ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರು ಸಂಗ್ರಹಕ್ಕೆ ಪಾಲಿಕೆಯಿಂದ ಜಾಗೃತಿ ಯತ್ನ

ಕಲಬುರ್ಗಿ ಮಹಾನಗರ ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ ಸುದ್ದಿಗೋಷ್ಠಿ
Last Updated 26 ಸೆಪ್ಟೆಂಬರ್ 2019, 9:37 IST
ಅಕ್ಷರ ಗಾತ್ರ

ಕಲಬುರ್ಗಿ: ಪ್ರತಿ ವರ್ಷ 800 ಮಿಲಿ ಮೀಟರ್‌ ಮಳೆ ಬೀಳುವ ಕಲಬುರ್ಗಿ ನಗರದಲ್ಲಿ ಮನೆ, ಕಚೇರಿಗಳ ತಾರಸಿಯಲ್ಲಿ ಬಿದ್ದ ಮಳೆ ನೀರು ಸಂಗ್ರಹಿಸಲು ಜನರಲ್ಲಿ ಜಾಗೃತಿ ಮೂಡಿಸಲು ಪಾಲಿಕೆ ಅಭಿಯಾನ ಹಮ್ಮಿಕೊಂಡಿದೆ ಎಂದು ಪಾಲಿಕೆಯ ನೂತನ ಆಯುಕ್ತ ರಾಹುಲ್‌ ಪಾಂಡ್ವೆ ಪ್ರಕಟಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರಿ ಕಚೇರಿಗಳು, ಅಧಿಕಾರಿಗಳ ಬಂಗಲೆಗಳಲ್ಲಿ ಕಡ್ಡಾಯವಾಗಿ ಮಳೆ ನೀರು ಸಂಗ್ರಹಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಆ ನೀರನ್ನು ಕುಡಿಯಲೂ ಬಳಸಬಹುದಾಗಿದೆ. ಇಲ್ಲವೇ ಒಂದೆಡೆ ಸಂಗ್ರಹಿಸಿ ಸಾರ್ವಜನಿಕ ಉದ್ಯಾನಗಳಿಗೆ ಬಳಕೆ ಮಾಡಬಹುದು. ನಗರದಲ್ಲಿ 300 ಮಸೀದಿಗಳಿದ್ದು, ನಮಾಜ್‌ ಮಾಡುವ ಸಂದರ್ಭದಲ್ಲಿ ಕೈಕಾಲು ತೊಳೆದುಕೊಂಡ ಬಳಿಕ ವ್ಯರ್ಥವಾಗಿ ಹರಿಯುವ ನೀರನ್ನು ಸಂಗ್ರಹಿಸಲು ಮಸೀದಿಗಳ ಮುಖ್ಯಸ್ಥರ ಮನವೊಲಿಸಲಾಗುವುದು. ಪ್ರತಿಯೊಂದು ಮಸೀದಿಯಲ್ಲಿ ಕನಿಷ್ಠ 1ರಿಂದ 3 ಸಾವಿರ ಲೀಟರ್‌ ನೀರು ಬಳಕೆಯಾಗುತ್ತದೆ. ಈ ನೀರನ್ನೂ ಉದ್ಯಾನಗಳ ನಿರ್ವಹಣೆಗೆ ಬಳಸಬಹುದು. ತಾರಸಿ ನೀರನ್ನು ಸಂಗ್ರಹಿಸಲು ಎಲ್ಲರೂ ಮುಂದಾದರೆ ಜಲಮಂಡಳಿ ಪೂರೈಸುವ ನೀರಿನ ಬದಲು ಮಳೆ ನೀರು ಬಳಸುವ ಮೂಲಕ ಸ್ವಾವಲಂಬನೆ ಸಾಧಿಸಬಹುದಾಗಿದೆ’ ಎಂದರು.

‘ದೆಹಲಿಯ ಮೋತಿಭಾಗ್‌ನಲ್ಲಿ ಬಹಳಷ್ಟು ನೀರಿನ ಸಮಸ್ಯೆ ಇತ್ತು. ಚೆನ್ನೈನಲ್ಲಿ ಈಚೆಗೆ ನೀರಿಗೂ ಪಡಿತರ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಮುಂದೆ ಭೀಕರ ದಿನಗಳು ಬರಲಿವೆ. ಇದನ್ನು ಅರಿತುಕೊಂಡು ಈಗಿನಿಂದಲೇ ಮಳೆ ನೀರನ್ನು ಸಂಗ್ರಹಿಸಲು ಆರಂಭಿಸಬೇಕು’ ಎಂದು ಹೇಳಿದರು.

‘ಮನೆ ಹಾಗೂ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಅನುಮತಿ ನೀಡುವಾಗ ಮಳೆ ನೀರು ಸಂಗ್ರಹವನ್ನು ಕಡ್ಡಾಯಗೊಳಿಸಲಾಗಿದೆ. ಅ ನಿಯಮಗಳನ್ನು ಉಲ್ಲಂಘಿಸಿದ್ದರೆ ಕಟ್ಟಡ ಪೂರ್ಣವಾದ ಪ್ರಮಾಣಪತ್ರ (ಸಿ.ಸಿ.) ಕೊಡುವುದಿಲ್ಲ. ಇದರ ಮೇಲೆ ನಿಗಾ ಇಡಲು ಅಧಿಕಾರಿಗಳಿಗೆ ಸೂಚಿಸಲಿದ್ದೇನೆ’ ಎಂದು ಪಾಂಡ್ವೆ ತಿಳಿಸಿದರು.

ಬಾವಿ, ಕಲ್ಯಾಣಿಗಳಿಗೆ ಕಾಯಕಲ್ಪ: ನಗರದಲ್ಲಿರುವ 70 ಪುರಾತನ ಕಾಲದ ಬಾವಿಗಳು ಹಾಗೂ ಕಲ್ಯಾಣಿಗಳಿದ್ದು, ಅವುಗಳನ್ನು ಸ್ವಚ್ಛಗೊಳಿಸಿ ಕಾಯಕಲ್ಪ ನೀಡಲು ಕ್ರಮ ಕೈಗೊಳ್ಳುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT