ಭಾನುವಾರ, ಜೂನ್ 13, 2021
24 °C
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ

ಜಿಲ್ಲೆಯಾದ್ಯಂತ ಸಡಗರ, ವಿಶೇಷ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಅಯೋಧ್ಯೆಯಲ್ಲಿ ಬುಧವಾರ ಬೆಳಿಗ್ಗೆ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಶಿಲಾನ್ಯಾಸ ಕಾರ್ಯಕ್ರಮ ನೆರವೇರುತ್ತಲೇ ಕಲಬುರ್ಗಿ ನಗರ ಮತ್ತು ಜಿಲ್ಲೆಯಾದ್ಯಂತ ವಿವಿಧ ದೇವಸ್ಥಾನಗಳಲ್ಲಿ ‌ವಿಶೇಷ ಪೂಜೆ ನೆರವೇರಿದವು.

ನಗರದ ಶರಣ ಬಸವೇಶ್ವರ ದೇವಸ್ಥಾನದ ಎದುರು ಬೃಹದಾಕಾರದ ರಾಮನ ಕಟೌಟ್‍ಗೆ ಆಂದೋಲಾದ  ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಹಾಲಿನಿಂದ ಅಭಿಷೇಕ ಮಾಡಲಾಯಿತು. ಈ ಸಂದರ್ಭದಲ್ಲಿ ಜಯ ರಾಮ ಶ್ರೀರಾಮ, ಜೈ ಶ್ರೀರಾಮ್ ಘೋಷಣೆ ಕೂಗಲಾಯಿತು. ಇಡೀ ನಗರದಲ್ಲಿ ರಾಮ ನಾಮ ಜಪ ನಡೆಯಿತು.

ಈ ಸಂದರರ್ಭದಲ್ಲಿ ಮಾತನಾಡಿದ ಸಿದ್ಧಲಿಂಗ ಸ್ವಾಮೀಜಿ, ರಾಮ ಮಂದಿರ ನಿರ್ಮಾಣ ಕೇವಲ ಧಾರ್ಮಿಕ ಸಂಕೇತವಲ್ಲ. ಭಾರತದ ಶಕ್ತಿ ಪ್ರದರ್ಶನದ ಸಂಕೇತ. ಸ್ವಾಭಿಮಾನಿಗಳ ದಿನ. ಶ್ರೀರಾಮನು ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾನೆ. ಯುಗ ಪುರುಷನಿಗೆ ಭಾರತೀಯರು ನೀಡಿದ ಗೌರವ ದಿನ ಎಂದು ಬಣ್ಣಿಸಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿದರು. ಪಾಳಾ ಮಠದ ಗುರುಮೂರ್ತಿ ಶಿವಾಚಾರ್ಯರು, ಸ್ಟೇಷನ್ ಬಬಲಾದನ ರೇವಣಸಿದ್ದ ಶಿವಾಚಾರ್ಯರು, ವೆಂಕಟಬೇನೂರಿನ ಸಿದ್ಧರೇಣುಕಾ ಶಿವಾಚಾರ್ಯರು, ಶ್ರೀರಾಮ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ, ಮಹೇಶ ಗೊಬ್ಬೂರ, ರವಿ ದೇಗಾಂವ, ಶ್ರೀಕಾಂತ ರೆದ್ದಿ, ಮಲ್ಲು ಮೋಟಗಿ, ಸಂತೋಷ ಪಾಟೀಲ, ಅಂಬು ಕುಂಬಾರ, ಮಹಾಂತೇಶ ಕಲಶೆಟ್ಟಿ ಪಾಲ್ಗೊಂಡಿದ್ದರು.

ನಗರದ ಜೇವರ್ಗಿ ರಸ್ತೆಯ ರಾಮಮಂದಿರ, 200 ವರ್ಷದ ಇತಿಹಾಸದ ಬ್ರಹ್ಮಪುರದ ರಾಮ ಮಂದಿರ,  ಕೋರಂಟಿ ಹನುಮಾನ ಮಂದಿರ, ಕಲ್ಯಾಣ ಕರ್ನಾಟಕ ಆರಾಧ್ಯ ದೈವ ಶರಣಬಸವೇಶ್ವರ ಮಂದಿರ ಸೇರಿ ವಿವಿಧ ಮಠ–ಮಂದಿರಗಳಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಲಾಯಿತು.

ಸುಮಾರು ಮೂರು ದಶಕಗಳ ಕನಸು ನನಸಾದ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ವತಿಯಿಂದ ಈ ಸಮಾರಂಭವನ್ನು ಹಬ್ಬದ ರೀತಿಯಲ್ಲಿ ಆಚರಿಸುವಂತೆ ಸಂಘಟನೆಯ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಕರೆ ನೀಡಲಾಗಿತ್ತು. ಹೀಗಾಗಿ, ವಿವಿಧ ವೃತ್ತಗಳಲ್ಲಿ ವಿಜಯೋತ್ಸವ ಆಚರಿಸಲಾಯಿತು.

ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಸಲಹೆಯ ಮೇರೆಗೆ ಜಿಲ್ಲೆಯಲ್ಲಿ ಎಲ್ಲರೂ ಮನೆಯಲ್ಲಿ ರಾಮನಾಮ ಜಪ ಮಾಡುವ ಮೂಲಕ ಮಂದಿರ ಶಿಲಾನ್ಯಾಸ ಸಂದರ್ಭದಲ್ಲಿ ರಾಮ ಮಂತ್ರವನ್ನು ಜಪಿಸಿದರು.

ಜೇವರ್ಗಿ ಕಾಲೊನಿ ರಾಯರ ಮಠ, ಬಿದ್ದಾಪುರ ಕಾಲೊನಿ ರಾಯರ ಮಠ, ಬ್ರಹ್ಮಪುರ ಉತ್ತರಾದಿ ಮಠ ಹಾಗೂ ಜಯತೀರ್ಥ ನಗರದ ಲಕ್ಷ್ಮೀ ನಾರಾಯಣ ಮಂದಿರ, ನ್ಯೂ ರಾಘವೇಂದ್ರ ಕಾಲೊನಿ ವೆಂಕಟೇಶ್ವರ ದೇವಸ್ಥಾನಗಳಲ್ಲಿ ಪೂಜೆ ನೆರವೇರಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.