ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳ್ಳಾಲ: ಮಳೆಗೆ ಹಲವೆಡೆ ಅಸ್ತವ್ಯಸ್ತ

ಗುಡ್ಡ ಜರಿತ, ಶಾಲಾ ಆವರಣದಲ್ಲಿ ನೀರು, ಬಿದ್ದ ವಿದ್ಯುತ್ ಕಂಬ, ಸಂಪರ್ಕ ಕಡಿತ
Last Updated 6 ಜುಲೈ 2022, 4:26 IST
ಅಕ್ಷರ ಗಾತ್ರ

ಉಳ್ಳಾಲ: ಭಾರಿ ಮಳೆಗೆ ಉಳ್ಳಾಲ ತಾಲ್ಲೂಕು ವ್ಯಾಪ್ತಿಯತಲಪಾಡಿ ದೇವಿಪುರ, ಕೋಟೆಕಾರು ವೈದ್ಯನಾಥ ನಗರದಲ್ಲಿ ಹಲವು ಮನೆಗಳು, ರಸ್ತೆಗಳು ಜಲಾವೃತಗೊಂಡಿವೆ.

25 ವರ್ಷಗಳ ನಂತರ ದೇವಿಪುರ ರಸ್ತೆ ಜಲಾವೃತಗೊಂಡಿದೆ. ಮಾಡೂರು ಬಳಿ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾಯಿತು. ಬೀರಿಯಿಂದ ದೇರಳಕಟ್ಟೆ ಸಂಪರ್ಕಿಸುವ ರಸ್ತೆ ಸಂಚಾರ ಅಸ್ತವ್ಯಸ್ತವಾಯಿತು.

ಕೋಟೆಕಾರು ಪಟ್ಟಣ ಪಂಚಾಯಿತಿ ಮರ ತೆರವುಗೊಳಿಸಿದರು.ಮರವು ವಿದ್ಯುತ್‌ ತಂತಿ ಮೇಲೆ ಬಿದ್ದ ಪರಿಣಾಮ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಸೋಮೇಶ್ವರ ಒಂಬತ್ತುಕೆರೆಯ ಭಾಗದಲ್ಲಿಯೂ ಹಲವು ಮನೆಗಳು ಜಲಾವೃತಗೊಂಡಿವೆ. ಉಳ್ಳಾಲ ಗ್ರಾಮದ ಹಳೇಕೋಟೆ ಎಂಬಲ್ಲಿ ಗುಡ್ಡೆ ಜರಿದ ಪರಿಣಾಮವಾಗಿ ಅಬ್ದುಲ್ ರೆಹಮಾನ್ ಎಂಬುವರ ಮನೆಗೆ ಹಾನಿಯಾಗಿದೆ. ಮನೆಯವರನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ.

ಪೆರ್ಮನ್ನೂರು ಗ್ರಾಮದ ಕಲ್ಲಪು ಪಟ್ಲ ಬಳಿ ನೆರೆಯಿಂದ 20 ಮನೆಗಳು ಜಲಾವೃತಗೊಂಡಿವೆ. ಅಂಬ್ಲಮೊಗರು ಗ್ರಾಮದ ಪರಿಯಾಳ ಬೊಟ್ಟು ಎಂಬಲ್ಲಿ ಮಹೇಶ್‌ ಎಂಬುವರ ಮನೆಯ ಗೋಡೆ ಕುಸಿದಿದೆ. ಕೋಟೆಕಾರು ಗ್ರಾಮದ ತಾರಿಪಡ್ಪುವಿನಲ್ಲಿರುವ ನಾಲ್ಕು ಮನೆಗಳಿಗೆ ನೀರು ನುಗ್ಗಿದೆ.

ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಉಚ್ಚಿಲಗುಡ್ಡೆಯ ಸರ್ಕಾರಿ ಪ್ರೌಢಶಾಲೆ ಹಾಗೂ ಅಂಗನವಾಡಿ ಜಲಾವೃತವಾಗಿದೆ. ರಜೆ ಇದ್ದ ಕಾರಣ ಶಾಲೆಯಲ್ಲಿ ಮಕ್ಕಳು ಇರಲಿಲ್ಲ. ಅನ್ನದಾಸೋಹದ ಸಾಮಗ್ರಿಗಳು, ರೆಕಾರ್ಡ್‌ ಪುಸ್ತಕಗಳಿಗೆ ಹಾನಿಯಾಗಿವೆ. ಸ್ಥಳಕ್ಕೆ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

‘ಕಾಮಗಾರಿಯಿಂದ ನಿರ್ಲಕ್ಷ್ಯ’:ನೆರೆ ಆವೃತ ಕಲ್ಲಾಪು ಪಟ್ಲ, ಕೋಟೆಕಾರು ವಿಷ್ಣುಮೂರ್ತಿ, ನೆಲ್ಲಿಸ್ಥಳ ದೇವಸ್ಥಾನ, ಉಚ್ಚಿಲಗುಡ್ಡೆ ಪ್ರದೇಶಕ್ಕೆ ಶಾಸಕ ಯು.ಟಿ ಖಾದರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಸತತ ಮಳೆಗೆ ಎರಡು ವಾರಗಳಿಂದ ಪ್ರಾಕೃತಿಕ ವಿಕೋಪಗಳು ನಡೆಯುತ್ತಿದ್ದರೂ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಸಭೆಯನ್ನು ನಡೆಸಿಲ್ಲ. ಶೀಘ್ರವೇ ಜಿಲ್ಲಾಮಟ್ಟದ ಸಭೆ ನಡೆಸಿ ಲೋಪದೋಷಗಳನ್ನು ತಕ್ಷಣ ಸರಿಪಡಿಸಬೇಕಿದೆ. ಉಳ್ಳಾಲ ತಾಲ್ಲೂಕಿನಲ್ಲಿ ನಿರಂತರ ಗುಡ್ಡ ಕುಸಿತ, ಕಡಲ್ಕೊರೆತ, ನೆರೆ ಸೃಷ್ಟಿಯಾಗಿದೆ. ಕಲ್ಲಾಪು, ಪಟ್ಲ, ಉಚ್ಚಿಲಗುಡ್ಡೆ ಭಾಗಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸಿದವರು ಸಮರ್ಪಕವಾಗಿ ನಡೆಸದೆ ಹೆದ್ದಾರಿ ಬದಿಯ ಜನರಿಗೆ ತೊಂದರೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಕ್ಷಣ ಕ್ರಮಕೈಗೊಳ್ಳಬೇಕು’ ಎಂದು ಯು.ಟಿ. ಖಾದರ್ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT