ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ದುರಾಡಳಿತ ಜನರಿಗೆ ತಿಳಿಸಿ: ರಣದೀಪ್ ಸಿಂಗ್ ಸುರ್ಜೇವಾಲಾ

ಖರ್ಗೆ ಅಭಿನಂದನಾ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರಿಗೆ ಸುರ್ಜೇವಾಲಾ ಸೂಚನೆ
Last Updated 1 ಡಿಸೆಂಬರ್ 2022, 16:34 IST
ಅಕ್ಷರ ಗಾತ್ರ

ಕಲಬುರಗಿ: ಬಿಜೆಪಿ ಸರ್ಕಾರದ ದುರಾಡಳಿತ ಮತ್ತು ಕಲ್ಯಾಣ ಕರ್ನಾಟಕಕ್ಕೆ ಆಗುತ್ತಿರುವ ತಾರತಮ್ಯದ ವಿಚಾರಗಳನ್ನು ಪ್ರತಿಯೊಬ್ಬರಿಗೂ ಮುಟ್ಟಿಸಬೇಕು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಸಕ್ತಿ ವಹಿಸಿ ಸಂವಿಧಾನ ತಿದ್ದುಪಡಿ ಮಾಡಿಸಿ 371 (ಜೆ) ಕಲಂನಿಂದ ಆದ ಪ್ರಯೋಜನಗಳ ಬಗ್ಗೆ ತಿಳಿಸಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕಾರ್ಯಕರ್ತರಿಗೆ ಸೂಚಿಸಿದರು.

ಎಐಸಿಸಿ ಅಧ್ಯಕ್ಷರಾಗಿ ಚುನಾಯಿತರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಡಿ 10ರಂದು ನಗರದಲ್ಲಿ ಆಯೋಜಿಸಿರುವ ಅಭಿನಂದನಾ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರತಿ ಗ್ರಾಮ ಮಟ್ಟದಲ್ಲಿ ಕಾರ್ಯಕರ್ತರ ಸಭೆಗಳು ನಡೆಯಬೇಕು. ಈ ಭಾಗಕ್ಕೆ ಮಹತ್ತರ ಕೊಡುಗೆ ನೀಡಿದ ಮಲ್ಲಿಕಾರ್ಜುನ ಖರ್ಗೆ ಅವರ ಕಾರ್ಯಕ್ರಮ ಐತಿಹಾಸಿಕವಾಗಬೇಕು’ ಎಂದರು.

‘ಪ್ರತಿ ಗ್ರಾಮ, ಹೋಬಳಿ, ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕ್ರಮದ ಬಗ್ಗೆ ಪ್ರಚಾರ ನಡೆಸಬೇಕು. ನಿಮ್ಮ ತಾಲ್ಲೂಕಿನಲ್ಲಿ ನಡೆಯುವ ಸಭೆಯಲ್ಲಿ ಮುಂದೆ ಯಾವ ಕಾರ್ಯ ಮಾಡಬೇಕು ಎಂಬುದನ್ನು ನಿರ್ಧರಿಸಿಕೊಳ್ಳಿ’ ಎಂದು ಹೇಳಿದರು.

‘ನಮಗೆ ಸದ್ಯಕ್ಕೆ ಅಚ್ಛೆ ದಿನ್ ಬೇಡ, ಹಳೆಯ ದಿನಗಳನ್ನೇ ವಾಪಸ್ ನೀಡಿ ಎಂದು ಕೇಳಿಕೊಳ್ಳುವ ಸ್ಥಿತಿ ಸರ್ಕಾರ ಸೃಷ್ಟಿಸಿದೆ. ಅವರದೇ ಪಕ್ಷದ ಕಾರ್ಯಕರ್ತ ಸಂತೋಷ್ ಸಚಿವರಿಗೆ 40 ಪರ್ಸೆಂಟ್ ಲಂಚ ನೀಡಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಂಡರು. ಇದರ ಬಗ್ಗೆ ಬಿಜೆಪಿ ನಾಯಕರು ಮಾತನಾಡುತ್ತಿಲ್ಲ’ ಎಂದು ದೂರಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾದ ಅಧಿಕಾರದಲ್ಲಿದ್ದಾಗ ಜಾರಿಗೊಳಿಸಿದ 371 (ಜೆ) ಕಲಂ ಪರಿಣಾಮ ಈ ಭಾಗದ ಸುಮಾರು 40 ಸಾವಿರ ಮಕ್ಕಳಿಗೆ ವೈದ್ಯಕೀಯ ಸೀಟು ಲಭಿಸಿದೆ. ಕಾಂಗ್ರೆಸ್ ಸರ್ಕಾರದ 5 ವರ್ಷಗಳ ಅವಧಿಯಲ್ಲಿ 30 ಸಾವಿರ ಯುವಕರಿಗೆ ಸರ್ಕಾರಿ ನೌಕರಿ ನೀಡಲಾಗಿದೆ. ಈಗ ಈ ಭಾಗದ ಅಭಿವೃದ್ಧಿಗೆ ಹೊಸ ಯಜ್ಞ ಆರಂಭವಾಗಬೇಕಿದೆ. ಇದರಿಂದ ಈ ಭಾಗದ ಜನರಿಗೆ ಉದ್ಯೋಗ, ಶಿಕ್ಷಣ ಸಿಗುವಂತೆ ಆಗಬೇಕು. ಈಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಎಂ.ಬಿ. ಪಾಟೀಲ, ಈಶ್ವರ ಖಂಡ್ರೆ ಹಾಗೂ ಎಲ್ಲಾ ನಾಯಕರ ನೇತೃತ್ವದಲ್ಲಿ ಡಿ.10 ರಂದು ಹೊಸ ಸಂಕಲ್ಪದಿಂದ ಕಲ್ಯಾಣ ಕರ್ನಾಟಕ ಅಭಿವೃ
ದ್ಧಿಗೆ ಯಜ್ಞ ಆರಂಭಿಸಬೇಕಿದೆ’ ಎಂದರು.

‘ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಬೊಮ್ಮಾಯಿ ಅವರ ಸರ್ಕಾರ ಕೇವಲ ಆಸೆ ತೋರಿಸುತ್ತಿದೆ. ಈ ವಿಚಾರವಾಗಿ ಬೊಮ್ಮಾಯಿ ಸರ್ಕಾರದ ಪ್ರಸ್ತಾವನೆ ಕೇಂದ್ರದ ಮೋದಿ ಸರ್ಕಾರ ಕಸದ ಬುಟ್ಟಿಗೆ ಎಸೆದಿದೆ. ಹೀಗಾಗಿ ಪರಿಶಿಷ್ಟರ ಮೀಸಲಾತಿ ಹೆಚ್ಚಳ ಬಿಜೆಪಿಯಿಂದ ಅಸಾಧ್ಯ. ಇದು ಕೇವಲ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ನಾವು ಅದನ್ನು ಮಾಡಲು ಕಟಿಬದ್ಧರಾಗಿದ್ದೇವೆ. ಜನರ ಬದುಕಿನ ಜತೆ ಚೆಲ್ಲಾಟ ಆಡುವುದು ಬಿಜೆಪಿ ಕೆಲಸ. ಆದರೆ ಕಾಂಗ್ರೆಸ್‌ದು ಜನರ ಬದುಕು ಕಟ್ಟುವ ಕೆಲಸವಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಜನರ ಜತೆ ಬಿಜೆಪಿ ಸರ್ಕಾರ ಆಡುತ್ತಿರುವ ಆಟವನ್ನು ನಿಲ್ಲಿಸಬೇಕಿದೆ. ಬಿಜೆಪಿ ಸಮಾಜ ಒಡೆದರೆ, ನಾವು ಸಮಾಜ ಒಂದುಗೂಡಿಸುತ್ತೇವೆ’ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಕಾರ್ಯಕರ್ತರು ಪಕ್ಷದ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಈ ಭಾಗಕ್ಕೆ ವಿಶೇಷ ಸ್ಥಾನಮಾನ ತಂದಿರುವ ಮಲ್ಲಿಕಾರ್ಜುನ ಖರ್ಗೆ ಅವರ ಋಣ ತೀರಿಸಬೇಕಾದ ಕೆಲಸ ಎಲ್ಲರೂ ಸೇರಿಕೊಂಡು ಮಾಡಬೇಕು. ಮಲ್ಲಿಕಾರ್ಜುನ ಖರ್ಗೆ ಅವರಿಂದ ಇಡೀ ದೇಶ ಈ ಭಾಗದತ್ತ ತಿರುಗಿ ನೋಡುತ್ತಿದೆ’ ಎಂದರು.

‘ಈ ಬಾರಿ ಕಲ್ಯಾಣ ಕರ್ನಾಟಕದಲ್ಲಿ 30ರಿಂದ 35 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಯಾರೇ ಸರ್ಕಾರ ರಚನೆ ಮಾಡಿದರೂ, ಇಲ್ಲಿನವರನ್ನು ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ. ಪ್ರತಿ ಕ್ಷೇತ್ರದಲ್ಲೂ ಎಲ್ಲರೂ ಕೆಲಸ ಮಾಡೋಣ ಎಂದು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್, ಕೆಪಿಸಿಸಿ ಉಪಾಧ್ಯಕ್ಷ ಡಾ. ಶರಣಪ್ರಕಾಶ ಪಾಟೀಲ, ಪ್ರಧಾನ ಕಾರ್ಯದರ್ಶಿ ಶರಣಕುಮಾರ ಮೋದಿ, ಶಾಸಕರಾದ ಎಂ.ವೈ. ಪಾಟೀಲ, ಕನೀಜ್ ಫಾತಿಮಾ, ರಾಜಶೇಖರ ಪಾಟೀಲ ಹುಮನಾಬಾದ್, ರಹೀಂ ಖಾನ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ವಿವಿಧ ಘಟಕಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

‘ಸಮಾರಂಭಕ್ಕೆ 1.5 ಲಕ್ಷ ಜನ ಸೇರಿಸುವ ಗುರಿ’
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನಾ ಸಮಾರಂಭದ ನೆಪದಲ್ಲಿ ಪಕ್ಷದ ಸಂಘಟನೆಗೆ ಒತ್ತು ನೀಡಲು ಕಾಂಗ್ರೆಸ್ ಮುಖಂಡರು ತೀರ್ಮಾನಿಸಿದ್ದಾರೆ. ಡಿಸೆಂಬರ್ 10ರಂದು ಕಲಬುರಗಿಯ ಎನ್‌.ವಿ. ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಕನಿಷ್ಠ 1.5 ಲಕ್ಷ ಜನರನ್ನು ಸೇರಿಸುವ ಗುರಿ ನೀಡಲಾಗಿದೆ.

ಕಲಬುರಗಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನೇತೃತ್ವದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಈ ಗುರಿ ನೀಡಲಾಯಿತು. ಖರ್ಗೆ ಅವರನ್ನು ಗಂಜ್‌ನ ನಗರೇಶ್ವರ ಶಾಲೆಯಿಂದ ಎನ್‌.ವಿ. ಮೈದಾನದವರೆಗೆ ಮೆರವಣಿಗೆ ನಡೆಸಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಿಂದಲೂ ಜನರನ್ನು ಕರೆತರುವಂತೆ ಸೂಚನೆ ನೀಡಲಾಗಿದೆ.

ಕ್ಷೇತ್ರವಾರು ಸಭೆ ಡಿ 4ರಿಂದ
ಡಿ.4ರಿಂದ ಮೂರು ದಿನ ಕಲ್ಯಾಣ ಕರ್ನಾಟಕದ ಪ್ರತಿ ವಿಧಾನಸಭೆಯ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಕರ್ತರ ಸಭೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದರು.

‘ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಕೆಪಿಸಿಸಿಯಿಂದ ವೀಕ್ಷಕರ ನಿಯೋಜನೆ ಮಾಡಲಾಗುವುದು. ಪಕ್ಷದ ಟಿಕೆಟ್ ಆಕಾಂಕ್ಷಿಗಳು, ಶಾಸಕರು, ಮಾಜಿ ಸಚಿವರು ಎಲ್ಲರೂ ಸಭೆ ನಡೆಸಿ, ಕಲಬುರಗಿಯಲ್ಲಿ ಡಿ 10ರಂದು ನಡೆಯುವ ಕಾರ್ಯಕ್ರಮಕ್ಕೆ ಎಷ್ಟು ಜನರನ್ನು ಸೇರಿಸಲಿದ್ದೀರಿ ಎಂಬುದು ತಿಳಿಯಲಿದೆ. ನೀವು ಮಾಡಿದ ಕೆಲಸದ ಮಾಹಿತಿಯನ್ನು ಪಕ್ಷದ ಜಿಲ್ಲಾ ಕಾರ್ಯದರ್ಶಿಗೆ ನೀಡಬೇಕು. ನಾಯಕರಾದವರು ತನು, ಮನ, ಧನದಿಂದ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

*
ಬಿಜೆಪಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವುದನ್ನು ವಿರೋಧಿಸಿತ್ತು. ಎಲ್‌.ಕೆ. ಅಡ್ವಾಣಿ ಅವರು ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದಿದ್ದರು. ಆದರೆ, ಖರ್ಗೆ ಅವರು ಅದನ್ನು ಸಾಧ್ಯವಾಗಿಸಿದರು

-ರಣದೀಪ್‌ ಸಿಂಗ್ ಸುರ್ಜೇವಾಲಾ,ಎಐಸಿಸಿ ಪ್ರಧಾನ ಕಾರ್ಯದರ್ಶಿ

*
ರಾಜ್ಯ ಬಿಜೆಪಿ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಗಮನ ನೀಡದೇ ಭ್ರಷ್ಟಾಚಾರ, ಕೋಮುವಾದಿ ಅಜೆಂಡಾಗಳನ್ನು ಈಡೇರಿಸಿಕೊಳ್ಳುವಲ್ಲಿ ನಿರತವಾಗಿದೆ. ಹೀಗಾಗಿ, ಜನರು ಬೇಸತ್ತಿದ್ದು, ಸರ್ಕಾರವನ್ನು ಬದಲಿಸಲು ತೀರ್ಮಾನಿಸಿದ್ದಾರೆ
-ಎಂ.ಬಿ. ಪಾಟೀಲ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT