ಐದು ತಲೆಮಾರು ಕಂಡ ಅಪರೂಪದ ಅಜ್ಜ!

7
ನೂರು ದಾಟಿದರೂ ಚುರುಕಾದ ವ್ಯಕ್ತಿತ್ವ, ನಿಶ್ಚಿಂತೆಯೇ ಆರೋಗ್ಯದ ಗುಟ್ಟು

ಐದು ತಲೆಮಾರು ಕಂಡ ಅಪರೂಪದ ಅಜ್ಜ!

Published:
Updated:
Deccan Herald

ಕಲಬುರ್ಗಿ: ಅಫಜಲಪುರ ತಾಲ್ಲೂಕಿನ ಹೂವಿನಹಳ್ಳಿಯ ಈ ತಾತನಿಗೆ ಕೇವಲ 101ರ ಪ್ರಾಯ!  ಕ್ರಿಯಾಶೀಲ ಜೀವನಶೈಲಿ, ಆರೋಗ್ಯದ ಚಾಕರಿ, ಹೋರಾಟದಲ್ಲಿ ಸವೆಸಿದ ಹೆಜ್ಜೆಗಳು ಅವರನ್ನು ಗಟ್ಟಿಯಾಗಿಸಿವೆ. ಈಗಲೂ ಚಟುವಟಿಕೆಯಿಂದ ಇರುವ ಹಿರಿಯರ ಹೆಸರು ಗುರುಲಿಂಗಪ್ಪ ಅಮೃತರಾವ ದೇಶಮುಖ.

ಅವರ ಆರೋಗ್ಯ ಹಾಗೂ ವ್ಯಕ್ತಿತ್ವದಲ್ಲಿ ಸಾಕಷ್ಟು ಅಚ್ಚರಿಗಳಿವೆ. ಕಡುಗೆಂಪು ಬಣ್ಣ, ತೆಳು ಮೈಕಟ್ಟು, ದೊಡ್ಡ ಕಿವಿ, ಪ್ರಖರ ದೃಷ್ಟಿ, ಗಟ್ಟಿಯಾಗಿರುವ ಹಲ್ಲುಗಳು, ನೀಟಾಗಿ ಶೇವಿಂಗ್‌ ಮಾಡಿಕೊಂಡು ಠೀವಿಯಿಂದ ಕಟ್ಟೆ ಮೇಲೆ ಕುಳಿತುಕೊಳ್ಳುತ್ತಾರೆ. ಬಿಪಿ, ಶುಗರ್‌, ಮೈ ಕೈ ವಾತ ಯಾವುದೂ ಅವರ ಬಳಿ ಸುಳಿದಿಲ್ಲ!

ಗುರುಲಿಂಗಪ್ಪ ಹುಟ್ಟಿದ್ದು 1917ರ ಅಕ್ಟೋಬರ್‌ 10ರಂದು, ಭೂಸನೂರಿನಲ್ಲಿ. ಹೂವಿನಹಳ್ಳಿ ದೇಶಮುಖರ ಮನೆಗೆ ದತ್ತು ಬಂದಿದ್ದಾರೆ. ನಿಜಾಮರ ಆಡಳಿತ ಇದ್ದಾಗ 4ನೇ ಇಯತ್ತೆವರೆಗೆ ಓದಿದ್ದಾರೆ. ಹೀಗಾಗಿ, ಮರಾಠಿ ಹಾಗೂ ಉರ್ದು ಇವರಿಗೆ ಸುಲಿದ ಬಾಳೆಹಣ್ಣಿನಷ್ಟು ಸಲೀಸು. ಇಳಿವಯಸ್ಸಿನಲ್ಲಿ ಕನ್ನಡ ಕಲಿತಿದ್ದಾರೆ.

ಶಿಸ್ತಿನ ದಿನಚರಿ:  ಕರಾರುವಾಕ್‌ ಜೀವನಶೈಲಿ ಹಾಗೂ ಬಿಂದಾಸ್‌ ಮನಸ್ಥಿತಿಯೇ ಆರೋಗ್ಯದ ಗುಟ್ಟು ಎನ್ನುತ್ತಾರೆ ಅಜ್ಜ. ನಸುಕಿನ 5ಕ್ಕೆ ಏಳುತ್ತಾರೆ. ಮನೆಯ ಕಸ ಗುಡಿಸಿ, ಬಿಸಿನೀರ ಸ್ನಾನ ಮುಗಿಸಿ 7 ಗಂಟೆಯೊಳಗೇ ಉಪಾಹಾರ. ಮಧ್ಯಾಹ್ನ 12ರ ಒಳಗಾಗಿ ಬಿಸಿರೊಟ್ಟಿ, ಕೆನೆಮೊಸರು, ಶೇಂಗಾ ಚಟ್ನಿ, ಅನ್ನ–ತುಪ್ಪ ನಿತ್ಯದ ಊಟ. ಸಿಹಿತಿಂಡಿ ಹಾಗೂ ಮೆಣಸಿನಕಾಯಿ ಭಜ್ಜಿ ಅಚ್ಚುಮೆಚ್ಚು. ಹಸಿಶೇಂಗಾ ಹಾಗೂ ಬೆಲ್ಲ ಇಷ್ಟದ ಕುರುಕಲು.

ಏಲಕ್ಕಿ–ಲವಂಗ ತಿನ್ನುವುದು ಬಿಟ್ಟರೆ ಬೇರಾವ ಚಟಗಳೂ ಇಲ್ಲ. ಮಧ್ಯಾಹ್ನ ಕೆಲಹೊತ್ತು ಮನೆ–ಹೊಲದ ಕೆಲಸಗಳು, ಲೆಕ್ಕಪತ್ರ ನೋಡಿಕೊಳ್ಳುತ್ತಾರೆ. ಸಂಜೆ 7ರ ಹೊತ್ತಿಗೆ ಅನ್ನ–ಹಾಲುಊಟ ಮುಗಿಸಿ, 8ರೊಳಗೇ ನಿದ್ರೆಗೆ ಜಾರುತ್ತಾರೆ.

ಹೋರಾಟದ ಹಾದಿ:  ಚಲೇಜಾವ್‌ ಚಳವಳಿಯಲ್ಲಿ ಗುರುಲಿಂಗಪ್ಪ ಅವರ ಪಾತ್ರವೂ ದೊಡ್ಡದು. ಮಹಾರಾಷ್ಟ್ರದ ದುದನಿಯಲ್ಲಿ 200 ಮಂದಿಯನ್ನು ಸೇರಿಸಿಕೊಂಡು ಪೊಲೀಸ್‌ ಠಾಣೆ ಸುಟ್ಟಿದ್ದು, ರೈಲುಗಳನ್ನು ನಿಲ್ಲಿಸಿ ಪೊಲೀಸರನ್ನು ಥಳಿಸಿದ ನೆನಪು ಅವರಿಗೆ ಇನ್ನೂ ಇದೆ. ಗೋವಾ ವಿಮೋಚನಾ ಚಳವಳಿ, ಹೈದರಾಬಾದ್‌ ಕರ್ನಾಟಕ ವಿಮೋಚನಾ ಚಳವಳಿಯಲ್ಲೂ  ಸಕ್ರಿಯರಾಗಿದ್ದರು.

ಸುತ್ತಲಿನ ಹಳ್ಳಿಗಳಲ್ಲಿ ಅವರು ‘ದಂದಂ’ (ಜಮೀನ್ದಾರ) ಮಂದಿ ಎಂದೇ ಹೆಸರಾದವರು. 160 ಎಕರೆ ಜಮೀನು, ದೊಡ್ಡಮನೆ, ತುಂಬ ಕುಟುಂಬ ಇದ್ದರೂ ಹೋರಾಟದಿಂದ ಹಿಂದೆ ಉಳಿಯಲಿಲ್ಲ. 70 ವರ್ಷ ‘ಪೊಲೀಸ್‌ ಗೌಡಕಿ’ ಮಾಡಿದ್ದಾರೆ. ಇದಕ್ಕಾಗಿ ಮಾಸಿಕ ₹ 3 ಸಾವಿರ ವಜೀಫಾ (ಸಂಬಳ) ಬರುತ್ತಿತ್ತು.

ಮೊಮ್ಮಕ್ಕಳಿಗೂ ಮೊಮ್ಮಕ್ಕಳು:  ಗುರುಲಿಂಗಪ್ಪ ಅವರ ಪತ್ನಿ ಗಜಾಬಾಯಿ ಅವರಿಗೂ ಈಗ 92 ವರ್ಷ. ಇವರಿಗೆ ಮೂವರು ಪುತ್ರರು, ಆರು ಪುತ್ರಿಯರು. ಈ 9 ಮಂದಿಯ ಹೊಟ್ಟೆಯಿಂದ 27 ಮೊಮ್ಮಕ್ಕಳು. ಈ ಮೊಮ್ಮಕ್ಕಳಲ್ಲಿ ಕೆಲವರಿಗೆ ಈಗ ಮಕ್ಕಳಾಗಿವೆ. ಅಂದರೆ ಈ ಅಜ್ಜ ಐದು ತಲೆಮಾರು ಕಂಡಿದ್ದಾರೆ. ವಂಶಾವಳಿ ಪ್ರಕಾರ ಮಕ್ಕಳ– ಮೊಮ್ಮಕ್ಕಳು– ಮರಿ ಮೊಮ್ಮಕ್ಕಳು– ಜಿರಿ ಮೊಮ್ಮಕ್ಕಳು ಎಂದು ಗುರುತಿಸಲಾಗುತ್ತದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !