ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಗಳಲ್ಲಿ ಆರ್‌ಟಿ–ಪಿಸಿಆರ್ ಪರೀಕ್ಷೆ

ಆಂಬುಲೆನ್ಸ್‌ನಲ್ಲಿ ಸಿಬ್ಬಂದಿ ನಿಯೋಜನೆ; ಲಕ್ಷಣ ಇರುವವರ ತಪಾಸಣೆ
Last Updated 18 ಏಪ್ರಿಲ್ 2021, 3:55 IST
ಅಕ್ಷರ ಗಾತ್ರ

ಕಲಬುರ್ಗಿ: ಕೋವಿಡ್ 19 ಎರಡನೇ ಅಲೆ ಜಿಲ್ಲೆಯಲ್ಲಿ ಕ್ರಮೇಣ ಹೆಚ್ಚುತ್ತಿರುವುದರಿಂದ ಸೋಂಕಿತರನ್ನು ಪತ್ತೆ ಮಾಡಲು ಜಿಲ್ಲಾಡಳಿತ ಆಸ್ಪತ್ರೆಯ ಹೊರಗಡೆಯೂ ಕೊರೊನಾ ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ಸ್ಯಾಂಪಲ್‌ ಪಡೆಯಲು ಮುಂದಾಗಿದ್ದು, ಶನಿವಾರ ನಗರದ ವಿವಿಧ ಸ್ಥಳಗಳಲ್ಲಿ ಸಾರ್ವಜನಿಕರ ಗಂಟಲು, ಮೂಗಿನ ದ್ರವವನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಯಿತು.

ಜಿಲ್ಲಾಧಿಕಾರಿ ಅವರ ಸೂಚನೆ ಮೇರೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಆಂಬುಲೆನ್ಸ್‌ನಲ್ಲಿ ಅಗತ್ಯ ಸಾಧನಗಳೊಂದಿಗೆ ಸನ್ನದ್ಧರಾಗಿರುವ ಸಿಬ್ಬಂದಿ ಸೂಪರ್ ಮಾರ್ಕೆಟ್, ನೆಹರು ಗಂಜ್, ಚೌಕ್ ವೃತ್ತ, ಸರದಾರ ವಲ್ಲಭಭಾಯಿ ಪಟೇಲ್ ವೃತ್ತ, ಕೋರ್ಟ್ ಸರ್ಕಲ್, ಕೇಂದ್ರ ಬಸ್ ನಿಲ್ದಾಣ, ಹೀಗೆ ಪ್ರಮುಖ ಸ್ಥಳಗಳಲ್ಲಿ ಗಂಟಲು ಹಾಗೂ ಮೂಗಿನ ದ್ರವದ ಮಾದರಿಗಳನ್ನು ಸಂಗ್ರಸಿದರು.

ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಈ ಪ್ರಕ್ರಿಯೆ ಜಾರಿಯಲ್ಲಿದ್ದು, ಪ್ರತಿದಿನ 5600 ಜನರಿಂದ ಮಾದರಿ ಸಂಗ್ರಹಿಸಲಾಗುತ್ತಿದೆ. ನೀಡಿರುವ ಗುರಿಗಿಂತಲೂ ಹೆಚ್ಚಿನ ತಪಾಸಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಮಾಹಿತಿ ನೀಡಿದರು.

ಶೇ 90ರಷ್ಟು ಐಸಿಯು ಬೆಡ್ ಭರ್ತಿ: ನಗರದ ಜಿಮ್ಸ್ ಆಸ್ಪತ್ರೆ, ಪಕ್ಕದ ಟ್ರಾಮಾ ಕೇರ್ ಸೆಂಟರ್ ಹಾಗೂ ಸೇಡಂ ರಸ್ತೆಯಲ್ಲಿರುವ ಇಎಸ್‌ಐ ಆಸ್ಪತ್ರೆಯಲ್ಲಿನ ಐಸಿಯು ಬೆಡ್‌ಗಳು ಶೇ 90ರಷ್ಟು ಭರ್ತಿಯಾಗಿವೆ. ಅದಕ್ಕಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಶೇ 20ರಷ್ಟು ಬೆಡ್‌ಗಳನ್ನು ಆರೋಗ್ಯ ಇಲಾಖೆಯ ಸುಪರ್ದಿಗೆ ಒಪ್ಪಿಸುವಂತೆ ಸೂಚಿಸಲಾಗಿದೆ. ಅಲ್ಲದೇ, ಕೊರೊನಾ ಸೋಂಕು ಗಂಭೀರವಾಗುತ್ತಿರುವುದರಿಂದ ಶೇ 50ರಷ್ಟು ಬೆಡ್‌ಗಳನ್ನು ಪಡೆಯುವಂತೆ ಆದೇಶ ಹೊರಡಿಸಿದ್ದೇನೆ ಎಂದು ಹೇಳಿದರು.

ಎರಡು ಕೋವಿಡ್ ಕೇರ್ ಸೆಂಟರ್: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಎರಡು ಕಡೆ ಕೋವಿಡ್ ಕೇರ್ ಸೆಂಟರ್‌ಳನ್ನು ಆರಂಭಿಸಲಾಗಿದೆ. ಈಗಾಗಲೇ ಬುದ್ದ ವಿಹಾರ ಹತ್ತಿರದಲ್ಲಿರುವ ಪಾಲಿ ಕೇಂದ್ರವನ್ನು ಕೋವಿಡ್ ಕೇರ್ ಕೇಂದ್ರವಾಗಿ ಪರಿವರ್ತಿಸಲಾಗಿದ್ದು, ಅಲ್ಲಿ 28 ಜನರು ದಾಕಲಾಗಿದ್ದಾರೆ. ಇನ್ನು ರಿಂಗ್‍ರೋಡ್‍ನಲ್ಲಿರುವ ಯುನಾನಿ ಆಸ್ಪತ್ರೆಯನ್ನೂ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಜ್ಯೋತ್ಸ್ನಾ ಮಾಹಿತಿ ನೀಡಿದರು.

ನಗರದ ನ್ಯೂ ರಾಘವೇಂದ್ರ ಕಾಲೊನಿಯ ಮೋರೆ ಕಾಂಪ್ಲೆಕ್ಸ್ ಸಮೀಪದ ಮೋಹನರಾಜ್ ಚಾರಿಟಬಲ್ ಟ್ರಸ್ಟ್ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಘೋಷಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT