ಕಲಬುರಗಿ: ಕಲ್ಯಾಣ ಕರ್ನಾಟಕದ ಕಂದಾಯ ವಿಭಾಗದ ಕೇಂದ್ರ, ವಾರ್ಷಿಕ ₹ 5 ಸಾವಿರ ಕೋಟಿ ಅನುದಾನ ಹೊಂದಿರುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯ ಕೇಂದ್ರ, ಜೆಸ್ಕಾಂ, ಕೆಕೆಆರ್‌ಟಿಸಿಯ ಕೇಂದ್ರ ಕಚೇರಿಗಳನ್ನು ಹೊಂದಿರುವ ಕಲಬುರಗಿ ನಗರದ ರಸ್ತೆಗಳು ಹದಗೆಟ್ಟಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಮೈಸೂರು, ಬೆಳಗಾವಿ, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಶಿವಮೊಗ್ಗ, ದಾವಣಗೆರೆ ಹೀಗೆ ಟು ಟಿಯರ್ ನಗರಗಳಲ್ಲಿನ ರಸ್ತೆಗಳ ಸ್ಥಿತಿ ಕಲಬುರಗಿಗಿಂತಲೂ ಎಷ್ಟೋ ಚೆನ್ನಾಗಿದೆ. ಕಲಬುರಗಿ ಜಿಲ್ಲೆಗೆ ಸಾಕಷ್ಟು ಅನುದಾನವಿದ್ದರೂ ರಸ್ತೆಗಳ ನಿರ್ವಹಣೆ ಏಕೆ ಆಗುತ್ತಿಲ್ಲ ಎಂಬ ಪ್ರಶ್ನೆ ವಾಹನ ಸವಾರರನ್ನು ಕಾಡುತ್ತಿದೆ.
ಅದರಲ್ಲೂ ಮುಖ್ಯವಾಗಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಕೇಂದ್ರ ಬಸ್ ನಿಲ್ದಾಣದ ಮುಂಭಾಗದ ಎಂಎಸ್‌ಕೆ ಮಿಲ್ ರಸ್ತೆ, ಕೊಠಾರಿ ಭವನದ ಎದುರು ಕಳೆದ ವರ್ಷ ಲೋಕಾರ್ಪಣೆಗೊಂಡಿರುವ ರೈಲ್ವೆ ಮೇಲ್ಸೇತುವೆ ಹಾಗೂ ಹಳೆ ಮತ್ತು ಹೊಸ ಜೇವರ್ಗಿ ರಸ್ತೆಯ ಹಲವೆಡೆ ರಸ್ತೆಯಲ್ಲಿ ಭಾರಿ ಪ್ರಮಾಣದ ತಗ್ಗುಗಳು ಬಿದ್ದಿವೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಬಸ್ ನಿಲ್ದಾಣದ ಕಡೆಗೆ ಬರುವ ಆಟೊಗಳು ನಿಲ್ದಾಣಕ್ಕೂ ಮೊದಲೇ ಬರುವ ಎಡಬದಿಯ ರಸ್ತೆಯಲ್ಲಿ ಸಾಗಬೇಕು. ಅಲ್ಲಿಯೂ ರಸ್ತೆಯಲ್ಲಿ ತಗ್ಗುಗಳು ಬಿದ್ದಿರುವುದರಿಂದ ಪ್ರಯಾಣ ದುಸ್ತರವಾಗಿದೆ ಎನ್ನುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ರಸ್ತೆಗಳ ದುರಸ್ತಿಯಾಗಿಲ್ಲ. ಹೀಗಾಗಿ, ಸಕಾಲಕ್ಕೆ ಪ್ರಯಾಣಿಕರನ್ನು ಅವರು ಹೇಳಿದ ಸ್ಥಳಗಳಿಗೆ ತಲುಪಿಸಲು ಆಗುತ್ತಿಲ್ಲ ಎನ್ನುತ್ತಾರೆ ಕಲ್ಯಾಣ ಕರ್ನಾಟಕ ಆಟೊ ಚಾಲಕರ ಸಂಘದ ಅಧ್ಯಕ್ಷ ಲಕ್ಷ್ಮಿಕಾಂತ ಮಾಲಿಪಾಟೀಲ.
‘ಒಂದು ತಿಂಗಳಲ್ಲಿ ರಸ್ತೆ ಮಾಡಿಸಿಕೊಡುತ್ತೇವೆ ಎಂದು ಅಧಿಕಾರಿಗಳು ನಮ್ಮ ಮನವೊಲಿಸಿ ಬಸ್ ನಿಲ್ದಾಣದ ಹಿಂಬದಿಗೆ ಆಟೊಗಳನ್ನು ಒಯ್ಯಬೇಕು ಎಂದು ಸೂಚಿಸಿದ್ದರು. ಅವರ ಮಾತು ನಂಬಿ ಹಾಗೆಯೇ ಮಾಡುತ್ತಿದ್ದೇವೆ. ಆದರೆ, ಕಚ್ಚಾ ರಸ್ತೆ ಇದ್ದುದು ಇಂದಿಗೂ ಡಾಂಬರೀಕರಣ ಆಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಕನ್ನಡ ಭೂಮಿ ಜಾಗೃತಿ ಸಮಿತಿಯ ವಕ್ತಾರ ಆನಂದ ತೆಗನೂರ ಮಾತನಾಡಿ, ‘ಜಿಲ್ಲೆಯಲ್ಲಿ ಈಗಾಗಲೇ ಕೆಲ ಮುಖ್ಯ ರಸ್ತೆಗಳಿಗೆ ಡಾಂಬರ್ ಇಲ್ಲ. ಶಹಾಬಜಾರ ನಾಕಾದಿಂದ ಆಳಂದ ರಸ್ತೆಗೆ ಹೋಗಬೇಕಾದರೆ ಜನ ಬಹಳ ಹೈರಾಣಾಗುತ್ತಾರೆ. ದ್ವಿಚಕ್ರ ವಾಹನ ಸವಾರರಂತೂ ರಾತ್ರಿ ಸಮಯದಲ್ಲಿ ಬೀಳುವಂತಹ ಪರಿಸ್ಥಿತಿ ಆಗಿದೆ. ಆದರೆ, ಈ ವಿಷಯದ ಬಗ್ಗೆ ಮಹಾನಗರ ಪಾಲಿಕೆಯ ಆಯುಕ್ತರ ಗಮನಕ್ಕೆ ತಂದರೂ ರಸ್ತೆ ಕಡೆ ಗಮನ ಹರಿಸುತ್ತಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.
ಕಲಬುರಗಿ ನಗರದಲ್ಲಿ ಕಾರು ನಡೆಸುವುದೇ ದುಸ್ತರವಾಗಿದೆ. ತಗ್ಗುಗಳಿರುವುದರಿಂದ ವಾಹನಗಳು ಮೇಲಿಂದ ಮೇಲೆ ದುರಸ್ತಿಗೆ ಬರುತ್ತಿವೆ-ರುಕ್ಮಣ್ಣ ರೆಡ್ಡಿ, ರಾಜ್ಯ ಉಪಾಧ್ಯಕ್ಷ ಕರ್ನಾಟಕ ಚಾಲಕರ ಒಕ್ಕೂಟ
ಅಲ್ಲಮಪ್ರಭು
ಕಲಬುರಗಿ ಕೇಂದ್ರ ಬಸ್ ನಿಲ್ದಾಣದ ಎದುರಿನ ರಸ್ತೆಯನ್ನು ಹೊಸದಾಗಿ ಡಾಂಬರೀಕರಣ ಮಾಡಲು ಕೆಕೆಆರ್‌ಡಿಬಿ ಅನುದಾನದಲ್ಲಿ ಕ್ರಿಯಾಯೋಜನೆ ರೂಪಿಸಲಾಗಿದೆ. ಶೀಘ್ರ ಕೆಲಸ ಆರಂಭಗೊಳ್ಳಲಿದೆ-ಅಲ್ಲಮಪ್ರಭು ಪಾಟೀಲ, ಶಾಸಕ ಕಲಬುರಗಿ ದಕ್ಷಿಣ ಕ್ಷೇತ್ರ
ಭುವನೇಶ ಪಾಟೀಲ
ರಸ್ತೆಗಳ ದುರಸ್ತಿಗಾಗಿ ಟೆಂಡರ್ ಮುಕ್ತಾಯಗೊಂಡಿದ್ದು 10 ದಿನಗಳಲ್ಲಿ ಕಾಮಗಾರಿ ಶುರುವಾಗಲಿದೆ. ಕೆಲ ರಸ್ತೆಗಳಿಗೆ ಹೊಸದಾಗಿ ಡಾಂಬರೀಕರಣ ಮಾಡಬೇಕಿದ್ದು ₹ 5 ಕೋಟಿ ಬೇಕಾಗಬಹುದು. ಅದೂ ಶೀಘ್ರ ನಡೆಯಲಿದೆ-ಭುವನೇಶ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.