ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿರಂಗದ ಹೊಸ ದನಿಗಳು: ವಿಶಿಷ್ಟ ಕಿರುಚಿತ್ರಗಳ ಹಬ್ಬ

Last Updated 27 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

‘ಸಾಧಕರನ್ನು ಸನ್ಮಾನಿಸುವುದಕ್ಕಿಂತ, ಸಾಧನೆಯ ಹಾದಿ ತುಳಿದಿರುವ ಮನಸುಗಳನ್ನು ಉತ್ತೇಜಿಸಬೇಕು’ ಎಂಬುದು ‘ಟೊಟೊ ಫಂಡ್ಸ್‌ ದಿ ಆರ್ಟ್ಸ್‌’ ಸಂಸ್ಥೆಯ ಧ್ಯೇಯ. ಸಂಗೀತ, ಬರವಣಿಗೆ, ರಂಗಭೂಮಿ, ಫೋಟೊಗ್ರಫಿ ಮತ್ತು ಸಿನಿಮಾ ರಂಗದಲ್ಲಿ ಹಂಬಲವುಳ್ಳವರಿಗೆ ಅವಕಾಶಗಳನ್ನು ಸೃಷ್ಟಿಸಲು ಈ ಸಂಸ್ಥೆ ಹಲವಾರು ಚಟುವಟಿಕೆಗಳನ್ನು ಆಗಾಗ ಹಮ್ಮಿಕೊಳ್ಳುತ್ತಲೇ ಇರುತ್ತದೆ.

ಸಂಸ್ಥೆಯು ಇಂದಿರಾನಗರದಲ್ಲಿನ ಗೋಥೆ ಇನ್‌ಸ್ಟಿಟ್ಯೂಟ್‌ನ ಮ್ಯಾಕ್ಸ್‌ ಮುಲ್ಲರ್‌ ಭವನದ ಸಹಯೋಗದಲ್ಲಿ ‘ಸಿನಿರಂಗದ ಹೊಸ ದನಿಗಳು: ಕಿರುಚಿತ್ರಗಳ ಹಬ್ಬ’ ಎಂಬ ಕಾರ್ಯಕ್ರಮವನ್ನು ಏ.29ರಂದು ಆಯೋಜಿಸಿದೆ. ಇಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಚಿತ್ರಗಳ ಪ್ರದರ್ಶಿಸಲಾಗುತ್ತದೆ. ಜತೆಗೆ ಯುವ ಚಿತ್ರನಿರ್ದೇಶಕರೊಂದಿಗೆ ಸಂವಾದ ಏರ್ಪಡಿಸಲಾಗಿದೆ.

ಪ್ರದರ್ಶನ ಚಿತ್ರಗಳ ಪಟ್ಟಿಯಲ್ಲಿನ ‘ಅಹಮದ್ಸ್‌ ಡ್ರೀಮ್‌’ ಅಹಮದಾಬಾದ್‌ ನಗರ ನಿರ್ಮಾಣಕ್ಕೂ ಮುನ್ನ ನವಾಬ ಅಹಮದ್‌ ಶಾ ಕನಸು ಏನಾಗಿತ್ತು ಎಂದು ತಿಳಿಸುತ್ತದೆ. ‘ದಸ್ಲಾಖಿಯಾ’ ಸಾಕ್ಷ್ಯಚಿತ್ರ ಮಧ್ಯ ಪ್ರದೇಶದ ಕಾನ್ಹಾ ರಾಷ್ಟ್ರೀಯ ಉದ್ಯಾನದಲ್ಲಿ ಎದ್ದಿರುವ ಬೇಲಿಗಳಿಂದಾಗಿ ಬೈಗಾ ಬುಡಕಟ್ಟು ಅರಣ್ಯ ಹಕ್ಕುಗಳಿಂದ ವಂಚಿತರಾಗಿರುವ ದುಸ್ಥಿತಿ ಬಿಚ್ಚಿಡಲಿದೆ.

ನಗರೀಕರಣ ಮತ್ತು ತ್ವರಿತ ಅಭಿವೃದ್ಧಿಯಿಂದಾಗಿ ಬದಲಾಗುತ್ತಿರುವ ಬದುಕಿನ ಬಣ್ಣಗಳು ‘ಬಿಸ್ಮಾರ್‌ ಘರ್‌’ ಸಾಕ್ಷ್ಯಚಿತ್ರದಲ್ಲಿವೆ. ವೃತ್ತಿಬದುಕನ್ನು ನಿಭಾಯಿಸುತ್ತಿರುವ ತಾಯಿಯಾದ ಮಹಿಳೆಯೊಬ್ಬಳು ಪಡುವ ಪರಿಪಾಟಲುಗಳು ‘ಐ ಟೆಸ್ಟ್‌’ನಲ್ಲಿವೆ. ವಿವಿಧ ವಯೋಮಾನದಲ್ಲಿ ತಾಯಿ–ಮಗಳ ನಡುವೆ ಬದಲಾಗುವ ಭಾವಬಂಧಗಳನ್ನು ‘ರಿಧಂ’ನಲ್ಲಿ ಬಂಧಿಸಲಾಗಿದೆ.

ಜಮೀನ್ದಾರರ ತೋಟದಲ್ಲಿ ಬಾಳೆಗೊನೆ ಕಳ್ಳತನದ ಪ್ರಸಂಗ ಮತ್ತು ಅದರ ಪರಿಣಾಮವನ್ನು ‘ಕುರ್ಲಿ’ ಕಿರುಚಿತ್ರದಲ್ಲಿ ಕಾಣಬಹುದು. ಇದನ್ನು ನಟೇಶ್‌ ಹೆಗ್ಡೆ ನಿರ್ದೇಶಿಸಿದ್ದಾರೆ. ಯುವತಿಯೊಬ್ಬಳು ಗಂಗಾನದಿಯ ಮೇಲೆ ದೋಣಿಯಲ್ಲಿ ತೇಲುತ್ತ ಅಂಬಿಗನಿಗೆ ತನ್ನ ಕಥೆ–ವ್ಯಥೆ ವಿವರಿಸುವ ಕಥಾಹಂದರ ‘ಕಾಲಾ ಬಿಂದು’ವಿನಲ್ಲಿದೆ.

ನಡುರಾತ್ರಿಯ ಬಾನಮೌನದಲ್ಲಿ ಇಬ್ಬರು ನಡೆಸುವ ಸಂಭಾಷಣೆ ‘ಬರ್ಸಾತಿ’ಯಲ್ಲಿದ್ದರೆ, ಸಂಗೀತಗಾರ ಮತ್ತು ಸಂಗೀತದ ಪರಿಕರ ತಯಾರಿಸುವ ಕರಕುಶಲಗಾರನ ನಡುವಿನ ಬಂಧವೇನು ಎಂಬುದನ್ನು ‘ಜಿವಾರಿ’ ಸಾಕ್ಷ್ಯಚಿತ್ರ ತೋರಿಸುತ್ತದೆ. ಹರಯದಲ್ಲಿ ಮದುವೆಯಾಗಿ ಮರೆತ ಯುವತಿಯನ್ನು ನೆನಪಿಸಿಕೊಂಡ ವೃದ್ಧನೊಬ್ಬ, ಆಕೆಯನ್ನು ಹುಡುಕಿಕೊಂಡು ಹಳ್ಳಿಗಾಡಿಗೆ ಹೋಗುವ ಕಥಾನಕ ‘ವೆಡ್ಡಿಂಗ್‌ ಪ್ರಿಪರೇಷನ್ಸ್‌ ಇನ್‌ ದಿ ಕಂಟ್ರಿ’ಯಲ್ಲಿದೆ. ‘ಸರ್ಕಸ್‌’ನಲ್ಲಿ ಐ.ಟಿ. ಉದ್ಯೋಗಿಯ ಜೀವನ ಪ್ರಸಂಗವಿದೆ. ತಾತನೊಂದಿಗೆ ಕೋಲ್ಕತ್ತಾದಲ್ಲಿ ನೆಲೆಸಿರುವ ಮಲಯಾಳಿ ಮಹಿಳೆಯ ಏಕತಾನತೆ, ಜನರ ನಡುವಿನ ಇಂದಿನ ಬಂಧುತ್ವದ ಸ್ವರೂಪವನ್ನು ‘ಗಿ’ ಕಿರುಚಿತ್ರದಲ್ಲಿ ಗುರುತಿಸಬಹುದು.

2018ನೇ ಸಾಲಿನ ಆಸ್ಕರ್‌ ಪ್ರಶಸ್ತಿಯ ‘ಕಿರುಚಿತ್ರಗಳು’ ವಿಭಾಗದಲ್ಲಿ ಸ್ಪರ್ಧೆಯಲ್ಲಿದ್ದ ‘ವಟು ವೊಟೆ: ಆಲ್‌ ಆಫ್‌ ಅಸ್‌’ ಎಂಬ 22 ನಿಮಿಷದ ಕಿರುಚಿತ್ರವನ್ನೂ ಇಲ್ಲಿ ನೋಡಬಹುದು. ಕೀನ್ಯಾದಲ್ಲಿನ ಮುಸ್ಲಿಂ–ಕ್ರಿಶ್ಚಿಯನ್ನರ ಕಲಹಕಥನ ಇದರ ವಸ್ತು. ಇದಲ್ಲದೆ ‘ಹಾಫ್‌ವೇ, ಗುಡ್‌ನೈಟ್‌ ಎವ್ರಿಬಡ್ಸ್‌’ ಎಂಬ ಎರಡು ಅನಿಮೇಷನ್‌ ಚಿತ್ರಗಳನ್ನು ಇಲ್ಲಿ ತೋರಿಸಲಾಗುತ್ತಿದೆ. ಆಸಕ್ತರು ವಾರಾಂತ್ಯದ ಸಮಯವನ್ನು ಈ ಸಿನಿಮಾಗಳಿಗೆ ನೀಡಬಹುದು.

ಸ್ಥಳ: ಮ್ಯಾಕ್ಸ್‌ ಮುಲ್ಲರ್‌ ಭವನ, ಚಿನ್ಮಯ ಮಿಷನ್‌ ಆಸ್ಪತ್ರೆ ಸಮೀಪ, ಇಂದಿರಾನಗರ.  ಪ್ರವೇಶ ಉಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT