ಯಡ್ರಾಮಿ: ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ. ಎಲ್ಲರೂ ಒಂದಾಗಿ ಸಂಘಟನೆ ಮಾಡಿದಾಗ ಮಾತ್ರ ನಮ್ಮ ಹಕ್ಕುಗಳು ದೊರಕಲು ಸಾಧ್ಯವಾಗುತ್ತದೆ ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅಭಿಪ್ರಾಯಪಟ್ಟರು.
ಯಡ್ರಾಮಿ ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಭಾನುವಾರ ಜೇವರ್ಗಿ-ಯಡ್ರಾಮಿ ತಾಲ್ಲೂಕು ವೀರಶೈವ ಲಿಂಗಾಯತ ಮಹಾಸಭಾದಿಂದ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ವೀರಶೈವ ಲಿಂಗಾಯತ ಮಹಾಸಭಾದ ನೂತನ ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನೂತನವಾಗಿ ಆಯ್ಕೆಯಾದ ಎಲ್ಲ ಪದಾಧಿಕಾರಿಗಳು ಸಮಾಜದ ಸಂಘಟನೆಗೆ ಮುಂದಾಗಬೇಕು. ಜೇವರ್ಗಿ ಹಾಗೂ ಯಡ್ರಾಮಿಯಲ್ಲಿ ಬಸವೇಶ್ವರ ಪುತ್ತಳಿ ನಿರ್ಮಾಣಕ್ಕೆ ಇರುವ ಎಲ್ಲ ಅಡೆತಡೆಗಳು ದೂರವಾಗಿದೆ. ಈಗಾಗಲೆ ಜೇವರ್ಗಿಯಲ್ಲಿ ಕ್ರೋಡೀಕರಣ ನಡೆದಿದ್ದು, ಮುಂದಿನ ದಿನಗಳಲ್ಲಿ ಯಡ್ರಾಮಿಯಲ್ಲಿಯೂ ಕೂಡಾ ಪುತ್ಥಳಿ ನಿರ್ಮಾಣ ಎಲ್ಲರ ಸಹಕಾರದೊಂದಿಗೆ ಮಾಡೋಣ’ ಎಂದರು.
ನಂತರ ಮಾತನಾಡಿದ ಕಡಕೋಳ ಮಹಾಮಠದ ರುದ್ರಮುನಿ ಶಿವಾಚಾರ್ಯರು, ‘ವೀರಶೈವ ಲಿಂಗಾಯತ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಂತಹ ಕುಟುಂಬಗಳನ್ನು ಪ್ರೋತ್ಸಾಹಿಸುವ ಕೆಲಸ ನೂತನ ಪದಾಧಿಕಾರಿಗಳು ಮುಂದಾಗಬೇಕು. ಸಮಾಜದ ಬೆಳವಣಿಗೆಗೆ ರಾಜಕೀಯವೂ ಅವಶ್ಯವಿದ್ದು, ಉತ್ತಮರಿಗೆ ರಾಜಕೀಯವಾಗಿ ಬೆಳೆಯಲು ಪಕ್ಷಬೇದ ಮರೆತು ಬೆಂಬಲಿಸಬೇಕು’ ಎಂದರು.
ಮಲ್ಲಿಕಾರ್ಜುನ ಯಾದಗೀರ ನಿರೂಪಿಸಿದರು. ಆನಂದ ಯತ್ನಾಳ ಸ್ವಾಗತಿಸಿದರು. ಚನ್ನವೀರ ತಾಳಿಕೋಟಿ ವಂದಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಆಲೂರು ಸಂಸ್ಥಾನ ಮಠದ ಕೆಂಚವೃಷಭೇಂದ್ರ ಶಿವಾಚಾರ್ಯರು ಹಾಗೂ ಯಡ್ರಾಮಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ವಹಿಸಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ, ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಸಂತೋಷ ಪಾಟೀಲ, ರಾಜಶೇಖರ ಸೀರಿ, ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ ಕಲ್ಲಹಂಗರಗಾ, ಮಲ್ಲನಗೌಡ ಪಾಟೀಲ ನೇದಲಗಿ, ಜೇವರ್ಗಿ-ಯಡ್ರಾಮಿ ತಾಲ್ಲೂಕು ಅಧ್ಯಕ್ಷ ಸಿದ್ದು ಅಂಗಡಿ, ಜಿ.ಪಂ. ಮಾಜಿ ಸದಸ್ಯ ದಂಡಪ್ಪ ಸಾಹು ಕುಳಗೇರಿ, ಚಂದ್ರಶೇಖರ ಪುರಾಣಿಕ, ಶರಣು ಗುಗ್ಗರಿ, ದೇವಿಂದ್ರಪ್ಪಗೌಡ ಬಿರಾದಾರ, ಸಿದ್ದಣ್ಣ ಸಾಹು ಹೂಗಾರ ಮತ್ತಿತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.