ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿಗಳಿಗೆ ಸ್ವಂತ ಕಟ್ಟಡ; ಕೋರಿಕೆ

ಮೈಸೂರು ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆದ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆ
Last Updated 19 ಜೂನ್ 2018, 8:18 IST
ಅಕ್ಷರ ಗಾತ್ರ

ಮೈಸೂರು: ತಾಲ್ಲೂಕಿನ ಅಂಗನವಾಡಿಗಳಿಗೆ ಸ್ವಂತ ಕಟ್ಟಡವೇ ಇಲ್ಲದೇ ತೊಂದರೆಯಾಗಿದ್ದು, ಕಟ್ಟಡ ನೀಡುವಂತೆ ಕೋರಿ ಅಧಿಕಾರಿಗಳು ಮನವಿ ಸಲ್ಲಿಸಿದರು.

ಸೋಮವಾರ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆದ ‘ಕೆಡಿಪಿ’ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಪ್ರಗತಿಯ ವರದಿ ಒಪ್ಪಿಸಿ, ಅಂಗನವಾಡಿಗಳು ಸ್ವಂತ ಕಟ್ಟಡ ಇಲ್ಲದೇ ಅನುಭವಿಸುತ್ತಿರುವ ಪಾಡನ್ನು ವಿವರಿಸಿದರು.

‘ಮೈಸೂರು ತಾಲ್ಲೂಕಿನ ಬಹುತೇಕ ಅಂಗನವಾಡಿಗಳಿಗೆ ಸ್ವಂತ ಕಟ್ಟಡವೇ ಇಲ್ಲ. ದೇವಾಸ್ಥಾನ ಹಾಗೂ ಬೇರೆ ಕಟ್ಟಡಗಳಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ. ಸರ್ಕಾರಿ ಶಾಲೆಗಳ ಆವರಣದಲ್ಲಿ ಅಂಗನವಾಡಿ ನಿರ್ಮಿಸಲು ಸ್ಥಳ ನೀಡಬೇಕೆಂದು ಬಹುಕಾಲದಿಂದ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕೋರಲಾಗುತ್ತಿದೆ. ಆದರೆ, ಇದುವರೆಗೂ ಯಾರೂ ಸ್ಪಂದಿಸುತ್ತಿಲ್ಲ’ ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಲಿಂಗರಾಜಯ್ಯ, ‘ತಾಲ್ಲೂಕಿನ ಅಂಗನವಾಡಿ ವಿವರಗಳನ್ನು ನೀಡಿರಿ. ಬಳಿಕ ಸ್ವಂತ ಕಟ್ಟಡ ನೀಡುವ ಬಗ್ಗೆ ಗಮನನೀಡಲಾಗುವುದು’ ಎಂದು ತಿಳಿಸಿದರು.

ಚಿಕಿತ್ಸೆಯೇ ನೀಡದ ಮೇಲೆ ಅನುದಾನವೇಕೆ?: ‘ತಾಲ್ಲೂಕಿನಲ್ಲಿ ನಾಲ್ಕು ಆಯುರ್ವೇದ ಆಸ್ಪತ್ರೆಗಳಿವೆ. ವರ್ಷದಲ್ಲಿ ಒಬ್ಬರಿಗೂ ಚಿಕಿತ್ಸೆ ನೀಡಿಲ್ಲ. ಹೀಗಿದ್ದ ಮೇಲೆ ಈ ಆಸ್ಪತ್ರೆಗಳಿಗೆ ಅನುದಾನ ಏಕೆ ನೀಡಬೇಕು?’ ಎಂದು ತಾ.ಪಂ ಉಪಾಧ್ಯಕ್ಷ ಎನ್‌.ಬಿ.ಮಂಜು ತರಾಟೆಗೆ ತೆಗೆದುಕೊಂಡರು.

ಆಯುಷ್ ಇಲಾಖೆಯ ಅಧಿಕಾರಿ ವರದಿ ಮಂಡಿಸಿ, ಆಸ್ಪತ್ರೆಗಳಿಗೆ ಅನುದಾನ ನೀಡಬೇಕು ಎಂದು ಕೋರಿದರು. ಇದಕ್ಕೆ ಕೆಂಡಾಮಂಡಲರಾದ ಮಂಜು, ‘ಜಿಲ್ಲಾಡಳಿತ, ಜಿ.ಪಂ.ನಿಂದಲೂ ಅನುದಾನ ಪಡೆದುಕೊಳ್ಳುತ್ತಿದೀರಿ. ಜತೆಗೆ ನಮ್ಮಿಂದಲೂ ಅನುದಾನ ಬೇಕೆ? ಈ ವರ್ಷ ಪಡೆದ ₹ 2.5 ಲಕ್ಷ ಅನುದಾನದಲ್ಲಿ ಮಾಡಿರುವ ಸಾಧನೆಯೇನು?‘ ಎಂದು ಕಿಡಿಕಾರಿದರು.

ತಾ.ಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಸಭೆಯ ಅಧ್ಯಕ್ಷತೆವಹಿಸಿದ್ದರು.

ಚರ್ಚೆಯೂ ಇಲ್ಲ, ನಿರ್ಧಾರವೂ ಇಲ್ಲ

ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಯಾವುದೇ ಪ್ರಮುಖ ಚರ್ಚೆಯೂ ಆಗದೇ, ಯಾವ ನಿರ್ಧಾರವನ್ನೂ ತೆಗೆದುಕೊಳ್ಳದೇ ಸಭೆಗೆ ಅಂತ್ಯ ಹೇಳಲಾಯಿತು. ತಾಲ್ಲೂಕಿನ 25 ಇಲಾಖೆಗಳಲ್ಲಿ ಎರಡು ಮೂರು ಇಲಾಖೆಗಳನ್ನು ಹೊರತುಪಡಿಸಿ ಉಳಿದೆಲ್ಲ ಇಲಾಖೆಗಳು ವರದಿ ಒಪ್ಪಿಸಿದವು. ಇದಕ್ಕೆ ತಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸಿಇಒ ಯಾವ ಪ್ರಶ್ನೆಯನ್ನೂ ಕೇಳಲಿಲ್ಲ. ಸಭಾಂಗಣದ ಧ್ವನಿವರ್ಧಕ ವ್ಯವಸ್ಥೆ ಕೈಕೊಟ್ಟಿದ್ದ ಕಾರಣ, ಹಿಂಬದಿಯಲ್ಲಿ ಕುಳಿತಿದ್ದವರಿಗೆ ಏನೂ ಕೇಳಿಸುತ್ತಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT