ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕರ್ಷಕ ಪಥಸಂಚಲನ, ಮಕ್ಕಳ ಪ್ರತಿಭೆ ಅನಾವರಣ

ಪೊಲೀಸ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ಮುರುಗೇಶ ನಿರಾಣಿ
Last Updated 26 ಜನವರಿ 2023, 10:34 IST
ಅಕ್ಷರ ಗಾತ್ರ

ಕಲಬುರಗಿ: ಗಣರಾಜ್ಯೋತ್ಸವದ 74ನೇ ವರ್ಷಾಚಣೆ ಅಂಗವಾಗಿ ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಧ್ವಜಾರೋಹಣ ನೆರವೇರಿಸಿದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಯಕ್ಷ ಲೋಕವನ್ನೇ ಸೃಷ್ಟಿಸಿದರು.

ದೇಶಭಕ್ತಿ ಗೀತೆಗಳು, ಸೈನಿಕರ ತ್ಯಾಗ, ರಾಜಮನೆತನದವರು ಬ್ರಿಟಿಷರನ್ನು ಹಿಮ್ಮೆಟ್ಟಿಸಿದ ಬಗೆಯನ್ನು ಶರಣಬಸವೇಶ್ವರ ಶಾಲೆ, ಹುಸೇನ್ ಪಬ್ಲಿಕ್ ಸ್ಕೂಲ್, ಶಕೈನ್ಯ ಬ್ಯಾಪ್ಟಿಸ್ಟ್ ಸ್ಕೂಲ್ ಹಾಗೂ ಸಂಗಮ ವಿದ್ಯಾಮಂದಿರದ ವಿದ್ಯಾರ್ಥಿಗಳು ಭಾವಾಭಿನಯದ ಮೂಲಕ ಅನಾವರಣಗೊಳಿಸಿದರು.

ಬಾರ್ಡರ್ ಚಿತ್ರದ ’ಸಂದೇಶ್ ಆತಿ ಹೈ’, ತೆಲುಗಿನ ಆರ್‌ಆರ್‌ಆರ್ ಸಿನಿಮಾದ ದೇಶಭಕ್ತಿ ಗೀತೆಗೆ ತಕ್ಕಂತೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ಶಿವಾಜಿ, ಭಗತ್ ಸಿಂಗ್, ಸರ್ದಾರ್ ಪಟೇಲ್ ಸೇರಿದಂತೆ ಹಲವು ನಾಯಕರಂತೆ ಪೋಷಾಕು ಧರಿಸಿ ಗಮನ ಸೆಳೆದರು.

ಇದಕ್ಕೂ ಮುನ್ನ ಸಚಿವ ಮುರುಗೇಶ ನಿರಾಣಿ ಅವರು ಸಿವಿಲ್ ಪೊಲೀಸ್, ಕೆಎಸ್‌ಆರ್‌ಪಿ, ಮಹಿಳಾ ಪೊಲೀಸ್, ಅರಣ್ಯ ದಳ, ಅಗ್ನಿಶಾಮಕ ದಳ, ಗೃಹ ರಕ್ಷಕ ದಳ ಸೇರಿದಂತೆ ಇತರೆ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಚಿವ ನಿರಾಣಿ, ‘ಕಲಬುರಗಿ ಮಹಾನಗರಕ್ಕೆ ಕುಡಿಯುವ ನೀರು ಪೂರೈಕೆಗೆ ಭೀಮಾ ಮತ್ತು ಕಾಗಿಣಾ ನದಿಗಳ ಸಂಗಮವಾದ ಹೊನಗುಂಟಾ ಗ್ರಾಮದ ಸಮೀಪದ ಕಾಗಿಣಾ ನದಿಯಿಂದ ನೀರೆತ್ತಿ ಬೆಣ್ಣೆತೊರಾ ಜಲಾಶಯಕ್ಕೆ ತುಂಬಿಸುವ ₹ 365 ಕೋಟಿ ಮೊತ್ತದ ಯೋಜನಾ ವರದಿಗೆ ಸಂಪುಟ ಒಪ್ಪಿಗೆ ನೀಡಿದೆ. ಮೊದಲನೇ ಹಂತದ ಕಾಮಗಾರಿಗೆ ಟೆಂಡರ್ ಕರೆಯಲು ಸಹ ಒಪ್ಪಿಗೆ ಸೂಚಿಸಿದೆ’ ಎಂದು ಹೇಳಿದರು.

‘ಕಾಗಿಣಾ ನದಿಯ ಬಲದಂಡೆಯಲ್ಲಿ ಜಾಕ್‌ವೆಲ್ ಕಂ ಪಂಪ್ ಹೌಸ್ ನಿರ್ಮಿಸಿ, 1.624 ಟಿಎಂಸಿ ಅಡಿ ನೀರನ್ನೆತ್ತಿ ಬೆಣ್ಣೆತೊರಾ ಜಲಾಶಯಕ್ಕೆ ತುಂಬಿಸುವ ಯೋಜನಾ ವರದಿಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಯೋಜನೆ ಎರಡು ಹಂತಗಳಲ್ಲಿ ಅಂದರೆ 1ನೇ ಹಂತದಲ್ಲಿ ₹ 88.69 ಕೋಟಿ ಹಾಗೂ 2ನೇ ಹಂತದಲ್ಲಿ ₹ 276.31 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ ಎಂದರು.

ಚಿಂಚೋಳಿ ತಾಲ್ಲೂಕಿನ ಐನಾಪುರ ಮತ್ತು ಇತರೆ 17 ಗ್ರಾಮಗಳ ಸುಮಾರು 3,710 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಎರಡು ಹಂತಗಳ ಯೋಜನೆಯ ಒಟ್ಟು ₹ 204.10 ಕೋಟಿ ಮೊತ್ತದ ಐನಾಪೂರ ಏತ ನೀರಾವರಿ ಯೋಜನೆಯ ವಿವರವಾದ ಯೋಜನಾ ವರದಿಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದಲ್ಲದೆ ಮೊದಲನೇ ಹಂತದ ₹ 125.25 ಕೋಟಿ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲು ಮತ್ತು ಭೋರಿ ನದಿಯಿಂದ ಆಳಂದ ತಾಲ್ಲೂಕಿನ 8 ಕೆರೆಗಳಿಗೆ ಪೈಪ್‍ಲೈನ್ ಮೂಲಕ ನೀರು ತುಂಬಿಸುವ ₹ 49.50 ಕೋಟಿ ಮೊತ್ತದ ಡಿಪಿಆರ್‌ ತಯಾರಿಸಲು ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಹೇಳಿದರು.

ಗಾಣಗಾಪುರ ಅಭಿವೃದ್ಧಿ: ಕಾಶಿ ವಿಶ್ಚನಾಥ ಮತ್ತು ಮಧ್ಯಪ್ರದೇಶದ ಉಜ್ಜಯನಿ ಹಾಗೂ ಆಂಧ್ರಪ್ರದೇಶದ ಕಾಳಹಸ್ತಿ ಮಾದರಿಯಲ್ಲಿ ದತ್ತಾತ್ರೇಯನ ಕ್ಷೇತ್ರವಾದ ಗಾಣಗಾಪುರ ಸಮಗ್ರ ಅಭಿವೃದ್ಧಿಪಡಿಸಲಾಗುವುದು. ಪ್ರಸಕ್ತ ಸಾಲಿಗೆ ₹ 5 ಕೋಟಿ ನೀಡಲಾಗಿದೆ. ಜಿಲ್ಲಾಡಳಿತ ದತ್ತನ ಕ್ಷೇತ್ರದ ಅಭಿವೃದ್ಧಿಗೆ 67 ಕೋಟಿ ವೆಚ್ಚದ ಡಿಪಿಆರ್‌ ಸಿದ್ದಪಡಿಸಿದೆ ಎಂದರು.

ಪರೇಡ್ ಕಮಾಂಡರ್ ಕಲಬುರಗಿ ನಗರ ಸಿಎಆರ್ ಆರ್‌ಪಿಐ ಶಿವಕುಮಾರ್ ಮುದ್ದಾ ಮತ್ತು ಸಹಾಯಕ ಪರೇಡ್ ಕಮಾಂಡರ್ ಡಿಎಆರ್ ಆರ್‌ಎಸ್‌ಐ ಗುರುಬಸವ ಆರ್. ನೇತೃತ್ವದ 11 ತುಕಡಿಗಳ ಶಿಸ್ತುಬದ್ಧ ಪಥಸಂಚಲನ ನಡೆಯಿತು.

ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ ರೇವೂರ, ಸಂಸದ ಡಾ. ಉಮೇಶ ಜಿ. ಜಾಧವ, ಶಾಸಕ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಸದಸ್ಯರಾದ ಸುನೀಲ್ ವಲ್ಲ್ಯಾಪುರೆ, ಶಶೀಲ ಜಿ. ನಮೋಶಿ, ಡಾ. ಸಾಬಣ್ಣ ತಳವಾರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅವಿನಾಶ ಕುಲಕರ್ಣಿ, ಐಜಿಪಿ ಅನುಪಮ್ ಅಗ್ರವಾಲ್, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಕೆಕೆಆರ್‌ಡಿಬಿ ಕಾರ್ಯದರ್ಶಿ ಅನಿರುದ್ಧ ಶ್ರವಣ್, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಕಲಬುರಗಿ ಪೊಲೀಸ್ ಕಮಿಷನರ್ ಚೇತನ್ ಆರ್., ಎಸ್ಪಿ ಇಶಾ ಪಂತ್, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಗಿರೀಶ ಡಿ. ಬದೋಲೆ, ಮಹಾನಗರ ಪಾಲಿಕೆ ಆಯುಕ್ತ ಪಾಟೀಲ ಭುವನೇಶ ದೇವಿದಾಸ್, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಧಂಗಾಪೂರ ಇತರರು ಇದ್ದರು.

ಸನ್ಮಾನ, ಲ್ಯಾಪ್‌ಟಾಪ್ ವಿತರಣೆ

2022ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಸ್ಮಿತಾ, ಶರಣಮ್ಮ, ಭಾಗ್ಯಶ್ರೀ ಹಾಗೂ ಪ್ರಿಯಾ ಅವರಿಗೆ ಶಿಕ್ಷಣ ಇಲಾಖೆಯಿಂದ ಪ್ರೋತ್ಸಾಹದಾಯಕವಾಗಿ ಲ್ಯಾಪ್ ಟಾಪ್ ವಿತರಿಸಲಾಯಿತು.

ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ ಕಾರ್ಡ್‌ಗಳ ನೋಂದಣಿ ಪ್ರಕ್ರಿಯೆಯಲ್ಲಿ ಉತ್ತಮ ಸಾಧನೆಗೈದ ಕಾಳಗಿ ಸಮುದಾಯ ಆರೋಗ್ಯ ಕೇಂದ್ರದ ಡಾ.ಅಂಬರೀಶ್ ಹಾಗೂ ಕಲಬುರಗಿಯ ವಿ.ಆರ್.ಪಾಟೀಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ಡಾ.ರವೀಂದ್ರ ಪಾಟೀಲ ಮತ್ತು ಗ್ರಾಮ ಒನ್ ಸೇವಾ ಕೇಂದ್ರದ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಿರುವ ಚಂದ್ರಶೇಖರ ಅಣ್ಣಾರಾಯ ಬಿರಾದಾರ, ಗುರುನಾಥ ಹತ್ತಿ, ಸತೀಶ ಶಿವಾನಂದ ತೀರ್ಥೆ, ಸಂಗಣ್ಣ ಹಾಗೂ ನಿವೃತ್ತ ಹೆಡ್ ಕಾನ್‌ಸ್ಟೆಬಲ್ ಖಾಜಾ ಫರಿದುದ್ದೀನ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಮುಖ್ಯ ವೇದಿಕೆಯ ಮೊದಲ ಸಾಲಿನಲ್ಲಿ ಅಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದ ಕೆಲ ಬಿಜೆಪಿ ಮುಖಂಡರು ಕುಳಿತಿದ್ದರು.

ಕಾಣದ ಸರ್ಕಾರಿ ಶಾಲಾ ಮಕ್ಕಳು!

ಜಿಲ್ಲಾಡಳಿತ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಖಾಸಗಿ ಶಾಲೆಗಳ ಮಕ್ಕಳೇ ಭಾಗವಹಿಸಿದ್ದರು. ಕಲಬುರಗಿ ನಗರ ಹಾಗೂ ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಮಕ್ಕಳಿದ್ದರೂ ಅವರಿಗೆ ಅವಕಾಶವಿರಲಿಲ್ಲ. ನಗರದ ಪ್ರಮುಖ ಖಾಸಗಿ ಶಾಲೆಗಳ ಮಕ್ಕಳೇ ಕಾರ್ಯಕ್ರಮ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT