ಸೇಡಂ: ಕೇಂದ್ರ ಸರ್ಕಾರ ಹೊಟ್ಟೆಕಿಚ್ಚಿನಿಂದ ರಾಜ್ಯಕ್ಕೆ ಅಕ್ಕಿಯನ್ನು ಕೊಡುತ್ತಿಲ್ಲ. ಆದರೂ ನಾವು ಪ್ರಯತ್ನ ಮಾಡಿ ಎರಡು ತಿಂಗಳ ನಂತರ ಅಕ್ಕಿಯನ್ನು ನೀಡುವ ಮೂಲಕ ರಾಜ್ಯದ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಭರವಸೆ ನೀಡಿದರು.
ತಾಲ್ಲೂಕಿನ ಕೋಡ್ಲಾ ಗ್ರಾಮದಲ್ಲಿ ಮಂಗಳವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
‘ಹಣ ಕೊಡುವ ಬದಲಾಗಿ ಅಕ್ಕಿ ನೀಡಬೇಕೆಂಬ ಬೇಡಿಕೆ ಬಂದಿದೆ. ಈಗಾಗಲೇ ಅನ್ಯ ರಾಜ್ಯಗಳಿಂದ ಅಕ್ಕಿ ಖರೀದಿಸುವ ಪ್ರಯತ್ನ ನಡೆದಿದೆ. ಮುಂದಿನ ದಿನಗಳಲ್ಲಿ ಅಕ್ಕಿಯನ್ನೇ ವಿತರಿಸಲಾಗುತ್ತದೆ’ ಎಂದರು.
‘ನಾವು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದೇವೆ. ಈ ವರ್ಷ ನನಗೆ ಹೆಚ್ಚುವರಿಯಾಗಿ ಉದ್ಯಮಶೀಲತೆ ಮತ್ತು ಕೌಶಾಲ್ಯಭಿವೃದ್ಧಿ ಖಾತೆ ನೀಡಿರುವುದರಿಂದ ಸೇಡಂನಲ್ಲಿ ಅಕ್ಟೋಬರ್ 13ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯ ಯುವಕ-ಯುವತಿಯರು ಪಾಲ್ಗೊಂಡು ಲಾಭ ಪಡೆದುಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳನ್ನು ಈ ಉದ್ಯೋಗ ಮೇಳಕ್ಕೆ ಕಳಿಸಿಕೊಡಬೇಕು’ ಎಂದು ಮನವಿ ಮಾಡಿದರು.
‘ಹಳ್ಳಿಗಳ ಅಭಿವೃದ್ಧಿ, ಪಾರದರ್ಶಕ ಆಡಳಿತ ನೀಡುವುದೇ ನಮ್ಮ ಸಿದ್ದಾಂತವಾಗಿದೆ. ಈ ಹಿಂದೆ ನಾನು ಅಧಿಕಾರದಲ್ಲಿದ್ದಾಗ ಕೋಡ್ಲಾ ಗ್ರಾಮದಲ್ಲಿ ₹ 2 ಕೋಟಿ ವೆಚ್ಚದ ಪ್ರಾಥಮಿಕ ಆರೋಗ್ಯ ಕೇಂದ್ರ, ಕಿತ್ತೂರು ರಾಣಿ ಚೆನ್ನಮ್ಮ, ಅಲ್ಪಸಂಖ್ಯಾತರ ಶಾಲೆ ನಿರ್ಮಿಸಿದ್ದೇನೆ. ಮುಂದೆಯೂ ಈ ಗ್ರಾಮದ ಅಭಿವೃದ್ಧಿಗೆ ಬದ್ಧನಾಗಿದ್ದೇನೆ’ ಎಂದು ಭರವಸೆ ನೀಡಿದರು.
ಮುಖಂಡ ಶಂಭುರೆಡ್ಡಿ ಮದ್ನಿ ಮಾತನಾಡಿ, ‘ಕೋಡ್ಲಾ ಗ್ರಾಮ ಯಾವತ್ತೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತ ಬಂದಿದೆ. ಡಾ.ಶರಣಪ್ರಕಾಶ ಪಾಟೀಲ ಅವರು ಕೋಡ್ಲಾ ಗ್ರಾಮದಲ್ಲಿ ಅನೇಕ ಅಭಿವೃದ್ಧಿಯ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿಯೂ ಮಾಡಲಿದ್ದಾರೆ’ ಎಂದರು.
ಮುಖಂಡ ಸತೀಶರೆಡ್ಡಿ ಪಾಟೀಲ ರಂಜೋಳ, ರಾಜುರೆಡ್ಡಿ ಬೆನಕನಹಳ್ಳಿ ಮಾತನಾಡಿದರು.
ಕೋಡ್ಲಾ ಗ್ರಾಮದಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಭವ್ಯ ಮೆರವಣಿಗೆ ನಡೆಯಿತು. ಕಾಂಗ್ರೆಸ್ ಕಾರ್ಯಕರ್ತರು ವಿವಿಧ ವಾದ್ಯಮೇಳಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಸೇಡಂ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ಮುಧೋಳ ಘಟಕದ ಅಧ್ಯಕ್ಷ ರವೀಂದ್ರ ನಂದಿಗಾಮ, ಮುಖಂಡರಾದ ರವಿ ಸಾಹು ತಂಬಾಕೆ, ಈರಣಗೌಡ ಪರಸರೆಡ್ಡಿ, ಶಿವಲಿಂಗಯ್ಯ ಗಚ್ಚಿನಮಠ, ರಾಜುಗೌಡ ಬೆನಕನಹಳ್ಳಿ, ಹೇಮಾರೆಡ್ಡಿ ಪಾಟೀಲ ಕಲಕಂಭ, ಶಿವಾರೆಡ್ಡಿ ಹೂವಿನಬಾವಿ, ಉಮಾರೆಡ್ಡಿ ಹಂದರಕಿ, ಚನ್ನಬಸಪ್ಪ ಹಾಗರಗಿ, ಭೀಮರಾವ ಅಳ್ಳೊಳ್ಳಿ, ಹಫೀಜ್, ರಾಜಶೇಖರ ಕೋಲ್ಕುಂದಾ, ಜೈಭೀಮ ಊಡಗಿ, ಭೀಮಾಶಂಕರ ಕೊಳ್ಳಿ, ಸತೀಶ ಪೂಜಾರಿ ಇದ್ದರು.
ಹಳ್ಳಿಗಳ ಅಭಿವೃದ್ಧಿಗೆ ಆದ್ಯತೆ ಸೇಡಂನಲ್ಲಿ ಅ.13ರಂದು ಉದ್ಯೋಗ ಮೇಳ ನಿರುದ್ಯೋಗ ನಿವಾರಣೆಗೆ ಒತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.