ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ಮಾರುಕಟ್ಟೆಯಲ್ಲಿ ಜನಜಂಗುಳಿ

ರಸ್ತೆಗಿಳಿದ ವಾಹನಗಳ ತಪಾಸಣೆ ನಡೆಸಿದ ಪೊಲೀಸ್ ಕಮಿಷನರ್ ರವಿಕುಮಾರ್
Last Updated 24 ಮೇ 2021, 3:14 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ ಮೂರು ದಿನಗಳ ಕಠಿಣ ಲಾಕ್‌ಡೌನ್‌ ಭಾನುವಾರ ತೆರವುಗೊಂಡು ಬೆಳಿಗ್ಗೆ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದರಿಂದ ನಗರದ ಕಿರಣಾ ಬಜಾರ್ ಹಾಗೂ ತರಕಾರಿ ಮಾರುಕಟ್ಟೆ ಬಳಿ ಜನಜಂಗುಳಿ ಕಂಡು ಬಂತು.

ಸೂಪರ್‌ ಮಾರ್ಕೆಟ್, ಎಂಎಸ್‌ಕೆ ಮಿಲ್, ರಾಮಮಂದಿರ ವೃತ್ತ, ವಾಜಪೇಯಿ ಲೇಔಟ್‌ನಲ್ಲಿರುವ ತರಕಾರಿ ಮಾರುಕಟ್ಟೆ ಬಳಿ ಬೆಳಿಗ್ಗೆಯೇ ಹೆಚ್ಚಿನ ಜನಸಂದಣಿ ಕಂಡು ಬಂತು. ನಿಗದಿತ ಅವಧಿ ಮುಗಿದ ಬಳಿಕ ಪೊಲೀಸರು ಹಾಗೂ ಸ್ವಯಂ ಸೇವಕರು ವ್ಯಾಪಾರಿಗಳು ಹಾಗೂ ಗ್ರಾಹಕರನ್ನು ಚದುರಿಸಿದರು.

ಮಾರುಕಟ್ಟೆ ತೆರವುಗೊಳಿಸುವ ಧಾವಂತದಲ್ಲಿ ಸಿಕ್ಕಷ್ಟು ಬೆಲೆಗೆ ತರಕಾರಿಗಳನ್ನು ಮಾರಾಟ ಮಾಡಿ ವ್ಯಾಪಾರಿಗಳು ಮನೆಯತ್ತ ತೆರಳಿದರು. ಒಂದು ಕೆಜಿ ಈರುಳ್ಳಿ ಬೆಲೆ ₹ 8ಕ್ಕೆ ಮಾರಾಟವಾಯಿತು. ಕಿರಾಣಿ ಅಂಗಡಿಗಳ ಮುಂದೆ ಗುಂಪಾಗಿ ನಿಂತಿದ್ದ ಜನರನ್ನು ಚದುರಿಸಿದರು. ಅಂಗಡಿಗಳ ಮಾಲೀಕರಿಗೆ ಶಟರ್ ಎಳೆಯುವಂತೆ ಪೊಲೀಸರು ಸೂಚಿಸಿದರು. ಸ್ವಯಂಸೇವಕರೂ ಲಾಠಿ ಹಿಡಿದು ಜನರನ್ನು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿದ್ದರು.‌

ರಸ್ತೆಗಿಳಿದ ಕಮಿಷನರ್: ಭಾನುವಾರವಷ್ಟೇ ನೂತನ ಕಮಿಷನರ್‌ ಆಗಿ ಅಧಿಕಾರ ವಹಿಸಿಕೊಂಡಿರುವ ಡಾ.ವೈ.ಎಸ್. ರವಿಕುಮಾರ್‌ ಅವರು ನಗರದ ಹಲವೆಡೆ ಸಂಚರಿಸಿ ಬಂದೋಬಸ್ತ್ ಕಾರ್ಯವನ್ನು ಪರಿಶೀಲಿಸಿದರು. ರಸ್ತೆಗಳಲ್ಲಿ ಬಂದ ವಾಹನಗಳನ್ನು ತಡೆದು ಎಲ್ಲಿಗೆ ಹೋಗುತ್ತಿದ್ದಾರೆ ಎಂಬುದನ್ನು ವಿಚಾರಿಸಿದರು. ಅನಗತ್ಯವಾಗಿ ಓಡಾಡುತ್ತಿದ್ದವರ ವಾಹನಗಳನ್ನು ವಶಕ್ಕೆ ಪಡೆಯುವಂತೆಯೂ ಸೂಚಿಸಿದರು.

ಕೇಂದ್ರ ಬಸ್ ನಿಲ್ದಾಣ, ಎಸ್‌ವಿಪಿ ವೃತ್ತ, ಜಗತ್ ವೃತ್ತ, ಸೂಪರ್ ಮಾರ್ಕೆಟ್‌, ಮುಸ್ಲಿಂ ಚೌಕ್, ರಿಂಗ್ ರಸ್ತೆಯಲ್ಲಿ ಪೊಲೀಸರು ನಾಕಾಬಂದಿಗಳನ್ನು ಹಾಕಿ ವಾಹನಗಳ ತಪಾಸಣೆ ನಡೆಸಿದರು. ಮಧ್ಯಾಹ್ನದ ಬಳಿಕ ವಾಹನ ಸಂಚಾರ ವಿರಳವಾಗಿದ್ದರಿಂದ ಪೊಲೀಸರೂ ನಿರಾಳರಾದರು. ಹೆಚ್ಚಿನ ವಾಹನಗಳ ತಪಾಸಣೆಗೆ ಮುಂದಾಗಲಿಲ್ಲ.

66 ವಾಹನಗಳ ಜಪ್ತಿ

ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿ ರಸ್ತೆಗಿಳಿದ 66 ವಾಹನಗಳನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ.

43 ದ್ವಿಚಕ್ರ ವಾಹನಗಳು, 17 ತ್ರಿಚಕ್ರ ವಾಹನಗಳು ಹಾಗೂ 6 ನಾಲ್ಕು ಚಕ್ರದ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಮಾಸ್ಕ್ ಧರಿಸದೇ ಇರುವುದಕ್ಕಾಗಿ 361 ಪ್ರಕರಣಗಳನ್ನು ದಾಖಲಿಸಿಕೊಂಡು ₹ 77,150 ದಂಡ ವಸೂಲಿ ಮಾಡಲಾಗಿದೆ ಎಂದು ಡಿಸಿಪಿ ಡಿ.ಕಿಶೋರಬಾಬು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT