ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಳ್ಳು ಅಮಾವಾಸ್ಯೆಯ ಸಂಭ್ರಮ

ಹೊಲಗಳಲ್ಲಿ ಶೇಂಗಾ ಎಳ್ಳಿನ ಹೋಳಿಗೆ ಸವಿದ ರೈತರು – ಮಕ್ಕಳು, ಮಹಿಳೆಯರಿಗೆ ಆಟದ ಸಂಭ್ರಮ
Last Updated 26 ಡಿಸೆಂಬರ್ 2019, 11:12 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದಲ್ಲಿ ಎಳ್ಳು ಅಮಾವಾಸ್ಯೆ ಸಂಭ್ರಮ ಜೋರಾಗಿತ್ತು. ನಗರದ ವಿವಿಧ ಭಾಗಗಳಲ್ಲಿ ಎಳ್ಳು ಅಮಾವಾಸ್ಯೆ ಪ್ರಯುಕ್ತ ಮಕ್ಕಳು, ಮಹಿಳೆಯರು ವಿವಿಧ ಆಹಾರ ಪದಾರ್ಥಗಳನ್ನು ಹೊತ್ತು ಸಾಗಿದ್ದು ಸಾಮಾನ್ಯವಾಗಿತ್ತು.

ಬೆಳಿಗ್ಗೆಯೇ ಮಕ್ಕಳು, ಮಹಿಳೆಯರೊಂದಿಗೆ ಕುಟುಂಬ ಸಮೇತ ಹೊಲಗಳಿಗೆ ತೆರಳಿದ ರೈತಾಪಿ ಜನ ಹೊಲಗಳಲ್ಲಿ ವಿಶೇಷವಾಗಿ ಎಳ್ಳು ಅಮಾವಾಸ್ಯೆ ಆಚರಿಸಿದರು. ಹೊಲದಲ್ಲಿ ಜೋಳ, ಸಜ್ಜೆಯ ದಂಟಿನಿಂದ ಗೂಡು ಕಟ್ಟಿದರು. ಅದರಲ್ಲಿ ಪಾಂಡವರ ಪ್ರತಿಮೆಯ ರೂಪದ ಐದು ಕಲ್ಲುಗಳನ್ನು ಇಟ್ಟು ಅರಿಶಿಣ, ಕುಂಕುಮ, ವಿಭೂತಿ ಹಚ್ಚಿ ಅಲಂಕರಿಸಿದರು.

ಪಾಂಡವರ ಪ್ರತಿಮೆಯ ಕಲ್ಲುಗಳಿಗೆ ಕುಟುಂಬಸ್ಥರೆಲ್ಲರೂ ಸೇರಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಚರಗವನ್ನು ಹೊಲದಲ್ಲಿ ಚೆಲ್ಲಿದ ರೈತರು ಉತ್ತಮ ಬೆಳೆ ನೀಡುವಂತೆ ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.

ಸಂಪಾಗಿ ಬೆಳೆದ ಜೋಳದ ಹೊಲದಲ್ಲಿ ಒಟ್ಟಿಗೆ ಊಟಕ್ಕೆ ಕುಳಿತ ರೈತ ಕುಟುಂಬ, ಜೋಳದ ರೊಟ್ಟಿ, ಶೇಂಗಾ ಎಳ್ಳಿನ ಹೋಳಿಗೆ, ಜೋಳದ ಅನ್ನ, ನವಣೆ ಅನ್ನ, ಶೇಂಗಾ ಪುಡಿ, ಹಪ್ಪಳ, ಸಂಡಿಗೆ, ಅನ್ನ–ಸಾರು, ವಿವಿಧ ಬಗೆಯ ಪಲ್ಯ ಸವಿದರು.

ಊಟ ಮುಗಿಯುತ್ತಲೇ ಅಜ್ಜ–ಅಜ್ಜಿಯರು ಹೊಲದಲ್ಲಿ ಮಾತಿಗೆ ಕುಳಿತರೆ, ಹಬ್ಬದ ಸಂಭ್ರಮದಲ್ಲಿದ್ದ ಮಕ್ಕಳು ಆಟದಲ್ಲಿ ಮುಳುಗಿದರು. ನಿತ್ಯವೂ ಶಾಲೆಯಲ್ಲಿರುತ್ತಿದ್ದ ಮಕ್ಕಳು ಹೊಲದಲ್ಲಿ ಭಾರೀ ಸಂಭ್ರಮದಿಂದ ಆಟವಾಡುವ ದೃಶ್ಯ ಹಲವೆಡೆ ಕಂಡುಬಂದಿತು.

ಪಬ್ಲಿಕ್ ಗಾರ್ಡನ್‌ನಲ್ಲೂ ಸಂಭ್ರಮ: ರೈತರು ಹೊಲಗಳಿಗೆ ತೆರಳಿ ಎಳ್ಳು–ಅಮಾಮಾಸ್ಯೆ ಆಚರಣೆ ಮಾಡಿದ್ದು ಒಂದೆಡೆಯಾದರೆ, ಇನ್ನೊಂದೆಡೆ ನಗರದ ಪಬ್ಲಿಕ್ ಗಾರ್ಡನ್‌ನಲ್ಲೂ ಎಳ್ಳು ಅಮಾವಾಸ್ಯೆಯ ಸಂಭ್ರಮ ಜೋರಾಗಿತ್ತು.

ಗಾರ್ಡನ್‌ಗೆ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಹೊತ್ತು ತಂದ ಕುಟುಂಬಸ್ಥರು ವರ್ಣರಂಜಿತ ಬಟ್ಟೆಗಳಲ್ಲಿ ಕಂಗೊಳಿಸಿದರು. ಗಾರ್ಡನ್‌ನಲ್ಲಿ ಕುಟುಂಬಸ್ಥರು ಗುಂಪು ಗುಂಪಾಗಿ ಕುಳಿತು ಊಟ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಎಳ್ಳು ಅಮಾವಾಸ್ಯೆ ಪ್ರಯುಕ್ತ ಗಾರ್ಡನ್‌ನಲ್ಲಿ ಭಾರೀ ಪ್ರಮಾಣದ ಜನ ಸೇರಿದ್ರಿಂದ ಮಕ್ಕಳು ಆಟಿಕೆ ಸಾಮಾನು, ಗಾಳಿಪಟ, ಬಲೂನ್‌ಗಳ ಮಾರಾಟವೂ ಜೋರಾಗಿತ್ತು.

ಆಟಾಟೋಪ: ಗಾರ್ಡನ್‌ನಲ್ಲಿ ಮಕ್ಕಳು, ಮಹಿಳೆಯರು, ವೃದ್ಧರು ಎನ್ನುವ ಭೇದ ಭಾವ ಇಲ್ಲದೇ ಕುಟುಂಬಸ್ಥರೆಲ್ಲರೂ ವಿವಿಧ ಆಟಗಳನ್ನು ಆಡಿ ಸಂಭ್ರಮಿಸಿದರು. ಲಗೋರಿ, ಚೆಂಡಾಟ, ಜಗ್ಗಾಟ, ಕಣ್ಣಾಮುಚ್ಚಾಲೆ ಸೇರಿದಂತೆ ವಿವಿಧ ರೀತಿಯ ಆಟಗಳನ್ನು ಆಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT