್ಟಿದೆ.

ಪ್ರತಿಕ್ರಿಯಿಸಿ (+)