ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಡ್ಲಿ ಕ್ರಾಸ್ ಬಂದ್ ಮಾಡಿ ಪ್ರತಿಭಟನೆ

ಅಲ್ಲಾಪುರ ಮುಖ್ಯ ರಸ್ತೆ ದುರಸ್ತಿಗೆ ಆಗ್ರಹ; ಟೆಂಡರ್ ಮುಗಿದರೂ ಶುರುವಾಗದ ಕಾಮಗಾರಿ
Last Updated 1 ಅಕ್ಟೋಬರ್ 2020, 8:21 IST
ಅಕ್ಷರ ಗಾತ್ರ

ಕಾಳಗಿ: ತಾಲ್ಲೂಕಿನ ಕೋಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಲ್ಲಾಪುರ ಗ್ರಾಮಕ್ಕೆ ಸಂಚರಿಸುವ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಅಲ್ಲಾಪುರ ಗ್ರಾಮಸ್ಥರು ಬುಧವಾರ ಕೋಡ್ಲಿ ಕ್ರಾಸ್ ವರೆಗೆ 8 ಕಿ.ಮೀ ಪಾದಯಾತ್ರೆ ಕೈಗೊಂಡು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಟೆಂಡರ್ ಪ್ರಕ್ರಿಯೆ ಮುಗಿದರೂ ಕಾಮಗಾರಿ ಮಾಡುವಲ್ಲಿ ಮೀನಾಮೇಷ ಎಣಿಸಲಾಗುತ್ತಿದೆ.ಕೋಡ್ಲಿಯಿಂದ ಅಲ್ಲಾಪುರ ಗ್ರಾಮ 6 ಕಿ.ಮೀ ದೂರವಿದೆ. ಈ ಪೈಕಿ 5 ಕಿ.ಮೀ ಡಾಂಬರೀ ಕರಣವಾಗಿದೆ. ಇನ್ನುಳಿದ 1 ಕಿ.ಮೀ ರಸ್ತೆ ಸಂಪೂರ್ಣ ಕೆಟ್ಟುಹೋಗಿ ಜನರ
ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದುಪ್ರತಿಭಟನಾಕಾರರು ದೂರಿದರು.

ವಾಹನ ಸವಾರರು ಮತ್ತು ಹೊಲದಲ್ಲಿ ಬೆಳೆದ ಫಸಲು ಮನೆಗೆ ತರುವ ಹಾಗೂ ಹೊಲಕ್ಕೆ ಹೋಗಿಬರುವ ರೈತರು, ಕೂಲಿಕಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರ ಹೊತ್ತು ಸಾಗುವ ಜಾನುವಾರುಗಳು ಸಾವು ಬದುಕಿನ ಮಧ್ಯೆ ಹೆಜ್ಜೆ ಇಡುತ್ತಿವೆ. ಅಲ್ಲದೇ ಕೋಡ್ಲಿ- ಅಲ್ಲಾಪುರ ನಡುವಿನ ಗುಡ್ಡದ ಮೇಲಿನ ದೊಡ್ಡ ಕಲ್ಲುಗಳು ರಸ್ತೆಗೆ ಉರುಳಿ ಬಿದ್ದು ರಸ್ತೆ ಮತ್ತಷ್ಟು ಬಿಗಡಾಯಿಸಿದೆ. ಇಷ್ಟಾದರೂ ಸಂಬಂಧಿತ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲಾಪುರ- ವಜ್ಜೀರಗಾಂವ ರಸ್ತೆ ಮಧ್ಯೆ ನಾಲೆ ಹಾದು ಹೋಗುತ್ತದೆ. ಇಲ್ಲಿ ಜನರು ದಾಟಿ ಹೋಗಲು ತೊಂದರೆಯಾಗಿ ಮಳೆ ಬಂದರೆ ಜನರ ಕುತ್ತಿಗೆ ಮೇಲೆ ನೀರು ಬಂದು ಜೀವಭಯ ಆಗುತ್ತಿದೆ. ಇಲ್ಲಿ ಕಿರು ಸೇತುವೆ ನಿರ್ಮಾಣ ಮಾಡಬೇಕು. ಅಲ್ಲಾಪುರ ಕೆರೆ ಅಭಿವೃದ್ಧಿಗೆ ₹ 100 ಕೋಟಿ ಮಂಜೂರು ಮಾಡಬೇಕು. ಇನ್ನುಳಿದ 1 ಕಿ.ಮೀ ರಸ್ತೆ ಕಾಮಗಾರಿ ಕೂಡಲೇ ಪ್ರಾರಂಭಿಸಬೇಕು. ಅತಿವೃಷ್ಟಿಗೆ ಹಾಳಾದ ಬೆಳೆಗೆ ಪ್ರತಿ ಎಕರೆಗೆ ₹ 25 ಸಾವಿರ ಪರಿಹಾರ ಕೊಡಬೇಕು ಇತ್ಯಾದಿ ಬೇಡಿಕೆಗಳನ್ನು ಶೀಘ್ರವೇ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಕಾಳಗಿ ತಹಶೀಲ್ದಾರ್ ನೀಲಪ್ರಭಾ ಬಬಲಾದ ಮನವಿಪತ್ರ ಸ್ವೀಕರಿಸಿದರು. ಕಾಳಗಿ- ಚಿಂಚೋಳಿ- ಮಹಾಗಾಂವ ನಡುವೆ ಸಂಚರಿಸುವ ವಾಹನಗಳು ಕೆಲಕಾಲ ತೊಂದರೆಗೆ ಸಿಲುಕಿ ಪ್ರಯಾಣಿಕರು ಪರದಾಡಿದರು.

ಮುಖಂಡ ಶರಣಬಸಪ್ಪ ಮಮಶೆಟ್ಟಿ, ಗೌರಿಶಂಕರ ಕಿಣ್ಣಿ, ಗುರುನಂದೇಶ ಕೋಣಿನ, ಸಂತೋಷ ಮಾಳಗಿ, ಸಿದ್ದಯ್ಯಸ್ವಾಮಿ ಅಲ್ಲಾಪುರ, ಶಿವಕುಮಾರ ಪಾಟೀಲ, ಮಲ್ಲಮ್ಮ ದೊಡ್ಡಮನಿ, ಮಲ್ಲು ಚಿಕ್ಕ ಅಗಸಿ ಮತ್ತು ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT