ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರಿಗಳ ಬಿಡುಗಡೆಗೆ ದೌರ್ಜನ್ಯ ವಿರೋಧಿ ವೇದಿಕೆ ಆಕ್ರೋಶ

Last Updated 2 ಸೆಪ್ಟೆಂಬರ್ 2022, 8:59 IST
ಅಕ್ಷರ ಗಾತ್ರ

ಕಲಬುರಗಿ: ಗುಜರಾತ್‌ ಗಲಭೆ ಸಂದರ್ಭದಲ್ಲಿ ಗರ್ಭಿಣಿ ಬಿಲ್ಕಿಸ್ ಬಾನು ಅವರ ಮೇಲೆ ನಡೆದ ಅತ್ಯಾಚಾರ ಹಾಗೂ ಅವರ ಕುಟುಂಬ ಸದಸ್ಯರ ಮಾರಣಹೋಮ ನಡೆಸಿದ 11 ಅಪರಾಧಿಗಳಿಗೆ ಗುಜರಾತ್ ಸರ್ಕಾರ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಿದ್ದನ್ನು ಖಂಡಿಸಿ ದೌರ್ಜನ್ಯ ವಿರೋಧಿ ವೇದಿಕೆಯಿಂದ ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಜಗತ್ ವೃತ್ತದಿಂದ ಆರಂಭವಾದ ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು, ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿ ತಮ್ಮ ಪ್ರತಿರೋಧ ತೋರಿಸಿದರು.

ಪ್ರತಿಭಟನಾರ್ಥವಾಗಿ ಬೃಹತ್ ಕಪ್ಪು ಬಟ್ಟೆಯನ್ನು ಮೆರವಣಿಗೆಯುದ್ದಕ್ಕೂ ಹಿಡಿದುಕೊಂಡು ಬಂದರು. ಜಿಲ್ಲಾಧಿಕಾರಿ ಕಚೇರಿ ಬಳಿ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ಡಾ. ಮೀನಾಕ್ಷಿ ಬಾಳಿ, ‘ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವು ಕ್ರೌರ್ಯದ ಪರಮಾವಧಿ ಮತ್ತು ಪಾಶವಿ ಕೃತ್ಯದ ಕೊನೆಯ ಹಂತ. ಇಂಥ ನೀಚತನಕ್ಕೆ ಕ್ಷಮೆ ನೀಡುವುದನ್ನು ಒಪ್ಪಲಾಗದು. ಈಗಾಗಲೇ ಕೇಂದ್ರ ಸರ್ಕಾರವು ಅತ್ಯಾಚಾರ, ಕೊಲೆ, ಭ್ರಷ್ಟಾಚಾರದ ಆರೋಪಿಗಳನ್ನು, ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡದಂತೆ ಸ್ಪಷ್ಟ ಮಾರ್ಗಸೂಚಿ ಹೊರಡಿಸಿದೆ. ಆದರೂ, ಆ ನಿಯಮಗಳನ್ನು ಉಲ್ಲಂಘಿಸಿ ಘೋರ ಪಾತಕ ಎಸಗಿದ 11 ಜನರನ್ನು ಬಿಡುಗಡೆ ಮಾಡಿದ್ದು ಅಮಾನವೀಯ ಕ್ರಮವಾಗಿದೆ’ ಎಂದು ಟೀಕಿಸಿದರು.

‘ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಮೇಲೆ ಪೋಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲಿ ತಕ್ಷಣ ಅವರನ್ನು ಬಂಧಿಸಬೇಕಿತ್ತು. ಆದರೆ, ಪ್ರಭಾವಿ ಸ್ವಾಮೀಜಿಯಾದ ಕಾರಣಕ್ಕೆ ಅವರನ್ನು ಬಂಧಿಸುವುದಕ್ಕೆ ವಿಳಂಬ ಮಾಡಿದ್ದು ಸರಿಯಲ್ಲ. ಪೋಕ್ಸೊದಂತಹ ಗಂಭೀರ ಪ್ರಕರಣ ದಾಖಲಾದಾಗ ಆರೋಪಿ ಯಾರು ಎಂಬುದನ್ನು ನೋಡದೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ. ನೀಲಾ ಮಾತನಾಡಿ, ‘ದೇಶದಾದ್ಯಂತ ಮಹಿಳೆಯರ ಮೇಲೆ ಅತ್ಯಾಚಾರ, ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದರೂ ಅವುಗಳನ್ನು ತಡೆಗಟ್ಟಲು ಸರ್ಕಾರಗಳು ಯಾವುದೇ ಗಂಭೀರ ಪ್ರಯತ್ನ ಮಾಡುತ್ತಿಲ್ಲ. ಬಿಲ್ಕಿಸ್ ಬಾನು ದಿಟ್ಟ ಮಹಿಳೆಯಾಗಿದ್ದಕ್ಕೆ ತಮ್ಮ ಮೇಲೆ ನಡೆದ ಅತ್ಯಾಚಾರ ಘಟನೆಗಳನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲು ಏರಿದರು. ಆದರೆ, ಬೆಳಕಿಗೆ ಬಾರದ ಎಷ್ಟೋ ಘಟನೆಗಳು ನಡೆಯುತ್ತಿವೆ’ ಎಂದು ಆರೋಪಿಸಿದರು.

ಸ್ಲಂ ಜನಾಂದೋಲನ ಸಂಘಟನೆಯ ಜಿಲ್ಲಾ ಸಂಚಾಲಕಿ ರೇಣುಕಾ ಸರಡಗಿ, ಮಮತಾ, ಪದ್ಮಾ ಎನ್. ಪಾಟೀಲ, ರಾಜ್ಯ ಸಂಚಾಲಕ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ರಾಜ್ಯ ಸಂಚಾಲಕ ಅರ್ಜುನ ಭದ್ರೆ, ಚಿಂತಕ ಮಲ್ಲೇಶಿ ಸಜ್ಜನ, ಪಾಂಡುರಂಗ ಮಾವಿನಕರ, ಶ್ರೀಮಂತ ಬಿರಾದಾರ, ಪ್ರಿಯಾಂಕಾ ಮಾವಿನಕರ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT