ಶನಿವಾರ, ಏಪ್ರಿಲ್ 1, 2023
29 °C

ತಂದೆ ಕೊಲೆಯ ಸೇಡು ತೀರಿಸಿಕೊಂಡ ಬಾಲಕ: ಕಲ್ಲು ಎತ್ತಿಹಾಕಿ ಯುವಕನ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ದೇಗಲಮಡಿಯಲ್ಲಿ ಮಂಗಳವಾರ ಬೆಳಿಗ್ಗೆ 17 ವರ್ಷದ ಬಾಲಕನೊಬ್ಬ ಯುವಕನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. 

ದೇಗಲಮಡಿಯ ರಾಜಕುಮಾರ ಶರಣಪ್ಪ ಫತೆಪುರ(32)  ಕೊಲೆಯಾದವ.

ಇದೇ ಗ್ರಾಮದಲ್ಲಿ ಮೂರು ವರ್ಷಗಳ ಹಿಂದೆ ಕಟ್ಟೆಯ ಮೇಲೆ ಮಲಗಿದ್ದ ಹಣಮಂತ (ಆರೋಪಿ ಬಾಲಕನ ತಂದೆ) ಎಂಬುವವರ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿತ್ತು. ಈ ಕೊಲೆ ಆರೋಪದಲ್ಲಿ ರಾಜಕುಮಾರ ಬಂಧಿತನಾಗಿದ್ದ. ಕೆಲ ತಿಂಗಳ ಹಿಂದಷ್ಟೆ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ.

ಸೋಮವಾರ ರಾತ್ರಿ ಮದ್ಯದ ಅಮಲಿನಲ್ಲಿದ್ದ ರಾಜಕುಮಾರ,  ಗ್ರಾಮದ ಬಸವೇಶ್ವರ ಹಾಗೂ ಅಂಬೇಡ್ಕರ್ ವೃತ್ತದಲ್ಲಿರುವ ಆಲದ ಮರದ ಕೆಳಗೆ ಯಾರೂ ಕುಳಿತುಕೊಳ್ಳದಂತೆ ಬೆದರಿಕೆ ಹಾಕಿದ್ದ. ಕತ್ತಿ (ಕೊಯ್ತಿ) ಝಳಪಿಸಿ ಜನರನ್ನು ಓಡಿಸಿದ್ದ. ಅಲ್ಲದೇ ಗ್ರಾಮ ದೇವತೆಯ ಗುಡಿಯಲ್ಲಿಯೂ  ಅನುಚಿತವಾಗಿ ವರ್ತಿಸಿದ್ದ. ಸುದ್ದಿ ತಿಳಿದು ಪೊಲೀಸರು ಅಲ್ಲಿಗೆ ತೆರಳಿದಾಗ ಪರಾರಿಯಾಗಿದ್ದ.

ಪೊಲೀಸರು ತೆರಳಿದ ಮೇಲೆ ರಾತ್ರಿ ಬಾಲಕನ ಮನೆಯತ್ತ ಬಂದ ರಾಜಕುಮಾರ, ಕೂಗಾಡಿ ಬೆದರಿಕೆ ಹಾಕಿದ್ದ. ಮನೆಯವರು ಸಮಜಾಯಿಸಿ ಕಳುಹಿಸಿದ್ದರು. ಆದರೆ ಬೆಳಿಗ್ಗೆ ಮತ್ತೆ ಅವರ ಮನೆಗೆ ಹೋಗಿ ರಂಪಾಟ ಮಾಡಿದ್ದರಿಂದ ಕೋಪಗೊಂಡ ಬಾಲಕ ರಾಜಕುಮಾರನ ತಲೆ ಮೇಲೆ ಕಲ್ಲು ಎತ್ತಿಹಾಕಿದ್ದಾನೆ. ತಲೆಯಿಂದ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಬಸವೇಶ್ವರ ಹೀರಾ, ಸರ್ಕಲ್ ಇನ್ ಸ್ಪೆಕ್ಟರ್ ಮಹಾಂತೇಶ ಪಾಟೀಲ ಹಾಗೂ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು