ಶನಿವಾರ, ಮಾರ್ಚ್ 6, 2021
19 °C
ಕಾರ್ಯಾರಂಭ ಮಾಡಿದ ಆರ್‌ಟಿಒ, ಉಪನೋಂದಣಾಧಿಕಾರಿ ಕಚೇರಿ

ವಾಹನ ನೋಂದಣಿಗೆ ಅವಕಾಶ; ಡ್ರೈವಿಂಗ್‌ ಲೈಸೆನ್ಸ್‌ ವಿತರಣೆ ಇಲ್ಲ

ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಮೂರನೇ ಹಂತದ ಲಾಕ್‌ಡೌನ್‌ ಸಂದರ್ಭದಲ್ಲಿ ಸರ್ಕಾರಿ ಕಚೇರಿಗಳನ್ನು ಪೂರ್ಣಪ್ರಮಾಣದಲ್ಲಿ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿರುವುದರಿಂದ ನಗರದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ), ಉಪನೋಂದಣಾಧಿಕಾರಿ ಕಚೇರಿ, ಕಂದಾಯ ಇಲಾಖೆ ಕಚೇರಿ ಸೇರಿದಂತೆ ಹಲವು ಕಚೇರಿಗಳು ಕಾರ್ಯಾರಂಭ ಮಾಡಿದವು. ಆದರೆ, ಜನರ ಸಂಖ್ಯೆ ವಿರಳವಾಗಿತ್ತು.

ಸೇಡಂ ರಸ್ತೆಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಿಬ್ಬಂದಿ ಹಾಜರಾಗಿದ್ದರು. ಆದರೆ, ವಿವಿಧ ಸೇವೆಗಳನ್ನು ಪಡೆಯಲು ಬರುವ ಜನರ ಸಂಖ್ಯೆಯೇ ವಿರಳವಾಗಿತ್ತು. ಕಚೇರಿ ಒಳಗಡೆ ಬರುವವರಿಗೆ ಕಡ್ಡಾಯವಾಗಿ ಸಿಬ್ಬಂದಿ ಥರ್ಮಲ್‌ ಸ್ಕ್ರೀನಿಂಗ್‌ ಮಾಡಿ ಒಳಗೆ ಬಿಡುತ್ತಿದ್ದರು.

ಸದ್ಯಕ್ಕೆ ಆರ್‌ಟಿಒ ಕಚೇರಿಯಲ್ಲಿ ಹೊಸ ವಾಹನಗಳ ನೋಂದಣಿ, ಪರ್ಮಿಟ್‌, ಫಿಟ್ನೆಸ್‌ ಸರ್ಟಿಫಿಕೇಟ್‌ (ಎಫ್‌.ಸಿ), ವಾಹನಗಳ ಮಾಲೀಕತ್ವ ಬದಲಾವಣೆ, ತಾತ್ಕಾಲಿಕ ನೋಂದಣಿಯಂತಹ ಸೇವೆಗಳನ್ನು ನೀಡಲಾಗುತ್ತಿದೆ. ಆದರೆ, ಲರ್ನಿಂಗ್‌ ಲೈಸೆನ್ಸ್, ಡ್ರೈವಿಂಗ್‌ ಲೈಸೆನ್ಸ್‌ಗಳನ್ನು ಸದ್ಯಕ್ಕೆ ಕೊಡುತ್ತಿಲ್ಲ. ಸರ್ಕಾರದ ಮುಂದಿನ ಆದೇಶ ನೋಡಿಕೊಂಡು ಈ ಸೇವೆಗಳನ್ನು ಆರಂಭಿಸಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ. ದಾಮೋದರ ‘ಪ್ರಜಾವಾಣಿ’ಗೆ ತಿಳಿಸಿದರು.

ಹೆಚ್ಚು ವಾಹನಗಳು ಇರುವಲ್ಲಿಗೇ ತೆರಳಿ ಸೇವೆ

ಲಾಕ್‌ಡೌನ್‌ ಸಂದರ್ಭದಲ್ಲಿ ಹೊಸ ವಾಹನಗಳನ್ನು ಖರೀದಿಸಿ ನೋಂದಣಿಗಾಗಿ ಕಾಯುತ್ತಿರುವ ಗ್ರಾಹಕರನ್ನು ಕಚೇರಿಗೆ ಕರೆಸಿಕೊಳ್ಳುವ ಬದಲು ಆಯಾ ಶೋರೂಮ್‌ಗಳಿಗೇ ಸಾರಿಗೆ ಅಧಿಕಾರಿಗಳು ತೆರಳಿ ನೋಂದಣಿ ಪ್ರಕ್ರಿಯೆ, ಫಿಟ್ನೆಸ್‌ ಪ್ರಮಾಣಪತ್ರಗಳನ್ನು ನೀಡಿ ಬಂದಿದ್ದಾರೆ ಎಂದು ವಿವರಿಸಿದರು.

ಲಾಕ್‌ಡೌನ್‌ನಲ್ಲಿಯೂ ₹1.31 ಕೋಟಿ ವರಮಾನ: ಬಿ.ಎಸ್‌. 6 ಸರಣಿಯ ವಾಹನಗಳ ಖರೀದಿಸಿದವರು ‘ವಾಹನ’ ಸಾಫ್ಟ್‌ವೇರ್‌ ಮೂಲಕ ಹೊಸ ವಾಹನಗಳ ಖರೀದಿಗಳನ್ನು ನೋಂದಣಿ ಮಾಡಲು ಅವಕಾಶ ನೀಡಲಾಗಿತ್ತು. ಇದರಿಂದಾಗಿ ಏಪ್ರಿಲ್ 24ರಿಂದ 30ರವರೆಗೆ 30ರವರೆಗೆ ನೋಂದಣಿ ತೆರಿಗೆ ಹಣ ₹ 1.31 ಕೋಟಿ ಸಂಗ್ರಹವಾಗಿದೆ. ಆನ್‌ಲೈನ್‌ ಮೂಲಕವೇ ಈ ಹಣವನ್ನು ಗ್ರಾಹಕರು ಪಾವತಿಸಿದ್ದಾರೆ ಎಂದರು.

ಆಟೊ ಆರಂಭ ಇಲ್ಲ

ಜಿಲ್ಲೆಯಲ್ಲಿ ಆಟೊ ರಿಕ್ಷಾಗಳ ಆರಂಭಕ್ಕೆ ಅನುಮತಿ ನೀಡಿಲ್ಲ. ಖಾಸಗಿ ವಾಹನಗಳು ಹಾಗೂ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಮಾತ್ರ ಜನರು ಸಂಚರಿಸಬಹುದಾಗಿದೆ. ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾಗಿರುವ ಆಟೊ ಚಾಲಕರಿಗೆ ಜಿಲ್ಲಾಡಳಿತದಿಂದ ಆಹಾರ ಧಾನ್ಯದ ಕಿಟ್ ವಿತರಿಸಲಾಗುವುದು. ಅದಕ್ಕಾಗಿ ಚಾಲಕರ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದೇವೆ ಎಂದು ಹೇಳಿದರು.

ಉಳಿದ ಕಚೇರಿಗಳು ಆರಂಭವಾದವಾದರೂ ಅಲ್ಲಿಯೂ ಜನದಟ್ಟಣಿ ಕಡಿಮೆ ಇತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು