ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲ್ವಾರ್‌ ಹಿಡಿದು ಒಳಗೆ ನುಗ್ಗಿದರು..!

ಶಾಮಸುಂದರ ನಗರದಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡ ಸ್ಥಳೀಯರು
Last Updated 30 ಮಾರ್ಚ್ 2021, 3:39 IST
ಅಕ್ಷರ ಗಾತ್ರ

ಕಲಬುರ್ಗಿ: ಕೈಯಲ್ಲಿ ತಲ್ವಾರ್, ಬಡಿಗೆ, ಸೈಜುಗಲ್ಲುಗಳನ್ನು ಹಿಡಿದಿದ್ದ ಎರಡು ನೂರಕ್ಕೂ ಹೆಚ್ಚು ಜನರು ಜೋರಾಗಿ ಚೀರಾಡುತ್ತಾ ಮನೆಯೊಳಗೆ ಬಂದರು. ಬಂದವರೇ 80 ವರ್ಷದ ಮುದುಕಿಯನ್ನೂ ನೋಡದೇ ತಲೆಗೆ ಬಡಿಗೆಯಿಂದ ಹೊಡೆದರು. ಮನೆಯ ಮುಂದಿದ್ದ ಕಾರು, ಬೈಕುಗಳನ್ನು ನಾಶಮಾಡಿದರು. ಇದರಲ್ಲಿ ನಮ್ಮ ಜೀವ ಉಳಿದದ್ದೇ ಹೆಚ್ಚು...

ಸೋಮವಾರ ಸಂಜೆ ಇಲ್ಲಿನ ಜಿಮ್ಸ್‌ ಆಸ್ಪತ್ರೆ ಎದುರಿನ ಬಿ. ಶಾಮಸುಂದರ ನಗರದ ನಿವಾಸಿ ಪ್ರಕಾಶ ಒಂಟಿ ಅವರು ಈ ಮಾತುಗಳನ್ನು ಹೇಳುತ್ತಲೇ ಗದ್ಗದಿತರಾದರು. ಮನೆ ಹೊರಗಿನ ಕುರ್ಚಿಯಲ್ಲಿ ಆಗಷ್ಟೇ ತಲೆಗೆ ಗಾಯವಾಗಿದ್ದಕ್ಕೆ ಬ್ಯಾಂಡೇಜ್ ಹಾಕಿಕೊಂಡಿದ್ದ ಅವರ ವೃದ್ಧ ತಾಯಿ ಮಹಾದೇವಿ ಅವರೂ ಏನೂ ಹೇಳಬೇಕೆಂದು ತೋಚದೇ ಕುಳಿತಿದ್ದರು. ಸಂಜೆ 4ರಿಂದ 4.30ರ ಅವಧಿಯಲ್ಲಿ ನಡೆದ ಘಟನೆ ಅವರ ಜಂಘಾಬಲವನ್ನೇ ಉಡುಗಿಸಿದಂತಿತ್ತು.

‘ಗುಂಪಿನಲ್ಲಿದ್ದ ಬಹುತೇಕರು ವಿಪರೀತ ಮದ್ಯ ಕುಡಿದಿದ್ದರು. ಬಣ್ಣ ಆಡಿ ಬರಿ ಮೈಯಲ್ಲಿದ್ದರು. ಯಾವೊಂದು ವಿಷಯವನ್ನೂ ಹೇಳದೇ ಜೋರಾಗಿ ಗದ್ದಲ ಮಾಡುತ್ತಾ ನಮ್ಮ ಮನೆಯ ಕಿಟಕಿಯ ಗಾಜು ಒಡೆದರು. ನಮ್ಮ ಎರಡು ಬೈಕ್‌ಗಳನ್ನು ಕೆಳಗೆ ಬೀಳಿಸಿ ರಾಡ್ ಹಾಗೂ ಕಲ್ಲಿನಿಂದ ಅವುಗಳ ಮೇಲೆ ಜಜ್ಜಿದರು. ಕೆಳಗಿನಿಂದಲೇ ಮಹಡಿಯ ಮೇಲ್ಭಾಗದಲ್ಲಿರುವ ಬಾಗಿಲುಗಳಿಗೆ ಕಲ್ಲು ಎಸೆದರು. ಅವಾಚ್ಯ ಶಬ್ದಗಳಿಂದ ಬೈದರು’ ಎಂದು ಸುಂದರ ನಗರ ಬಡಾವಣೆಯ ನಿವಾಸಿ ಸುಧಾಕರ ಆಜಾದಪುರ ಹೇಳಿದರು.

‘ನಮ್ಮನ್ನೆಲ್ಲ ಏನ್ ಮಾಡ್ತಾರೋ ಏನೋ ಅಂತ ಅಂಜಿಕೆಯಿಂದ ಮಂಚದ ಕೆಳಗಡೆ ಅವಿತು ಮಲಗಿಕೊಂಡಿದ್ದೆವು. ಅವರು ಹೋಗುವವರೆಗೂ ನಾವು ಮನೆಯಿಂದ ಬರಲೇ ಇಲ್ಲ’ ಎಂದರು.

‘ನೋಡ ನೋಡೂದರಾಗ ಒಂದಿಷ್ಟು ಮಂದಿ ಬಂದು ನಮ್ಮ ಗಾಡಿಗೋಳ್ನೆಲ್ಲ ಜಖಂಗೊಳಿಸಿದರು.ಯಾಕ ಗಾಡಿಗಿ ಲುಕ್ಸಾನು ಮಾಡಿದರು, ಓಣಿ ಮಂದಿಗೆ ಯಾಕ ಹೊಡದರು ಅನ್ನೋದ ಗೊತ್ತಾಗಲಿಲ್ಲ’ ಎಂದು ಸರೋಜಾ ಸುರಪುರ ಆತಂಕದಿಂದ ಹೇಳಿದರು.

ಐವರ ವಿರುದ್ಧ ಪ್ರಕರಣ

ಕಲಬುರ್ಗಿಯ ಜಿಮ್ಸ್‌ ಎದುರು ಯುವಕ ವೀರತಾ ಉಪಾಧ್ಯೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಲಾಲ್ಯಾ ಅಲಿಯಾಸ್ ಲಾಲೂ‍ಪ್ರಸಾದ್, ವಿಶಾಲ್ ನವರಂಗ್, ಸತೀಶಕುಮಾರ್ ಅಲಿಯಾಸ್ ಗುಂಡು ಫರಹತಾಬಾದ್, ಬಾಂಬೆ ಸಂಜಯ್ ಹಾಗೂ ತೌಸಿಫ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಲಬುರ್ಗಿ ‘ಬಿ’ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ಬ್ರಹ್ಮಪುರ, ಸ್ಟೇಶನ್ ಬಜಾರ್, ಆರ್‌.ಜಿ. ನಗರ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳನ್ನೊಂಡ ತಂಡವನ್ನು ತನಿಖೆಗಾಗಿ ರಚಿಸಲಾಗಿದೆ ಎಂದು ಪೊಲೀಸ್‌ ಕಮಿಷನರ್ ಸತೀಶಕುಮಾರ್ ಎನ್. ತಿಳಿಸಿದ್ದಾರೆ.

ಮೃತಪಟ್ಟ ವೀರತಾ ಹಾಗೂ ಲಾಲ್ಯಾರ ಮಧ್ಯೆ ಹಳೆಯ ವೈಷಮ್ಯವಿತ್ತು. ಜಿಮ್ಸ್‌ ಬಳಿ ಚಹಾ ಕುಡಿಯಲು ಲಾಲ್ಯಾ ಹಾಗೂ ಆತನ ಸಂಗಡಿಗರು ಬಂದಿದ್ದ ವೇಳೆ ಅಲ್ಲಿಗೆ ಬಂದ ವೀರತಾನನ್ನು ಕಂಡೊಡನೆ ಜಗಳಕ್ಕೆ ಮುಂದಾಗಿ ಬೈಕ್‌ನಿಂದ ಕೆಡವಿ ಆತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಘಟನೆಯ ಬಳಿಕ ಜಿಮ್ಸ್‌ ರಸ್ತೆ, ಸುಂದರ ನಗರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT