ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ ಬಳಸಲು ಇನ್ನೂ ಹಿಂದೇಟು

ಬಯಲು ಶೌಚ ಮುಕ್ತ ಜಿಲ್ಲೆ ಎಂದು ಘೋಷಿಸಿಕೊಂಡರೂ ವಾಸ್ತವ ಹಾಗಿಲ್ಲ ; ಸಮರ್ಪಕ ನೀರು ಪೂರೈಕೆ ಇಲ್ಲ
Last Updated 2 ಮಾರ್ಚ್ 2021, 5:05 IST
ಅಕ್ಷರ ಗಾತ್ರ

ಕಲಬುರ್ಗಿ: ಗ್ರಾಮೀಣ ಪ್ರದೇಶಗಳಲ್ಲಿ ವೈಯಕ್ತಿಕ ಶೌಚಾಲಯಗಳ ಬಳಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜನರಿಗೆ ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಟ್ಟರೂ ಶೇ 20ರಷ್ಟು ಮಾತ್ರ ಮೂಲ ಉದ್ದೇಶಕ್ಕೆ ಬಳಕೆಯಾಗುತ್ತಿವೆ.

ಉಳಿದ ಶೌಚಾಲಯಗಳಲ್ಲಿ ಕಟ್ಟಿಗೆ, ಕುಳ್ಳು, ದನಕ್ಕೆ ಹಾಕಲೆಂದು ಇರಿಸಲಾದ ಮೇವು, ಕಣಿಕೆಯ ಗೋದಾಮುಗಳಾಗಿ ಶೌಚಾಲಯ ಕಟ್ಟಡಗಳು ಬಳಕೆಯಾಗಿವೆ. ಏತನ್ಮಧ್ಯೆ ಕಲಬುರ್ಗಿಯನ್ನು ಬಯಲು ಶೌಚ ಮುಕ್ತ ಜಿಲ್ಲೆ ಎಂದು ವರ್ಷಗಳ ಹಿಂದೆಯೇ ಘೋಷಿಸಲಾಗಿದೆ. ಆದರೆ, ಯಾವುದೇ ಹಳ್ಳಿಗಳಿಗೆ ಬೆಳಿಗ್ಗೆ ಹಾಗೂ ಸಂಜೆಯ ಹೊತ್ತಿಗೆ ತೆರಳಿ ನೋಡಿದರೂ ಸಾಕು, ರಸ್ತೆಯ ಇಕ್ಕೆಲಗಳಲ್ಲಿ ಬಯಲು ಶೌಚ ಮಾಡುವ ದೃಶ್ಯ ಸಾಮಾನ್ಯವಾಗಿ ಕಾಣುತ್ತದೆ.

ವಾಸ್ತವವಾಗಿ ರಾಜ್ಯದಲ್ಲಿ 2003ರಿಂದಲೇ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸುವ ನಿರ್ಮಲ ಕರ್ನಾಟಕ ಯೋಜನೆ ಜಾರಿಗೆ ಬಂದಿತ್ತು. ಆ ನಂತರ ನಿರ್ಮಲ ಭಾರತ ಅಭಿಯಾನದಡಿ ಕೇಂದ್ರ ಸರ್ಕಾರವೂ ಯೋಜನೆಗೆ ಹಣಕಾಸು ನೆರವು ಘೋಷಿಸಿದ್ದರಿಂದ ಹೆಚ್ಚಿನ ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಆರಂಭಗೊಂಡಿತು. ಪ್ರಸ್ತುತ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಫಲಾನುಭವಿಗಳಿಗೆ ಹಣಕಾಸು ನೆರವು ನೀಡುತ್ತವೆ. ಪಡಿತರ ಚೀಟಿ, ಆಧಾರ್‌ ಕಾರ್ಡ್‌ನ್ನು ಆಯಾ ಗ್ರಾಮ ಪಂಚಾಯಿತಿಗಳಲ್ಲಿ ನೀಡಿದರೆ ಶೌಚಾಲಯ ಕಟ್ಟಡಕ್ಕೆ ಮಂಜೂರಾತಿ ಸಿಗುತ್ತದೆ.

ಸಾಮಾನ್ಯ ವರ್ಗದವರಿಗೆ ₹ 12 ಸಾವಿರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ₹ 15 ಸಾವಿರ ಆರ್ಥಿಕ ನೆರವು ನೀಡಲಾಗುತ್ತದೆ. ಇದರಲ್ಲಿ ಕೇಂದ್ರ ಸರ್ಕಾರ ₹ 7200 ನೆರವು ನೀಡಿದರೆ ₹ 4800ನ್ನು ರಾಜ್ಯ ಸರ್ಕಾರ ಭರಿಸುತ್ತದೆ.

ಮಾಡಿದ ಸಾಧನೆ ಮುಂದುವರಿಯಲಿಲ್ಲ...

ಆಳಂದ: ತಾಲ್ಲೂಕಿನ ನಂದಗೂರು, ಶುಕ್ರವಾಡಿ, ಗುಂಜ ಬಬಲಾದ ಗ್ರಾಮಗಳು ಸಂಪೂರ್ಣ ಬಯಲು ಶೌಚಮುಕ್ತ ಗ್ರಾಮಗಳಾಗಿ 2016ರಲ್ಲಿ ಸಾಧನೆ ಮಾಡಿದವು,
ಈ ಗ್ರಾಮಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ, ಪಿಡಿಓಗಳಿಗೂ ಹಲವು ಪ್ರಶಸ್ತಿಗಳು, ಸನ್ಮಾನಗಳು ಅರಸಿಕೊಂಡು ಬಂದವು. ವಿಶೇಷವಾಗಿ ನಂದಗೂರು (ಹೊದಲೂರು ಗ್ರಾ.ಪಂ.) ಹಾಗೂ ಶುಕ್ರವಾಡಿ (ತಡಕಲ್‌ ಗ್ರಾ.ಪಂ.) ಗ್ರಾಮಗಳ ಸಾಧನೆಯು ರಾಜ್ಯದ ಗಮನ ಸೆಳೆದು, ಅಂದಿನ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲರಿಂದ ವಿಶೇಷ ಅನುದಾನ, ಸೌರ ಬೀದಿದೀಪ ಮತ್ತಿತರ ಸೌಲಭ್ಯಗಳುಳ್ಳ ಕಾಮಗಾರಿಗೆ ಅನುದಾನ ಘೋಷಣೆಯಾಯಿತು.

ನಂದಗೂರು 120 ಮನೆಗಳಿರುವ ಪುಟ್ಚ ಗ್ರಾಮ, ಆದರೆ 4 ವರ್ಷದ ಹಿಂದೆ ಮಾಡಿದ ಸಾಧನೆಯು ಸಂಪೂರ್ಣ ಯಶಸ್ವಿಯಾಗಿಲ್ಲ, ಈಗಲೂ 70ಕ್ಕೂ ಹೆಚ್ಚು ಕುಟುಂಬಗಳಲ್ಲಿ ಮಾತ್ರ ಶೌಚಾಲಯ ಬಳಕೆಯಾಗುತ್ತಿದ್ದರೆ, ಉಳಿದ ಶೌಚಾಲಯಗಳು ಉರವಲು ಸಂಗ್ರಹದ ಜಾಗವಾಗಿವೆ. ಹಲವರು ನೀರಿನ ಕೊರತೆಯಿಂದ ಹೆಚ್ಚು ಬಳಕೆ ಮಾಡುತ್ತಿಲ್ಲ ಎನ್ನುವವರು ಇದ್ದಾರೆ.
ಶುಕ್ರವಾಡಿ 130 ಮನೆಗಳನ್ನು ಹೊಂದಿರುವ ಗ್ರಾಮ, ಇಲ್ಲಿಯೂ ಶೌಚಾಲಯಗಳಿಗೆ ಸಮರ್ಪಕ ನೀರಿನ ಸಮಸ್ಯೆ ಇದೆ. ಮನೆಯಲ್ಲಿ ದುರ್ವಾಸನೆ ನೆಪದಲ್ಲಿ ಬಯಲು ಶೌಚವೂ ಕೆಲವರಿಗೆ ಅನಿವಾರ್ಯವಾಗಿದೆ.

ಗ್ರಾಮ ಪಂಚಾಯಿತಿ ಸದಸ್ಯರ ಮನೆಯಲ್ಲಿ ಕಡ್ಡಾಯವಾಗಿ ಶೌಚಾಲಯ ಇರಬೇಕು. ಹಾಗೆ ಕಟ್ಟಿಸಿಕೊಂಡವರು ರಾತ್ರಿ ಮತ್ತು ಅನಿವಾರ್ಯದ ಸಮಯದಲ್ಲಿ ಮಾತ್ರ ಬಳಕೆ ಮಾಡುತ್ತಾರೆ. ಉಳಿದ ಸಂದರ್ಭಗಳಲ್ಲಿ ಶೌಚ ಕ್ರಿಯೆಗಾಗಿ ಬಯಲಿಗೇ ಹೋಗುತ್ತಾರೆ.

ಅವಿಭಜಿತ ತಾಲ್ಲೂಕಿನಲ್ಲಿವೆ 48,804 ವೈಯಕ್ತಿಕ ಶೌಚಾಲಯ
ಚಿಂಚೋಳಿ: ತಾಲ್ಲೂಕಿನಲ್ಲಿ ಬಯಲು ಶೌಚಾಲಯಕ್ಕೆ ಕಡಿವಾಣ ಹಾಕಲು ಶೌಚಾಲಯ ರಹಿತ ಕುಟುಂಬಗಳ ಸಮೀಕ್ಷೆ ನಡೆಸಿ ಸ್ವಚ್ಛ ಭಾರತ ಮಿಷನ್ ಮತ್ತು ನಿರ್ಮಲ ಭಾರತ ಅಭಿಯಾನ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ.

2011ರಲ್ಲಿ ನಡೆದ ಶೌಚಾಲಯ ರಹಿತ ಕುಟುಂಬಗಳ ಸಮೀಕ್ಷೆಯಲ್ಲಿ ತಾಲ್ಲೂಕಿನ ಕೇವಲ 8,777 ಶೌಚಾಲಯಗಳು ಇರುವುದು ಸಮೀಕ್ಷೆಯಲ್ಲಿ ಗೊತ್ತಾಗಿತ್ತು. ಆಗ ತಾಲ್ಲೂಕಿನಲ್ಲಿ ಒಟ್ಟು 50,001 ಕುಟುಂಬಗಳಿದ್ದವು. ಇದರಲ್ಲಿ 48,804 ಕುಟುಂಬಗಳು ವಿವಿಧ ಯೋಜನೆಗಳ ಅಡಿ ಶೌಚಾಲಯ ನಿರ್ಮಿಸಿಕೊಂಡಿವೆ.

ಪ್ರಸ್ತುತ ತಾಲ್ಲೂಕಿನಲ್ಲಿ ಕುಟುಂಬಗಳ ಸಂಖ್ಯೆ ಹೆಚ್ಚಾಗಿವೆ ಆದರೆ 2011ರಲ್ಲಿ ಶೌಚಾಲಯ ಇಲ್ಲದ ಕುಟುಂಬಗಳ ಸಮೀಕ್ಷೆ ನಡೆಸಿ ಯೋಜನೆ ಅನುಷ್ಠಾನಗೊಳಿಸಿದ್ದರಿಂದ ಶೌಚಾಲಯ ಇಲ್ಲದ ಕುಟುಂಬಗಳು ಶೌಚಾಲಯ ನಿರ್ಮಿಸಿಕೊಂಡ ಬಯಲು ಶೌಚ ಮುಕ್ತ ತಾಲ್ಲೂಕು ಘೋಷಣೆಯಾಗಿದೆ. 2011ರಲ್ಲಿ ಶೌಚಾಲಯ ಇಲ್ಲದ ಕುಟುಂಬಗಳ ಪೈಕಿ 1197 ಕುಟುಂಬಗಳು ಶೌಚಾಲಯ ಈಗ ಹೊಂದಿಲ್ಲ.
ಆದರೆ ಈಗ ಕುಟುಂಬಗಳ ಸಂಖ್ಯೆ ಹೆಚ್ಚಾಗಿದೆ. ಬಯಲು ಶೌಚ ಮುಕ್ತ ಜಿಲ್ಲೆ ಘೋಷಣೆಯಾದರೂ ಗ್ರಾಮೀಣ ಪ್ರದೇಶದಲ್ಲಿ ಈಗಲೂ ಬಯಲು ಶೌಚಾಲಯ ಪದ್ಧತಿ ಜೀವಂತವಾಗಿದೆ.

ಕೆಲವು ತಾಂಡಾ ಮತ್ತು ಗ್ರಾಮಗಳಲ್ಲಿ ಶೌಚಾಲಯ ನಿರ್ಮಿಸಿಕೊಂಡರೂ ಕುಟುಂಬದವರು ಅದನ್ನು ಬಳಸದಿರುವುದು ಸಾಮಾನ್ಯವಾಗಿದೆ.

ಕೆಲವು ಕಡೆ ಗುತ್ತಿಗೆದಾರರು ವೈಯಕ್ತಿಕ ಶೌಚಾಲಯ ನಿರ್ಮಿಸಿ ಪ್ರೋತ್ಸಾಹ ಧನ ಲಪಟಾಯಿಸಿರುವ ಘಟನೆಗಳು ಬೆಳಕಿಗೆ ಬಂದಿವೆ. ಇಲ್ಲಿನ ಪೋಲಕಪಳ್ಳಿ ಗ್ರಾ.ಪಂ. ವ್ಯಾಪ್ತಿಯ ಕಲಭಾವಿ ತಾಂಡಾದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಲು ವ್ಯಕ್ತಿಯೊಬ್ಬರು ಅನಧಿಕೃತ ಗುತ್ತಿಗೆ ಪಡೆದು ಜಿಂಕ್ ಶೀಟಿನ ಶೌಚಾಲಯ ನಿರ್ಮಿಸಿದ್ದಾರೆ!

ಪ್ರೋತ್ಸಾಹ ಧನವನ್ನು ಫಲಾನುಭವಿಗಳು ಗುತ್ತಿಗೆದಾರರಿಗೆ ನೀಡದ ಕಾರಣ ಇಲ್ಲಿ ವೈಯಕ್ತಿಕ ಶೌಚಾಲಯಗಳು ಅಪೂರ್ಣವಾಗಿರುವುದನ್ನು ಕಾಣಬಹುದಾಗಿದೆ.

ಅರಿವಿನ ಕೊರತೆ, ನೀರಿನ ಅಭಾವ ಹಾಗೂ ಆಧುನಿಕತೆಗೆ ಒಗ್ಗಿಕೊಳ್ಳದಿರುವುದು ಮತ್ತು ಮೌಢ್ಯತೆ ಶೌಚಾಲಯ ಇದ್ದರೂ ಬಳಸದಿರುವುದಕ್ಕೆ ಕಾರಣವಾಗಿವೆ.

ಕಾಳಗಿ: ಶೇ 85ರಷ್ಟುವೈಯಕ್ತಿಕ ಶೌಚಾಲಯ

ಕಾಳಗಿ: ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ತಾಲ್ಲೂಕಿನ 17 ಗ್ರಾಮ ಪಂಚಾಯಿತಿ ವ್ಯಾಪ್ತಿಯ 60 ಗ್ರಾಮಗಳಲ್ಲಿ ಶೇ 85ರಷ್ಟು ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ.

ಒಟ್ಟು ಗುರಿ 3667 ಶೌಚಾಲಯಗಳ ಪೈಕಿ ಫೆ 22ರವರೆಗೆ 2897 ಶೌಚಾಲಯ ನಿರ್ಮಾಣ ಮಾಡಲಾಗಿದ್ದು ಇನ್ನು 686 ಶೌಚಾಲಯಗಳು ನಿರ್ಮಿಸಬೇಕಾಗಿದೆ.

ವಿವರ: ಅರಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 162ರಲ್ಲಿ 135, ಬೆಡಸೂರ 164ರಲ್ಲಿ 160, ಚಿಂಚೋಳಿ ಎಚ್. 419ರಲ್ಲಿ 247, ಗೋಟೂರ 185ರಲ್ಲಿ 176, ಹೆಬ್ಬಾಳ 508ರಲ್ಲಿ 330, ಹೇರೂರ ಕೆ. 162ರಲ್ಲಿ 108, ಕೊಡದೂರ 446ರಲ್ಲಿ 350, ರಾಜಾಪುರ 245ರಲ್ಲಿ 205, ತೆಂಗಳಿ 126ರಲ್ಲಿ 124, ಕೋಡ್ಲಿ 247ರಲ್ಲಿ 175, ಮೋಘಾ 148ರಲ್ಲಿ 73, ಪಸ್ತಾಪುರ 204ರಲ್ಲಿ 137, ರಟಕಲ್ 119ರಲ್ಲಿ 91, ರುಮ್ಮನಗೂಡ 136ರಲ್ಲಿ 106 ಶೌಚಾಲಯಗಳನ್ನು ನಿರ್ಮಿಸಲಾಗಿದೆ.

ಕಂದಗೂಳ ಗ್ರಾಮ ಪಂಚಾಯಿತಿಯಲ್ಲಿ 169 ನಿರ್ಮಾಣದ ಗುರಿ ಹೊಂದಿದ್ದು 253 ನಿರ್ಮಿಸುವ ಮೂಲಕ ಗುರಿ ಮೀರಿ 84 ಹೆಚ್ಚುವರಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ.

ಅವಿಭಜಿತ ಜೇವರ್ಗಿ ತಾಲ್ಲೂಕು: 7678 ಶೌಚಾಲಯ ನಿರ್ಮಾಣ ಗುರಿ

ಜೇವರ್ಗಿ: ತಾಲ್ಲೂಕಿನಲ್ಲಿ 2020–21ನೇ ಸಾಲಿನಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಒಟ್ಟು 3,927 ವೈಯಕ್ತಿಕ ಶೌಚಾಲಯ ನಿರ್ಮಾಣದ ಗುರಿ ಹೊಂದಲಾಗಿದೆ. ಅದರಲ್ಲಿ 3,861 ಶೌಚಾಲಯ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೂ 66 ಶೌಚಾಲಯಗಳು ನಿರ್ಮಾಣ ಹಂತದಲ್ಲಿವೆ.

ಜೇವರ್ಗಿ ತಾಲ್ಲೂಕಿನಲ್ಲಿ 25 ಮತ್ತು ಯಡ್ರಾಮಿ ತಾಲ್ಲೂಕಿನಲ್ಲಿ 17 ಗ್ರಾಮ ಪಂಚಾಯಿತಿಗಳು ಸೇರಿ ಒಟ್ಟು 42 ಗ್ರಾಮ ಪಂಚಾಯಿತಿಗಳಿವೆ.

ಯಡ್ರಾಮಿ ತಾಲ್ಲೂಕಿನಲ್ಲಿ ಮಂಜೂರಾದ ಶೌಚಾಲಯಗಳು 3,751, ಅದರಲ್ಲಿ 3,707 ಶೌಚಾಲಯಗಳನ್ನು ನಿರ್ಮಿಸಲಾಗಿದೆ. 444 ಶೌಚಾಲಯಗಳ ನಿರ್ಮಾಣ ಕಾಮಗಾರಿ ಪ್ರಗತಿ ಹಂತದಲ್ಲಿದೆ ಎಂದು ಜೇವರ್ಗಿ ತಾಲ್ಲೂಕು ಕಚೇರಿ ಸಿಬ್ಬಂದಿ ನಾಗರಾಜ ಮಸ್ಕಿ ಮಾಹಿತಿ ನೀಡಿದ್ದಾರೆ.

ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕಿನಲ್ಲಿ ಒಟ್ಟು 7,678 ಶೌಚಾಲಯಗಳ ನಿರ್ಮಾಣ ಗುರಿ ಹೊಂದಲಾಗಿದ್ದು, ಮುಂಬರುವ ಮಾರ್ಚ್ ಅಂತ್ಯದವರೆಗೆ ಶೌಚಾಲಯ ನಿರ್ಮಾಣ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಜೇವರ್ಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಲಾಸರಾಜ್ ತಿಳಿಸಿದ್ದಾರೆ.

ತಾಲ್ಲೂಕಿನ ಅನೇಕ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇರುವುದರಿಂದ ಶೌಚಾಲಯಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆಗಳು ಅಧಿಕವಾಗಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನೀರಲಕೊಡ ಗ್ರಾಮಸ್ಥರು ತಿಳಿಸಿದ್ದಾರೆ.

ಜೇವರ್ಗಿ ತಾಲ್ಲೂಕಿನ ಹರನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನೀರಲಕೊಡ ಗ್ರಾಮದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ 2014–15ನೇ ಸಾಲಿನಲ್ಲಿ ₹ 12 ಲಕ್ಷ ಅಂದಾಜು ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು.

ಶೇ 20ರಷ್ಟು ಮಾತ್ರ ಬಳಕೆ

ಜನರಲ್ಲಿ ವೈಯಕ್ತಿಕ ಶೌಚಾಲಯದ ಬಗ್ಗೆ ಅರಿವಿನ ಕೊರತೆಯಿಂದಾಗಿ ಒಟ್ಟಾರೆ ನಿರ್ಮಿಸಲಾದ ಶೌಚಾಲಯಗಳಲ್ಲಿ ಹೆಚ್ಚೆಂದರೆ ಶೇ 20ರಷ್ಟು ಶೌಚಾಲಯಗಳು ಬಳಕೆಯಲ್ಲಿವೆ. ಉಳಿದವು ನಿಷ್ಪ್ರಯೋಜಕವಾಗಿವೆ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು.

ಮನೆಯ ಸಮೀಪದಲ್ಲಿ ಶೌಚಾಲಯ ಮಾಡಬಾರದು ಎಂಬ ಪರಿಕಲ್ಪನೆಯೇ ಅನೇಕರಲ್ಲಿದೆ. ಆದರೆ, ಬಯಲು ಶೌಚಾಲಯದಿಂದ ಹೆಚ್ಚು ರೋಗ ರುಜಿನಗಳು, ವಿಷಜಂತುಗಳು ಕಚ್ಚುವುದು, ಹಂದಿಗಳ ಹಾವಳಿ ಸೇರಿದಂತೆ ಹಲವು ಸಮಸ್ಯೆಗಳಿವೆ. ಆದಾಗ್ಯೂ, ಅವುಗಳ ಬಗ್ಗೆ ಹೆಚ್ಚಿನ ಜನರಿಗೆ ಜಾಗೃತಿಯ ಕೊರತೆ ಇದೆ ಎನ್ನುತ್ತಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಹಾಗೂ ಸ್ವಚ್ಛ ಭಾರತ ಅಭಿಯಾನದಡಿ ಜಾಗೃತಿಗಾಗಿಯೇ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿ ಹಣ ಬಿಡುಗಡೆ ಮಾಡಿದರೆ ಬೀದಿ ನಾಟಕ, ಗೋಡೆ ಬರಹದ ಮೂಲಕ ಜಾಗೃತಿ ಮೂಡಿಸಬಹುದಾಗಿದೆ ಎಂದು ಅವರು ಹೇಳಿದರು.

ಶೌಚಾಲಯ ಬಳಕೆಗೆ ನೀರಿನ ಕೊರತೆ

ಕಲಬುರ್ಗಿ, ಜೇವರ್ಗಿ, ಅಫಜಲಪುರ, ಚಿಂಚೋಳಿ, ಕಾಳಗಿ, ಚಿತ್ತಾಪುರ, ಸೇಡಂ ಸೇರಿದಂತೆ ಹಲವು ತಾಲ್ಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಕುಡಿಯುವ ನೀರಿಗೇ ತತ್ವಾರ ಇದೆ. ಅಂಥದರಲ್ಲಿ ನಾಲ್ಕೈದು ಜನರಿರುವ ಕುಟುಂಬದ ಶೌಚಾಲಯ ಬಳಕೆಗೆ ಬ್ಯಾರೆಲ್‌ಗಟ್ಟಲೇ ನೀರು ಬೇಕು. ಅಷ್ಟೊಂದು ನೀರನ್ನು ಹೊಂದಿಸುವುದು ಆಗುವುದಿಲ್ಲ. ಹೀಗಾಗಿ, ಶೌಚಾಲಯ ಬಳಕೆ ಮಾಡಲು ಆಗುತ್ತಿಲ್ಲ ಎಂಬುದು ಬಹುತೇಕ ಗ್ರಾಮಸ್ಥರು ಹೇಳುವ ಮಾತು.

ಮಾಹಿತಿ: ವೆಂಕಟೇಶ ಆರ್.ಹರವಾಳ, ಜಗನ್ನಾಥ ಡಿ. ಶೇರಿಕಾರ, ಮಲ್ಲಿಕಾರ್ಜುನ ಮಡಬೂಳಕರ್, ಸಂಜಯ ಪಾಟೀಲ, ಗುಂಡಪ್ಪ ಕರೆಮನೋರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT