ಗುರುವಾರ , ಮಾರ್ಚ್ 23, 2023
21 °C

ಕಲಬುರಗಿ ಪಾಲಿಕೆಯಿಂದ ರಂಗೋಲಿ, ಚಿತ್ರಕಲಾ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ದೇಶದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಮತ್ತು ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಸೋಮವಾರ ಮಹಾನಗರ ಪಾಲಿಕೆಯ ವತಿಯಿಂದ ಟೌನ್‌ಹಾಲ್‌ನಲ್ಲಿ ಆಯೋಜಿಸಿದ್ದ ರಂಗೋಲಿ ಹಾಗೂ ಚಿತ್ರಕಲೆ ಸ್ಪರ್ಧೆಗಳಲ್ಲಿ 300ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸ್ವಚ್ಛ ಭಾರತ ಕುರಿತ ವಿಷಯದ ಕುರಿತು ಮಕ್ಕಳು ತಮ್ಮ ಯೋಚನಾ ಲಹರಿಯಲ್ಲಿದ್ದ ಸಂಗತಿಗಳನ್ನು ಕುಂಚದ ಮೂಲಕ ಕಲೆಯಾಗಿಸಿದರು.

ಸ್ಪರ್ಧೆಗಳಲ್ಲಿ ವಿಜೇತರಾದ ತಲಾ ಮೂವರು ಜನ ಮಹಿಳಾ ಮತ್ತು ಪುರುಷರಿಗೆ ನಗದು ಬಹುಮಾನ ವಿತರಿಸಲಾಯಿತು. ಮೊದಲನೇ ಸ್ಥಾನ ಪಡೆದವರಿಗೆ ₹ 15 ಸಾವಿರ, ಎರಡನೇ ಸ್ಥಾನ ಪಡೆದವರಿಗೆ ₹ 10 ಸಾವಿರ ಹಾಗೂ ಮೂರನೇ ಸ್ಥಾನ ಗಳಿಸಿದವರಿಗೆ ₹ 7.5 ಸಾವಿರ ನಗದು ಹಣ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ರಾಜ್ಯೋತ್ಸವದ ಪ್ರಯುಕ್ತ ಶಾಲಾ–ಕಾಲೇಜುಗಳಿಗೆ ರಜೆ ಇದ್ದ ಕಾರಣ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಗಾಂಧಿ ಪ್ರತಿಮೆ ಸಮೀಪ ಬಯಲು ಆವರಣದಲ್ಲಿ ರಂಗೋಲಿ ಸ್ಪರ್ಧೆ ನಡೆಯಿತು. ಇದರಲ್ಲಿ ಚಿಕ್ಕ ಮಕ್ಕಳೊಂದಿಗೆ ಮಹಿಳೆಯರು, ಗೃಹರಕ್ಷಕ ದಳದ ಮಹಿಳಾ ಸಿಬ್ಬಂದಿ ಭಾಗವಹಿಸಿದ್ದರು. ರಾಜ್ಯೋತ್ಸವ ದಿನವಾದ ಕಾರಣ ಕೆಂಪು ಮತ್ತು ಹಳದಿ ಬಣ್ಣದಿಂದ ಕೂಡಿದ ಹೆಚ್ಚಿನ ರಂಗೋಲಿ ಚಿತ್ರಗಳು ಕಂಡುಬಂದವು.

ಟೌನ್‍ಹಾಲ್ ಸಭಾಂಗಣದಲ್ಲಿ ಚಿತ್ರಕಲೆ ಸ್ಪರ್ಧೆ ಜರುಗಿತು. ಇದರಲ್ಲೂ ಪುಟ್ಟ–ಪುಟ್ಟ ಮಕ್ಕಳು ಭಾಗಹಿಸಿ, ಸ್ಥಳದಲ್ಲೇ ಚಿತ್ರಗಳನ್ನು ಬಿಡಿಸಿ ಗಮನ ಸೆಳೆದರು. ಸ್ಪರ್ಧೆಗೆ ವಿದ್ಯಾರ್ಥಿಗಳು ಸೇರಿ 160 ಜನ ಚಿತ್ರ ಕಲಾವಿದರು ತಮ್ಮ ಕೈಚಳಕ ತೋರಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ನಲಿನ್ ಅತುಲ್, ಜಿ.ಪಂ. ಸಿಇಓ ಡಾ.ದಿಲೀಷ್ ಶಶಿ, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಚಿತ್ರಕಲೆ ಹಾಗೂ ರಂಗೋಲಿ ಸ್ಪರ್ಧೆಯನ್ನು ವೀಕ್ಷಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.