ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಪರಿತರ ಕಾರ್ಡ್‌; ಗೊಂದಲ ಮೂಡಿಸಿದ ‘ಆಸ್ತಿ ಲೆಕ್ಕ’

ಹಳ್ಳಿಗಳಲ್ಲಿ ಇನ್ನೂ ವಿಳಂಬ ಆಗುತ್ತಿರುವ ಪಡಿತರ ವಿತರಣೆ, ತಂತ್ರಿಕ ಸಮಸ್ಯೆ ಪರಿಹರಿಸಲು ಕಾರ್ಡುದಾರರ ಮನವಿ
Last Updated 28 ಸೆಪ್ಟೆಂಬರ್ 2020, 9:22 IST
ಅಕ್ಷರ ಗಾತ್ರ

ಕಲಬುರ್ಗಿ: ರಾಜ್ಯ ಸರ್ಕಾರದ ಹೊಸ ನಿಯಮಾವಳಿ ಪ್ರಕಾರ, ಪಡಿತರ ಚೀಟಿ ಮತ್ತು ಧಾನ್ಯ ಪಡೆಯುವಲ್ಲಿ ಜಿಲ್ಲೆಯ ಹಲವು ಫಲಾನುಭವಿಗಳು ವಿಫಲವಾಗಿದ್ದಾರೆ. ಜನರ ಬಳಿ ಇರುವ ಆಸ್ತಿ–ಪಾಸ್ತಿ ಲೆಕ್ಕಾಚಾರದಲ್ಲಿ ಅವರಿಗೆ ಎಂಥ ಕಾರ್ಡ್‌ ವಿತರಣೆ ಮಾಡಬೇಕು ಎಂಬ ನಿಯಮದಿಂದಾಗಿ ಈ ಗೊಂದಲ ಉಂಟಾಗಿದೆ.

ಜಿಲ್ಲೆಯ ಬಹುಪಾಲುತೇಕ ತಾಲ್ಲೂಕುಗಳಲ್ಲಿ ಈಗಾಗಲೇ ಫಲಾನುಭವಿಗಳ ಜಮೀನು ಎಷ್ಟು, ಅವರು ಎಷ್ಟು ವಾಹನ ಹೊಂದಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಲಾಗುತ್ತಿದೆ. 6 ಜನ ಇರುವ ಒಂದು ಕುಟುಂಬದಲ್ಲಿ ಒಬ್ಬರು ಕಾರ್‌ ಖರೀದಿಸಿದರೆ ಆ ಕುಟುಂಬಕ್ಕೆ ಬಿಪಿಎಲ್‌ ಕಾರ್ಡ್‌ ನೀಡುವಂತಿಲ್ಲ. 7 ಎಕರೆಗಿಂತ ಹೆಚ್ಚು ಜಮೀನು ಹೊಂದಿದ್ದರೂ ಅವರನ್ನು ಬಡತನ ರೇಖೆಗಿಂತ ಕೆಳಗಿರುವವರು ಎಂದು ಪರಿಗಣಿಸಲಾಗುವುದಿಲ್ಲ. ಕೆಲ ಕುಟುಂಬಗಳಲ್ಲಿ ಅಣ್ಣ– ತಮ್ಮಂದಿರು ಬೇರೆಬೇರೆ ಮನೆ ಮಾಡಿಕೊಂಡಿದ್ದರೂ ಮನೆಯ ಯಜಮಾನ ಹೊಂದಿದ ಆಸ್ತಿಯಿಂದಾಗಿಯೇ ಉಳಿದವರೂ ಅರ್ಹತೆ ಕಳೆದುಕೊಳ್ಳುವಂತಾಗಿದೆ.

‘ಕಡು ಬಡವರಿಗೆ ಅಂತ್ಯೋದಯ ಪಡಿತರ ಚೀಟಿ, ಬಡತನ ರೇಖೆಗಿಂತ ಕೆಳಗಿನವರಿಗೆಬಿಪಿಎಲ್‌ (ಆದ್ಯತಾ) ಹಾಗೂ ಆರ್ಥಿಕ ಸಶಕ್ತರಿಗೆ ಎಪಿಎಲ್‌ (ಆದ್ಯತೇತರ) ಕಾರ್ಡ್‌ಗಳನ್ನು ವಿತರಿಸಲಾಗುತ್ತದೆ. ಆದರೆ, ಮನೆಯಲ್ಲಿ ಕಾರ್‌ ಹೊಂದಿದ ಒಬ್ಬ ಸದಸ್ಯರಿದ್ದರೂ ಎಲ್ಲರೂ ಆರ್ಥಿಕ ಸಶಕ್ತರು ಎಂದು ಪರಿಗಣಿಸುವ ಸರ್ಕಾರದ ನಿರ್ಧಾರ ಸರಿಯಲ್ಲ. ಜಿಲ್ಲೆಯಲ್ಲಿ ಎಷ್ಟೋ ಜಮೀನ್ದಾರರು ಕೂಡ ಹಳದಿ ಪಡಿತರ ಚೀಟಿ ಹೊಂದಿದ್ದಾರೆ. ಆದರೆ, ಮನೆ ಇಲ್ಲದ ಕಡುಬಡವರಿಗೆ ಇನ್ನೂ ಸೌಕರ್ಯ ಸಿಕ್ಕಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಶರಣಬಸಪ್ಪ ಮಮಶೆಟ್ಟಿ ದೂರುತ್ತಾರೆ.

ಇನ್ನೊಂದೆಡೆ, ಜಿಲ್ಲೆಯಲ್ಲಿ ಪಡಿತರ ವಿತರಣೆಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸುವಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಮುಂದಡಿ ಇಟ್ಟಿಲ್ಲ. ಇದರಿಂದಾಗಿ ಹೊಸದಾಗಿ ಪಡಿತರ ಚೀಟಿ ಪಡೆದ ಸುಮಾರು 15 ಸಾವಿರಕ್ಕೂ ಹೆಚ್ಚು ಜನರಿಗೆ ಇನ್ನೂ ಪಡಿತರ ಧಾನ್ಯಗಳು ಸಿಗುತ್ತಿಲ್ಲ. ಮಾತ್ರವಲ್ಲ; ಇನ್ನೂ ಹಲವರ ಕಾರ್ಡ್‌ಗಳು ಸಕ್ರಿಯವಾಗಿದ್ದರೂ ಅಂಗಡಿ ಮಾಲೀಕರ ಉಡಾಫೆಯಿಂದಾಗಿ ಸೌಲಭ್ಯ ವಂಚಿತರಾಗುತ್ತಿದ್ದಾರೆ ಎಂಬುದು ಹೋರಾಟಗಾರರ ಆರೋಪ.

ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ನಿರಂತರ ಲಾಕ್‌ಡೌನ್‌ ಇದ್ದ ಕಾರಣ ಪಡಿತರ ಚೀಟಿ ವಿತರಣೆ ನಿಲ್ಲಿಸಲಾಗಿತ್ತು. ಇಲಾಖೆಯಿಂದ ಹಲವರಿಗೆ ತಾತ್ಕಾಲಿಕ ಕಾರ್ಡ್‌ ನೀಡಲಾಗಿತ್ತು. ಕಾರ್ಡ್‌ ಇಲ್ಲದವರಿಗೂ ಧಾನ್ಯ ವಿತರಣೆ ಮಾಡಬೇಕು ಎಂದು ರಾಜ್ಯ ಸರ್ಕಾರ ನಿಯಮ ಮಾಡಿದ್ದರಿಂದ ಪಡಿತರ ಚೀಟಿಗಳ ಹಂಗಿಲ್ಲದೇ ಜನ ಧಾನ್ಯ ಪಡೆದರು. ಆದರೆ, ಈಗ ಕಾರ್ಡ್‌ಗಳನ್ನು ಆಧರಿಸಿಯೇ ಧಾನ್ಯ ನೀಡುತ್ತಿರುವ ಕಾರಣ ಹಲವರು ವಂಚಿತರಾಗುತ್ತಿದ್ದಾರೆ.

ಬಗೆಹರಿಯದ ಬಯೊಮೆಟ್ರಿಕ್ ಸಮಸ್ಯೆ: ‘ಪಡಿತರ ಚೀಟಿದಾರರಿಗೆ ಒಟಿಪಿ ಕಳಿಸಲು ಮೊಬೈಲ್‌ ಫೋನ್, ಬಯೊಮೆಟ್ರಿಕ್ ನೀಡಲು ಬೆರಳು ಹೊಂದಾಣಿಕೆ ಆಗದಿದ್ದರೂ ಚಿಂತೆ ಮಾಡುವ ಅಗತ್ಯವಿಲ್ಲ. ವಿಶೇಷ ಪ್ರಕರಣವೆಂದು ಭಾವಿಸಿ ಅವರಿಗೂ ಪಡಿತರ ನೀಡಬೇಕು’ಎಂಬ ಅಧಿಕಾರವನ್ನು ಈ ಹಿಂದೆ ಆಯಾ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರವೇ ನೀಡಿದೆ. ಆಹಾರ ನಿರೀಕ್ಷಕರು ಆ ಪಡಿತರ ಚೀಟಿಯ ಸಂಖ್ಯೆಯನ್ನು ಬರೆದುಕೊಂಡು ಅದನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬಹುದು. ಆದರೆ, ಲಾಕ್‌ಡೌನ್‌ ಮುಗಿದ ಬಳಿಕ ಹೆಬ್ಬೆಟ್ಟಿನ ಗುರುತನ್ನು ಮತ್ತೆ ಕಡ್ಡಾಯ ಮಾಡಲಾಗಿದ್ದು, ಜನ ಗೊಂದಲಕ್ಕೆ ಬೀಳುವಂತಾಗಿದೆ.

ಹಲವು ಕಡೆ ಪಡಿತರ ವಿತರಣೆ ಅಂಗಡಿಯ ಮಾಲೀಕರು ತಿಂಗಳಲ್ಲಿ ಮೂರು ದಿನ ಮಾತ್ರ ಬೆಳಿಗ್ಗೆ ಅಥವಾ ಸಂಜೆ ಧಾನ್ಯ ವಿತರಣೆ ಮಾಡುತ್ತಾರೆ. ಹಲವರಿಗೆ ಹೆಬ್ಬೆಟ್ಟಿನ ಗುರುತುನೀಡಿದ ಮೂರು ದಿನದ ನಂತರ ಧಾನ್ಯ ನೀಡುತ್ತಾರೆ. ಬಳಿಕ ಬಂದವರಿಗೆ ‘ಖಾಲಿ ಆಗಿದೆ’ ಎಂದು ಸಬೂಬು ಹೇಳಿ ಕಳಿಸುತ್ತಾರೆ ಎಂಬುದು ಕಲಬುರ್ಗಿ ತಾಲ್ಲೂಕು ಸಾವಳಗಿಯ ಶಿವಶರಣಪ್ಪ ಅವರ ದೂರು.

ಹೊಸದಾಗಿ ನೀಡುತ್ತಿರುವ ಪಡಿತರ ಚೀಟಿಗಳಲ್ಲಿ ಎಲ್ಲರ ಚಿತ್ರಗಳೂ ಇರುವುದನ್ನು ಕಡ್ಡಾಯ ಮಾಡಲಾಗಿದೆ. ಆದರೆ, ಹೊಸದಾಗಿ ಮಕ್ಕಳ ಹೆಸರು ಸೇರ್ಪಡೆ ಮಾಡಿದಾಗ ಚಿತ್ರ ಇಲ್ಲದಿದ್ದರೆ ಅಂಥವರಿಗೂ ಪಡಿತರ ನೀಡದೇ ನಿರಾಕರಿಸಿದ ಉದಾಹರಣೆಗಳಿವೆ. ಈ ವ್ಯವಸ್ಥೆಯಲ್ಲಿ ತುಸು ಸಡಿಲಿಕೆ ಮಾಡಬೇಕು ಎಂಬುದು ನಾಗರಿಕರ ಒತ್ತಾಸೆ.

‘ಒಟಿಪಿ ವ್ಯವಸ್ಥೆಗೆ ಬೇಡಿಕೆ’

ಪಡಿತರ ಧಾನ್ಯ ವಿತರಿಸಲು ಫಲಾನುಭವಿಯ ಮೊಬೈಲ್‌ಗೆ ಒಟಿಪಿ ನೀಡುವ ವ್ಯವಸ್ಥೆಯೇ ಸರಿಯಾಗಿದೆ. ಇದರಿಂದ ಹೆಬ್ಬೆಟ್ಟಿನ ಗುರುತು ಪಡೆಯುವ ಅವಶ್ಯಕತೆ ಬೀಳುವುದಿಲ್ಲ. ಮಾತ್ರವಲ್ಲ; ಕೊರೊನಾ ವೈರಾಣು ಹರಡದಂತೆ ತಡೆಯಲು ಕೂಡ ಇದು ಸಹಕಾರಿ ಆಗಿದೆ ಎಂಬುದು ಜಿಲ್ಲೆಯ ಬಹುತೇಕ ಪಡಿತರ ಅಂಗಡಿಗಳ ಮಾಲೀಕರ ಬೇಡಿಕೆ ಆಗಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ಒಟಿಪಿ ಬಳಸಿಯೇ ಧಾನ್ಯ ನೀಡಲಾಗಿದೆ. ಆದರೆ, ಅಕ್ರಮ ತಡೆಯುವ ಸಲುವಾಗಿ ಫಲಾನುಭವಿಯ ಹೆಬ್ಬೆಟ್ಟು ಗುರುತು ಅನಿವಾರ್ಯ ಮಾಡಲಾಗಿದೆ. ಇದರಿಂದ ಹಳ್ಳಿಗಳಲ್ಲಿ ಸಮಸ್ಯೆಗಳು ತಲೆದೋರುತ್ತಿವೆ ಎಂಬುದು ಅವರ ಕೋರಿಕೆ.

ಆದರೆ, ಪದೇಪದೇ ನೆಟ್‌ವರ್ಕ್‌ ಸಮಸ್ಯೆ ಆಗುವುದರಿಂದ ಒಟಿಪಿ ವ್ಯವಸ್ಥೆಗೆ ತುಸು ಹಿನ್ನಡೆ ಆಗುತ್ತಿದೆ. ಮಾತ್ರವಲ್ಲ; ಹಳ್ಳಿಗಳಲ್ಲಿ ಪ್ರಭಾವಿಗಳ ಸಂಪರ್ಕ ಬಳಸಿ ಕೂಡ ಒಟಿಪಿ ಪಡೆಯುವ ಸಾಧ್ಯತೆ ಇದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಹೆಬ್ಬೆಟ್ಟಿನ ಗುರುತು ಕಡ್ಡಾಯ ಮಾಡಲಾಗಿದೆ ಎನ್ನುತ್ತಾರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT