ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಮಳೆಗೆ ‘ದ್ವೀಪ’ವಾಗುವ ತಾಂಡಾ!

Last Updated 19 ಅಕ್ಟೋಬರ್ 2021, 3:42 IST
ಅಕ್ಷರ ಗಾತ್ರ

ಕಲಬುರಗಿ: ಸ್ವಲ್ಪವೇ ಮಳೆ ಬಂದರೆ ಸಾಕು ಸುಬ್ಬುನಾಯಕ್ ತಾಂಡಾ ಸಂಪೂರ್ಣ ಕೆರೆಯಂತೆ ಬದಲಾಗಿ ಮಳೆ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುತ್ತದೆ.

ಚಿತ್ತಾಪುರ ತಾಲ್ಲೂಕಿನ ನಾಲವಾರ ಸಮೀಪದ ರಾಷ್ಟ್ರೀಯ ಹೆದ್ದಾರಿ 150ರ ಪಕ್ಕದಲ್ಲಿರುವ ಈ ತಾಂಡಾ ಹಲವು ಸಮಸ್ಯೆಗಳ ಆಗರವಾಗಿದೆ. ಸುರಿದ ಮಳೆ ತಾಂಡಾದ ತಗ್ಗು ಪ್ರದೇಶದ ಸುತ್ತಲೂ ಶೇಖರಣೆಗೊಂಡು, ಅಕ್ಕಪಕ್ಕದ ಮನೆಗ ಳಿಗೂ ನುಗುತ್ತದೆ. ಕೊಳಚೆ ನೀರು ಹರಿದು ಹೋಗಲು ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲ. ಪ್ರವಾಸಿ ಮಂದಿ ರದ ಸುತ್ತಲೂ ಸಹ ಮಳೆ ನೀರು ನಿಂತಿದೆ. ಹಿಂಭಾಗದಲ್ಲಿ ಗಿಡಗಂಟಿ ಬೆಳೆದಿದೆ.

ಈಚಗಷ್ಟೇ ತಾಂಡಾ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆದಿದೆ. ಮಳೆ ನೀರು ಹರಿದುಹೋಗುವಂತೆ ರಸ್ತೆಯ ಬದಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಮಳೆ ನೀರು ತಗ್ಗು ಪ್ರದೇಶದ ಖಾಲಿ ನಿವೇಶನ ಮತ್ತು ಮನೆಗಳಿಗೆ ನುಗ್ಗುತ್ತದೆ. ಮಳೆ ಬಂದರೆ ದಿನವಿಡೀ ನೀರು ಹೊರ ಹಾಕುವುದೇ ಕೆಲಸವಾಗುತ್ತದೆ ಎಂದು ನಿವಾಸಿಗರು ಅಸಮಾಧಾನ ವ್ಯಕ್ತಪಡಿಸಿದರು.

‘ತಾಂಡಾಕ್ಕೆ ಹೊಂದಿಕೊಂಡಿರುವ ಬಾಪುನಗರದ ವಾರ್ಡ್‌ ನಂಬರ್ 8ರ ಸ್ಥಿತಿಯು ಹೀಗೆಯೇ ಇದೆ. ಚರಂಡಿ ನಿರ್ಮಿಸದೇ ರಸ್ತೆ ಮಾಡಿದ್ದು ಬಿದ್ದ ಮಳೆಯ ನೀರು ರಸ್ತೆ ಮಧ್ಯೆಯೇ ನಿಲ್ಲುತ್ತದೆ. ರಸ್ತೆಯೇ ಮೋರಿಯಂತಾಗಿ ಹಂದಿ ಮತ್ತು ಸೊಳ್ಳೆಗಳ ತಾಣವಾಗಿದೆ. ಕಳೆದ ಎರಡು ವರ್ಷಗಳಿಂದ ಇಲ್ಲಿನ ನಿವಾಸಿಗರ ಪಾಡು ಹೇಳ ತೀರದಾಗಿದೆ. ಚರಂಡಿ ನಿರ್ಮಿಸುವುದಾಗಿ ಭರವಸೆ ಕೊಟ್ಟು ಗೆದ್ದುಬಂದ ವಾರ್ಡ್ ಸದಸ್ಯ ಇತ್ತ ಸುಳಿಯುತ್ತಿಲ್ಲ’ ಎನ್ನುತ್ತಾರೆ ನಿವಾಸಿ ಶಂಕರ ರಾಠೋಡ.

‘ಶೇಖರಣೆಗೊಂಡ ಮಳೆ ಮತ್ತು ಕೊಳಚೆ ನೀರಿನಿಂದಾಗಿ ಕ್ರಿಮಿ ಕೀಟಗಳ ಕಾಟ ಹೆಚ್ಚಾಗಿದೆ. ಆಗಾಗ ಹಾವು, ಚೇಳು ಕಾಣಿಸಿಕೊಳ್ಳುತ್ತಿವೆ. ಸೊಳ್ಳೆಗಳ ಕಾಟ ತಾಳಲಾರದೆ ಮನೆಯ ಕಿಟಕಿ–ಬಾಗಿಲುಗಳು ಮುಚ್ಚಬೇಕಾದ ಪರಿಸ್ಥಿತಿ ಇದೆ. ಒಂದೇ ವಾರದಲ್ಲಿ ಮನೆಯ ಎಂಟು ಮಂದಿಗೆ ಜ್ವರ ಕಾಣಿಸಿಕೊಂಡಿತ್ತು. ಚರಂಡಿ ನಿರ್ಮಿಸಿ, ಮಳೆ ನೀರು ನಿಲ್ಲದಂತೆ ವ್ಯವಸ್ಥೆ ಕಲ್ಪಿಸುವಂತೆ ಪಂಚಾಯಿತಿ ಅಧಿಕಾರಿ, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಇದುವರೆಗೂ ಸ್ಪಂದಿಸಿಲ್ಲ’ ಎನ್ನುತ್ತಾರೆ ನಿವಾಸಿ ಸೀತಾಬಾಯಿ.

‘ಸುಬ್ಬುನಾಯಕ್ ತಾಂಡಾ ಮತ್ತು ಬಾಪುನಗರ (ಕುಂಬಾರಹಳ್ಳಿ) ನಾಲವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ವಾರ್ಡ್ ಅಭಿವೃದ್ಧಿಗೆ ಅನುದಾನ ಸಮರ್ಪಕವಾಗಿ ಬರುತ್ತಿಲ್ಲ. ಇದರಿಂದ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾರ್ಯ ಮಾಡಲು ಆಗುತ್ತಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಅಕ್ಷಯ ಕುಮಾರ ಆರೋಪಿಸಿದರು.

‘ಹೆದ್ದಾರಿ ಗುತ್ತಿಗೆದಾರರು ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿದ್ದಾರೆ. ನೆಲ ಮಟ್ಟಕ್ಕಿಂತ ಸ್ವಲ್ಪ ಮೇಲಿದ್ದು, ಚರಂಡಿ ಮತ್ತು ಮಳೆ ನೀರು ಹರಿದು ಹೋಗುತ್ತಿಲ್ಲ. ಈ ಬಗ್ಗೆ ಗುತ್ತಿಗೆದಾರರಿಗೆ ಪತ್ರ ಸಹ ಬರೆದಿದ್ದೇನೆ. ಒಮ್ಮೆ ನನ್ನ ಅನುದಾನದಲ್ಲಿ ತಾಂಡಾದಲ್ಲಿ ದುರಸ್ತಿ ಕಾರ್ಯ ಮಾಡಿಸಿದ್ದೇನೆ’ ಎಂದು ಗ್ರಾಮ ಪಂಚಾಯಿತಿ ಪಿಡಿಒ ರಾಚಯ್ಯ ವಿ.ಸ್ಥಾವರಮಠ ‘ಪ್ರಜಾವಾಣಿ’ಗೆ ತಿಳಿಸಿದರು.

***

ನಿಯಮದ ಅನುಸಾರವಾಗಿ ಅನುದಾನ ಹಂಚಿಕೆ ಮಾಡುತ್ತಿದ್ದೇವೆ. ಅನುದಾನ ನೀಡಿಕೆಯಲ್ಲಿ ಯಾವುದೇ ಸದಸ್ಯರಿಗೆ ತಾರತಮ್ಯ ಮಾಡಿಲ್ಲ

- ರಾಚಯ್ಯ ವಿ.ಸ್ಥಾವರಮಠ, ನಾಲವಾರ ಗ್ರಾ.ಪಂ ಪಿಡಿಒ

***

ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಅನುದಾನದ ಸಮಸ್ಯೆಯಿಂದ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ

- ಅಕ್ಷಯ ಕುಮಾರ, ನಾಲವಾರ ಗ್ರಾ.ಪಂ ಸದಸ್ಯ

***

ಕೊಳಚೆ ನೀರಿನಿಂದ ನಿತ್ಯ ದುರ್ವಾಸನೆ, ರಾತ್ರಿಯಾದರೆ ಸೊಳ್ಳೆ, ವಿಷಜಂತುಗಳ ಕಾಟ ಹೆಚ್ಚಾಗಿದೆ. ಸ್ವಲ್ಪ ಮಳೆ ಬಂದರೆ ಬಾಗಿಲವರೆಗೆ ನೀರು ಬಂದು ನಿಲ್ಲುತ್ತೆ

- ಶಂಕರ ರಾಠೋಡ್, ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT