ಭಾನುವಾರ, ಜೂನ್ 13, 2021
29 °C
ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಮತ್ತೊಂದು ‘ಭದ್ರತಾ ಕವಚ’

₹ 6 ಕೋಟಿ ಮೌಲ್ಯದ ಅಗ್ನಿಶಾಮಕ ವಾಹನ ಖರೀದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಈಗ, ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ₹ 6 ಕೋಟಿ ಮೌಲ್ಯದ ಅಗ್ನಿಶಾಮಕ ವಾಹನ ಸೇರ್ಪಡೆಯಾಗಿದೆ.‌

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಆಸ್ಟ್ರಿಯಾ ದೇಶದಿಂದ ಖರೀದಿಸಿದ ಈ ಅಗ್ನಿಶಾಮಕ ವಾಹನದ ಹೆಸರು ‘ರೊಸೆನ್ ಬೌರ್ (ROSENBAUER)‘. ವೊಲ್ವೋ ಕಂಪನಿಯ ಈ ವಾಹನವನ್ನು ಸಂಸದ ಡಾ.ಉಮೇಶ ಜಾಧವ ಅವರು ಶನಿವಾರ ಈ ವಾಹನವನ್ನು ಲೋಕಾರ್ಪಣೆ ಮಾಡಿದರು.

ವಾಹನ ವಿಶೇಷತೆ ಏನು?: ಅತಿಹೆಚ್ಚು ಉಷ್ಣಾಂಶ, ಶೀತ, ಆರ್ದ್ರತೆ, ಹೊಗೆ, ಧೂಳು ಮುಂತಾದ ಪ್ರತಿಕೂಲ ವಾತಾವರಣದಲ್ಲಿಯೂ ಈ ಅಗ್ನಿಶಾಮಕ ವಾಹನ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಸಂಪೂರ್ಣ ಸ್ವಯಂಚಾಲಿತ ವಾಹನ ಇದಾಗಿದ್ದು, ಗರಿಷ್ಠ 121 ಕಿಲೋಮೀಟರ್ ವೇಗದಲ್ಲಿ ಚಲಿಸಲಿದೆ.

ಅಗ್ನಿ ಅವಘಡ ಸಂಭವಿಸಿದಾಗ 65 ಮೀಟರ್ ದೂರದವರೆಗೆ ನೀರು ಚಿಮ್ಮುವ ಶಕ್ತಿ ಇದಕ್ಕಿದೆ. ಟ್ಯಾಂಕರ್ 6000 ಲೀಟರ್ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದ್ದು, ಕಾರ್ಯಾಚರಣೆ ವೇಳೆ ಕೆಲವೇ ನಿಮಿಷಗಳಲ್ಲಿ 3000 ಲೀಟರ್ ಹೊರಚಿಮ್ಮಿಸಿ, ಬೆಂಕಿಯ ಜ್ವಾಲೆಗಳನ್ನು ಶಮನಗೊಳಿಸಬಲ್ಲದು.

‌800 ಲೀಟರ್ ನೊರೆ (ರಾಸಾಯನಿಕ ಮಿಶ್ರಿತ) ಟ್ಯಾಂಕರ್‌ ಕೂಡ ಇದರೊಳಗೇ ಇದೆ. ತೈಲಾಗಾರ, ವಿಮಾನ ನಿಲ್ದಾಣಗಳಂತಹ ಸ್ಥಳಗಳಲ್ಲಿ ಅತಿವೇಗವಾಗಿ ವ್ಯಾಪಿಸುವ ಬೆಂಕಿಯನ್ನು ನಂದಿಸಲು ಈ ನೊರೆ ಬಳಸಲಾಗುತ್ತದೆ.

‘ಏಕಕಾಲಕ್ಕೆ ದೊಡ್ಡ ಪ್ರಮಾಣದ ಅಗ್ನಿ ಅವಘಡ ಪ್ರದೇಶವನ್ನು ನಿಯಂತ್ರಿಸುವ ಹಾಗೂ ವಿಮಾನದ ರನ್–ವೇ ಗಳಲ್ಲಿ ಚಲಿಸುತ್ತಲೇ ಕಾರ್ಯಾಚರಣೆ ಮಾಡುವ ಬಲವನ್ನು ಈ ವಾಹನ ಹೊಂದಿದೆ‘ ಸಂಸದ ಡಾ.ಉಮೇಶ್ ಜಾಧವ್ ತಿಳಿಸಿದ್ದಾರೆ.

ಕಲಬುರ್ಗಿ ವಿಮಾನ ನಿಲ್ದಾಣ ನಿರ್ದೇಶಕ ಜ್ಞಾನೇಶ್ವರ್ ರಾವ್, ರಾಜ್ಯ ಅಗ್ನಿಶಾಮಕ ಇಲಾಖೆ ಅಧಿಕಾರಿ ಮಧು ರಾಠೋಡ, ಏರ್‌ಲೈನ್ಸ್ ಇಲಾಖೆ ಅಧಿಕಾರಿಗಳು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.