ಕನ್ನಡ ಅನ್ನದ ಭಾಷೆಯಾಗದಿದ್ದರೆ ಕಷ್ಟ

7
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಬಿ.ನಾಯಕ್

ಕನ್ನಡ ಅನ್ನದ ಭಾಷೆಯಾಗದಿದ್ದರೆ ಕಷ್ಟ

Published:
Updated:
Deccan Herald

ಕಲಬುರ್ಗಿ: ‘ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಮತ್ತು ಕನ್ನಡದ ಸ್ಥಿತಿ ಆತಂಕದಲ್ಲಿದೆ. ಕನ್ನಡ ಅನ್ನದ ಭಾಷೆಯಾಗದಿದ್ದರೆ ಕನ್ನಡ ಉಳಿಸಿ, ಬೆಳೆಸುವುದು ಕಷ್ಟವಾಗುತ್ತದೆ ಎಂದು ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಬಿ.ನಾಯಕ್ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಪ್ರಸಾರಾಂಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘ಕರ್ನಾಟಕ ರಾಜ್ಯೋತ್ಸವ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕನ್ನಡ ಅನ್ನದ ಭಾಷೆ ಆಗಲೇಬೇಕು. ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕು. ಖಾಸಗಿ ವಲಯಗಳಲ್ಲೂ ಕನ್ನಡಿಗರಿಗೆ ಮೀಸಲಾತಿ ದೊರೆಯಬೇಕು. ಬ್ಯಾಂಕಿಂಗ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಸಿಗಬೇಕು. ಇಂಗ್ಲಿಷ್ ಮಾದರಿಯಲ್ಲಿ ಕನ್ನಡ ಕಾನ್ವೆಂಟ್ ಶಾಲೆಗಳನ್ನು ಆರಂಭಿಸಬೇಕು. ಗಡಿನಾಡಲ್ಲಿ ಕನ್ನಡ ಬೆಳೆಸಬೇಕು. ಕನ್ನಡಿಗರಿಗೆ ಉದ್ಯೋಗಾವಕಾಶ ದೊರೆಯಬೇಕು. ಇಲ್ಲವಾದಲ್ಲಿ ಕನ್ನಡ ಉಳಿಸಿ, ಬೆಳೆಸುವುದು ಕಷ್ಟವಾಗುತ್ತದೆ’ ಎಂದರು.

‘ಸುಪ್ರೀಂಕೋರ್ಟ್ ಆದೇಶದ ಬಳಿಕ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡುವುದೂ ಕಷ್ಟವಾಗುತ್ತಿದೆ. ನಿಜಾಮರ ಆಡಳಿತದಲ್ಲಿ ಬೀದರ್ ಜಿಲ್ಲೆ ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಹೊರಗಡೆ ಉರ್ದು ನಾಮಫಲಕ ಹಾಕಿ, ಒಳಗಡೆ ಕನ್ನಡ ಕಲಿಸುತ್ತಿದ್ದರು. ಆದರೆ, ಇಂದು ರಾಜ್ಯದಲ್ಲಿ ಕನ್ನಡದ ಪರಿಸ್ಥಿತಿ ಹೇಗಾಗಿದೆಯೆಂದರೆ ಶಾಲೆಯ ಹೊರಗಡೆ ಕನ್ನಡ ನಾಮಫಲಕ ಹಾಕಿ, ಒಳಗಡೆ ಇಂಗ್ಲಿಷ್‌ನಲ್ಲಿ ಕಲಿಸಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕುಲಪತಿ ಪ್ರೊ.ಎಸ್.ಆರ್.ನಿರಂಜನ ಮಾತನಾಡಿ, ‘ನವೆಂಬರ್ 1ರಂದು ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಒಬ್ಬ ವಿದ್ಯಾರ್ಥಿಯೂ ಬರಲಿಲ್ಲ. ಬಾವುಟ ಹಾರಿಸುವಾಗ ಯಾರೂ ಇರಲಿಲ್ಲ. ಕನ್ನಡ ನೆಲ, ಜಲ, ಭಾಷೆ ಉಳಿಯಬೇಕು ಎಂಬ ಕನಿಷ್ಠ ಜ್ಞಾನ, ತಿಳಿವಳಿಕೆಯೂ ಇಂದಿನ ವಿದ್ಯಾರ್ಥಿಗಳಲ್ಲಿ ಇಲ್ಲ. ಇದು ಅತ್ಯಂತ ವಿಷಾದನೀಯ’ ಎಂದರು.

ಪ್ರಸಾರಾಂಗ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಿಂಡಿಕೇಟ್ ಸದಸ್ಯ ಚಂದ್ರಶೇಖರ ನಿಟ್ಟೂರೆ, ವಿದ್ಯಾವಿಷಯಕ ಪರಿಷತ್ ಸದಸ್ಯ ಡಾ. ಭಗವಂತಪ್ಪ ಬುಳ್ಳಾ, ಕುಲಸಚಿವರಾದ ಪ್ರೊ.ಸಿ.ಸೋಮಶೇಖರ, ಪ್ರೊ.ಡಿ.ಎಂ.ಮದರಿ, ಹಣಕಾಸು ಅಧಿಕಾರಿ ಪ್ರೊ.ಲಕ್ಷ್ಮಣ ರಾಜನಾಳಕರ್ ಇದ್ದರು.

ಚಂದ್ರುಗೆ ಚಿನ್ನದ ಪದಕ ಪ್ರದಾನ
ದಿ. ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ರಾಜ್ಯ ಮಟ್ಟದ ಕನ್ನಡ ಕಥಾ ಸ್ಪರ್ಧೆಯಲ್ಲಿ ಚಂದ್ರು ಆರ್.ಪಾಟೀಲ (ಚಿನ್ನದ ಪದಕ), ಎಚ್.ಎಸ್.ಬೇನಾಳ (ಬೆಳ್ಳಿ ಪದಕ), ಪ್ರವೀಣ ಪೊಲೀಸ್‌ಪಾಟೀಲ (ಕಂಚಿನ ಪದಕ) ಅವರಿಗೆ ಪ್ರಶಸ್ತಿ ಪತ್ರ ಪ್ರದಾನ ಮಾಡಲಾಯಿತು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
ಡಾ. ವಿಕ್ರಮ ವಿಸಾಜಿ, ಡಾ. ವೆಂಕಟಗಿರಿ ದಳವಾಯಿ, ವಿಜಯಲಕ್ಷ್ಮಿ ಶಿ.ಕೌಟಗೆ, ಡಾ. ಎಸ್.ಎಸ್.ಗುಬ್ಬಿ, ಕುಪೇಂದ್ರ ಪಾಟೀಲ, ಡಾ. ಹಣಮಂತ ಮೇಲಕೇರಿ, ಡಾ. ಶಿವಾನಂದ ಎಸ್.ವಿರಕ್ತಮಠ, ಬಿ.ಎಚ್.ನಿರಗುಡಿ, ಡಾ. ಎಂ.ಬಿ.ಕಟ್ಟಿ, ಡಾ. ಶಾಮರಾವ ರಾಮಣ್ಣ, ಡಾ. ಎಸ್.ಎನ್.ಮೂಲಗಿ, ಡಾ. ಪ್ರಭಾಕರ ಎಂ.ನಿಂಬರಗಿ, ಮಧು ಬಿರಾದಾರ, ಶಕುಂತಲಾ ಜಿ.ಸೋನಾರ, ಮಾಸೂದ್ ಅಲಿ ತಿಮ್ಮಾಪುರಿ, ಡಾ. ಎಸ್.ಎಸ್.ಹೊಸಮನಿ, ಡಾ. ಸ್ವಾಮಿರಾವ ಕುಲಕರ್ಣಿ, ಶ್ರೀಮಂತ ನಿಂಗಪ್ಪ ಚಿಂಚನಸೂರ, ಜಗನ್ನಾಥ ಜಕ್ಕೇಪಳ್ಳಿ, ನಿಂಗಪ್ಪ ಡಿ.ಕೇರಿ, ಜಲಜಾಕ್ಷಿ ಪಿ.ಕುಲಕರ್ಣಿ, ಬಿ.ಎನ್.ಪಾಟೀಲ ಹಾಗೂ ಸತೀಶಕುಮಾರ ಪಿ.ವಲ್ಲೆಪುರೆ ಅವರಿಗೆ ‘ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪುರಸ್ಕೃತರ ಅಭಿಮತ
ರಾಜ್ಯೋತ್ಸವ ಪ್ರಶಸ್ತಿಯನ್ನು ನಿರೀಕ್ಷಿಸಲಿರಲಿಲ್ಲ. ಪ್ರಶಸ್ತಿಯು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ನನ್ನ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಖುಷಿ ಇಮ್ಮಡಿಗೊಳಿಸಿದೆ.
-ಡಾ. ವೆಂಕಟಗಿರಿ ದಳವಾಯಿ

ಹೈದರಾಬಾದ್ ಕರ್ನಾಟಕ ಭಾಗದಲ್ಲಿನ ಯುವ ಬರಹಗಾರರನ್ನು ಪ್ರೋತ್ಸಾಹಿಸಲು ವಿಶ್ವವಿದ್ಯಾಲಯವು ಪ್ರಶಸ್ತಿ ನೀಡಿರುವುದು ಸಂತದ ತಂದಿದೆ. ಇನ್ನಷ್ಟು ಬರೆಯಬೇಕು ಎಂಬ ಹುಮ್ಮಸ್ಸು ಬಂದಿದೆ.
-ಚಂದ್ರು ಆರ್.ಪಾಟೀಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !