ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವೀಪ್ ಚಟುವಟಿಕೆ ತೀವ್ರಗೊಳಿಸಿ; ಸಲ್ಮಾ ಕೆ.ಫಹಿಂ

Last Updated 5 ಡಿಸೆಂಬರ್ 2022, 16:18 IST
ಅಕ್ಷರ ಗಾತ್ರ

ಕಲಬುರಗಿ: ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಯುವ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಜಿಲ್ಲೆಯಲ್ಲಿ ಸ್ವೀಪ್‌ ಚಟುವಟಿಕೆ ತೀವ್ರಗೊಳಿಸುವಂತೆ ಪಶುಸಂಗೋಪನೆ ಮತ್ತು‌ ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿಯೂ ಆಗಿರುವ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕಿ ಸಲ್ಮಾ ಕೆ.ಫಹಿಂ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಿದರು.

‘ಜಿಲ್ಲೆಯಲ್ಲಿ ಟೋಲ್ ಫ್ರೀ ಸಂಖ್ಯೆ 1950ಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕರೆಗಳು ಬರುತ್ತಿಲ್ಲ. ಈ ಬಗ್ಗೆ ಮತದಾರರಲ್ಲಿ ಜಾಗೃತಿ‌ ಮೂಡಿಸುವುದು ಅವಶ್ಯವಿದೆ’ ಎಂದರು.

‘ಮತದಾರರು ಸ್ವಯಂ ಮನೆಯಿಂದಲೇ ಅರ್ಜಿ ಹಾಕುವ ವೋಟರ್ ಹೆಲ್ಪ್ ಲೈನ್ ತಂತ್ರಾಂಶದ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಬಿತ್ತಿಪತ್ರಗಳನ್ನು ಅಂಟಿಸಬೇಕು. ಸ್ವೀಪ್ ಅರಿವಿಗೆ ವಿಭಿನ್ನ‌ ಕಾರ್ಯಕ್ರಮಗಳನ್ನು ಆಯೋಜಿಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಯಶವಂತ ‌ವಿ. ಗುರುಕರ್, ‘ಕರಡು ಮತದಾರರ ಪಟ್ಟಿ ಪ್ರಕಟಣೆ ಬಳಿಕ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ 38,512 ಹೊಸ ಮತದಾರರ ಪಟ್ಟಿ ಸೇರ್ಪಡೆಗೆ ಅರ್ಜಿ‌ ಬಂದಿವೆ. ಇದರಲ್ಲಿ 18-19 ವರ್ಷದ 17,226 ಯುವ ಮತದಾರರು ಇದ್ದಾರೆ. ಯುವ‌ ಮಹಿಳಾ ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸಲು ಹೆಚ್ಚಿನ ಒತ್ತು ನೀಡಲಾಗಿದೆ. 34,533 ಹೆಸರುಗಳನ್ನು ತೆಗೆದು ಹಾಕಲಾಗಿದ್ದು, ವರ್ಗಾವಣೆ ಕೋರಿ 7,477 ಅರ್ಜಿ ಸಲ್ಲಿಕೆಯಾಗಿವೆ’ ಎಂದು ಮಾಹಿತಿ ನೀಡಿದರು.

‘ಮತಗಟ್ಟೆ ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಮನೆ-ಮನೆಗೆ ತೆರಳಿ ದಾಖಲೆಗಳನ್ನು ಪಡೆದು ಗರುಡಾ ತಂತ್ರಾಂಶದ‌ ಮೂಲಕ ಸ್ಥಳದಲ್ಲಿಯೇ ಅರ್ಜಿಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಆಧಾರ್ ಸಂಖ್ಯೆಗೆ ಮತದಾರರ ಗುರುತಿನ ಚೀಟಿ ಜೋಡಣೆ ಕಾರ್ಯ ಶೇ 63ರಷ್ಟಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ. ಗಿರೀಶ್ ಬದೋಲೆ, ‘ಕರಡು ಮತದಾರರ ಪಟ್ಟಿ ಪ್ರಕಟವಾದ ಕೂಡಲೇ ಸ್ವೀಪ್ ಭಾಗವಾಗಿ ನಗರದಲ್ಲಿ ಬೃಹತ್ ಜಾಥಾ ಆಯೋಜಿಸಲಾಗಿದೆ. ಶಾಲಾ ಮಕ್ಕಳಿಂದ ರಂಗೋಲಿ, ಚಿತ್ರಕಲಾ‌ ಸ್ಪರ್ಧೆ ಸಹ ನಡೆಸಲಾಗಿದೆ. ಗ್ರಾಮೀಣ ಭಾಗದಲ್ಲಿ ಸ್ವೀಪ್‌ ಚಟುವಟಿಕೆ ನಡೆದಿವೆ’ ಎಂದರು.

ಸಭೆಯಲ್ಲಿ ಸಹಾಯಕ ಆಯುಕ್ತರಾದ‌ ಮಮತಾ ಕುಮಾರಿ, ಕಾರ್ತಿಕ್‌ ಸೇರಿದಂತೆ ತಾಲ್ಲೂಕು ತಹಶೀಲ್ದಾರರು ಇದ್ದರು.

ಜಿಲ್ಲಾಧಿಕಾರಿ ಕಚೇರಿ ಆವರಣದ ಇವಿಎಂ ವೇರ್‌ಹೌಸ್‌ಗೆ ಸಲ್ಮಾ ಕೆ. ಫಹೀಂ ಭೇಟಿ ನೀಡಿ‌ ವೀಕ್ಷಿಸಿದರು. ಪಾಲಿಕೆ ಕಚೇರಿಗೆ ಭೇಟಿ‌ ನೀಡಿ ಪರಿಷ್ಕರಣೆ ಕಾರ್ಯ ಕುರಿತು ಕಲಬುರಗಿ ಉತ್ತರ ಮತ್ತು ದಕ್ಷಿಣ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಗಳಾದ ಸಾವಿತ್ರಿ ಸಲಗರ್, ಶ್ರೇಯಾಂಕಾ ಅವರಿಂದ ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT