ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಸಿಟಿ ಬಸ್ ನಿಲ್ದಾಣಕ್ಕೆ ರಾಯಣ್ಣನ ಹೆಸರು: ಬೈರತಿ

ಸಂಗೊಳ್ಳಿ ರಾಯಣ್ಣ ವೃತ್ತದ ಕಾಮಗಾರಿಗೆ ಭೂಮಿಪೂಜೆ; ಸಚಿವ ಬೈರತಿ ಭರವಸೆ
Last Updated 19 ಮಾರ್ಚ್ 2023, 5:37 IST
ಅಕ್ಷರ ಗಾತ್ರ

ಕಲಬುರಗಿ: ‘ನಗರದ ಹೃದಯ ಭಾಗದ ಸೂಪರ್ ಮಾರ್ಕೆಟ್‌ನಲ್ಲಿ ₹ 25 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಸಿಟಿ ಬಸ್ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಹೆಸರಿಡಲಾಗುವುದು’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಭರವಸೆ ನೀಡಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ವತಿಯಿಂದ ಸಿಟಿ ಬಸ್‌ ನಿಲ್ದಾಣ ಸಮೀಪ ₹ 60 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಬಸ್ ನಿಲ್ದಾಣಕ್ಕೆ ರಾಯಣ್ಣ ಹೆಸರಿಡುವುದು ಮಾತ್ರವಲ್ಲದೆ, ನಿಲ್ದಾಣದ ಉದ್ಘಾಟನೆಗೂ ನಾನೇ ಬರುತ್ತೇನೆ. ನಗರದಲ್ಲಿ ಕನಕದಾಸರ ಪ್ರತಿಮೆಯನ್ನು ಶೀಘ್ರದಲ್ಲಿ ನಿರ್ಮಿಸಲಾಗುವುದು’ ಎಂದರು.

‘ತಿಂಥಣಿ ಬ್ರಿಡ್ಜ್‌ನ ಕಾಗಿನೆಲೆ ಕನಕ ಗುರುಪೀಠಕ್ಕೆ ಅನುದಾನ ನೀಡುವಂತೆ ಕೆಕೆಆರ್‌ಡಿಬಿ ಅಧ್ಯಕ್ಷರಿಗೆ ಮನವಿ ಮಾಡಿದಾಗ ತಕ್ಷಣವೇ ₹ 1 ಕೋಟಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಇದು ಅವರಲ್ಲಿನ ಕುರುಬ(ಹಾಲುಮತ) ಸಮಾಜದ ಮೇಲಿನ ಕಾಳಜಿ ಎಂತಹದ್ದು ಎಂಬುದನ್ನು ತೋರಿಸುತ್ತದೆ’ ಎಂದು ಪ್ರಶಂಸಿಸಿದರು.

ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ‘ಸುಮಾರು ₹ 60 ಲಕ್ಷ ಅನುದಾನದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ನವೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಪ್ರವಾಸಿ ತಾಣ ಮಾಡಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು. ತಿಂಥಣಿ ಬ್ರಿಡ್ಜ್‌ನ ಕಾಗಿನೆಲೆ ಕನಕ ಗುರುಪೀಠಕ್ಕೆ ಮಂಡಳಿ ವತಿಯಿಂದ ₹ 1 ಕೋಟಿ ಅನುದಾನ ನೀಡಲಾಗುವುದು’ ಎಂದರು.

‘ಸಮುದಾಯದ ಒತ್ತಾಸೆಯದಂತೆ ನಗರದಲ್ಲಿ ಕನಕದಾಸರ ಪ್ರತಿಮೆ ನಿರ್ಮಾಣ ಮಾಡುವುದರ ಜತೆಗೆ ಬಸ್ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು ಇರಿಸಲಾಗುವುದು. ಈ ಬಗ್ಗೆ ಈಗಾಗಲೇ ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಲಾಗಿದೆ’ ಎಂದರು.

ತಿಂಥಣಿ ಬ್ರಿಡ್ಜ್‌ನ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ, ಚೌದಾಪುರಿ ಮಠದ ರಾಜಶೇಖರ ಶಿವಾಚಾರ್ಯರು ಆಶೀರ್ವಚನ ನೀಡಿದರು.

ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ, ಶಶೀಲ ಜಿ. ನಮೋಶಿ, ಪಾಲಿಕೆ ಸದಸ್ಯರಾದ ರೇಣುಕಾ ರಾಮುರೆಡ್ಡಿ ಗುಮ್ಮಟ, ಗುರುರಾಜ ಪಟ್ಟಣ, ಪ್ರದೇಶ ಕುರುಬ ಸಂಘದ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ, ಮುಖಂಡರಾದ ರಮೇಶ ಆಲಗೂಡ, ನಿಂಗಣ್ಣ ಮತ್ತಿಮೂಡ, ರವಿ ಪೂಜಾರಿ ಜಂಬಗಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT