ಗುರುವಾರ , ನವೆಂಬರ್ 14, 2019
19 °C

ಕಾಳಗಿ: ರಾಜ್ಯ ಹೆದ್ದಾರಿ ದುರಸ್ತಿಗೆ ಆಗ್ರಹ

Published:
Updated:
Prajavani

ಕಾಳಗಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಕೋಡ್ಲಿ ಕ್ರಾಸ್ - ಮಹಾಗಾಂವ ಕ್ರಾಸ್ ನಡುವೆ ರಾಜ್ಯ ಹೆದ್ದಾರಿ-32 ಅಲ್ಲಲ್ಲಿ ಹದಗೆಟ್ಟು ಹೋಗಿದೆ. ದುರಸ್ತಿ ಯಾವಾಗ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಈ ಹೆದ್ದಾರಿಯಲ್ಲಿ ಹುಲಸಗೂಡ ಕ್ರಾಸ್, ಕಂದಗೂಳ ಕ್ರಾಸ್, ರಟಕಲ್, ಹೇರೂರ ಕ್ರಾಸ್, ಸುಗೂರ ಕ್ರಾಸ್ ಮುಂತಾದ ಕಡೆಗಳಲ್ಲಿತಗ್ಗು ಗುಂಡಿಗಳು ಬಿದ್ದಿವೆ. ಹೆದ್ದಾರಿ ಎಲ್ಲೆಂದರಲ್ಲಿ ಕಿತ್ತು ಹೋಗಿ ಜಲ್ಲಿಕಲ್ಲು ಹರಡಿಕೊಂಡಿವೆ.

ಒಂದು ಕಾಲಕ್ಕೆ ಪ್ರತಿಷ್ಠಿತ ಹೆದ್ದಾರಿ ಎನಿಸಿಕೊಂಡ ಈ ರಸ್ತೆ ಮೂಲಕವೇ ಹುಮನಾಬಾದ್‌, ಕಲಬುರ್ಗಿ, ಆಳಂದ, ಬಸವಕಲ್ಯಾಣ ಪ್ರಯಾಣಿಕರು ಚಿಂಚೋಳಿ ಕಡೆಗೆ ಬರುತ್ತಿದ್ದರು.

ಆದರೆ, ಈಚೆಗೆ ಹೆದ್ದಾರಿ ಪೂರ್ತಿ ಹಾಳಾಗಿದೆ. ಹೆದ್ದಾರಿ ಮೇಲ್ವಿಚಾರಣೆ ಬಹಳಷ್ಟು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಕ್ಷೇತ್ರದ ಶಾಸಕ ಡಾ.ಅವಿನಾಶ ಜಾಧವ, ಕಲಬುರ್ಗಿ ಸಂಸದ ಡಾ.ಉಮೇಶ ಜಾಧವ ವಾರಕ್ಕೊಮ್ಮೆಯಾದರೂ ಈ ಮಾರ್ಗದಲ್ಲಿ ಓಡಾಡುತ್ತಾರೆ. ಆದರೆ, ಯಾರೊಬ್ಬರು ಈ ಬಗ್ಗೆ ತಲೆಕೆಡಿಕೊಳ್ಳುತ್ತಿಲ್ಲ ಎಂದು ಜನ ದೂರುತ್ತಿದ್ದಾರೆ.

‘ಈ ಹೆದ್ದಾರಿ ಸುಧಾರಣೆಗೆ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ರಸ್ತೆ ತಡೆ ಚಳವಳಿ ನಡೆಸುತ್ತೇವೆ’ ಎಂದು ಪ್ರಾಂತ ರೈತ ಸಂಘದ ಮುಖಂಡ ಗುರುನಂದೇಶ ಕೋಣಿನ, ರಟಕಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗೌರಿಶಂಕರ ಕಿಣ್ಣಿ ಎಚ್ಚರಿಸಿದ್ದಾರೆ.

ಪ್ರತಿಕ್ರಿಯಿಸಿ (+)