ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಎಲ್ಲ ರಂಗಗಳು ಕೈಜೋಡಿಸಲಿ: ಪ್ರೊ. ಬಟ್ಟು ಸತ್ಯನಾರಾಯಣ

ಸಾಹಿತ್ಯ ಸಾರಥಿ ವಾರ್ಷಿಕ ಪ್ರಶಸ್ತಿ ಪ್ರದಾನ
Last Updated 9 ಆಗಸ್ಟ್ 2022, 14:37 IST
ಅಕ್ಷರ ಗಾತ್ರ

ಕಲಬುರಗಿ: ‘ಸಮಾಜದಲ್ಲಿ ಪ್ರತಿಯೊಂದು ರಂಗ ಮುಖ್ಯವಾಗಿದೆ. ಕಲೆ, ಸಂಗೀತ, ಸಾಹಿತ್ಯ, ಪತ್ರಿಕೋದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳು ಮುಖ್ಯವಾಗಿದೆ. ದೇಶದ ಅಭಿವೃದ್ಧಿಯಲ್ಲಿ ಎಲ್ಲ ರಂಗಗಳು ಕೈ ಜೋಡಿಸಿದಲ್ಲಿ ನಿರೀಕ್ಷಿತ ಅಭಿವೃದ್ಧಿ ಸಾಧ್ಯ.‌ ಇದನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳುತ್ತಾರೆ’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅಭಿಪ್ರಾಯಪಟ್ಟರು.

ನಗರದಲ್ಲಿ ಮಂಗಳವಾರ ಸಾಹಿತ್ಯ ಸಾರಥಿ ಪತ್ರಿಕೆಯ 5ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಪ್ರತಿಭೆ ಗುರುತಿಸುವುದು ಸಮಾಜದಲ್ಲಿ ದೊಡ್ಡ ಕೆಲಸವಾಗಿದೆ. ಒಟ್ಟಾರೆ ಸಮಾಜಮುಖಿ ಕಾರ್ಯಗಳು ಇನ್ನಷ್ಟು ನಡೆಯಲಿ’ ಎಂದರು.‌

ಸಾಹಿತ್ಯ ಸಾರಥಿ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ, ‘ಈ ಭಾಗದಲ್ಲಿ ಪ್ರಾದೇಶಿಕ ಅಸಮತೋಲನ ಹಿಂದಿನಂತೆ ಮುಂದುವರೆದಿದೆ. ಸರ್ಕಾರದ ಪ್ರೋತ್ಸಾಹ ಇಲ್ಲದಿದ್ದರೂ ಕನ್ನಡ ಭಾಷೆ ಶ್ರೀಮಂತಿಕೆ ಹೊಂದಿರುವುದಕ್ಕೆ ಈ ಭಾಗದ ಜನರ ಹೋರಾಟದ ಮನೋಭಾವ ಕಾರಣ’ ಎಂದು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿ, ದೃಶ್ಯ ಮಾಧ್ಯಮ ಹೆಚ್ಚಾದ ನಂತರ ಓದುಗರ ಪ್ರಮಾಣ ಕಡಿಮೆಯಾಗುವ ಆತಂಕವಿತ್ತು. ಆದರೆ ಓದುಗರ ಪ್ರಮಾಣ ಕಡಿಮೆ ಆಗಿಲ್ಲ ಎಂಬುದು ಈಚೆಗೆ ಸರ್ವೆ ವರದಿ ತಿಳಿಸಿದೆ. ಡಾ. ಡಿ. ಎಂ. ನಂಜುಂಡಪ್ಪ ವರದಿ ಶಿಫಾರಸು ಅನ್ವಯ ಸರ್ಕಾರ ಈ ಭಾಗಕ್ಕೆ ಪ್ರಶಸ್ತಿ ನೀಡುವಲ್ಲಿ ಹೆಚ್ಚು ಆದ್ಯತೆ ನೀಡಬೇಕು ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಬಸವರಾಜ ಡೋಣೂರ, ‘ಪ್ರಶಸ್ತಿ, ಪುರಸ್ಕಾರ ಸಾಹಿತಿಗಳಿಗೆ ಸಿಗಬೇಕು, ಪ್ರಶಸ್ತಿ ಪಾತ್ರವನ್ನು ನಿರ್ವಹಿಸಲು ಪ್ರೇರೇಪಿಸುತ್ತದೆ’ ಎಂದರು.

ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಪೆರ್ಲ, ಸಾಹಿತಿ ಡಾ. ಜಯದೇವಿ ಗಾಯಕವಾಡ ಹಾಗೂ ಪ್ರಾಧ್ಯಾಪಕ ಡಾ.ಬಿ.ಪಿ.ಬುಳ್ಳಾ ಮಾತನಾಡಿದರು.

ಪ್ರಶಸ್ತಿ ಪ್ರದಾನ: ಸಮಾರಂಭದಲ್ಲಿ ಕರ್ನಾಟಕ ಕೇಂದ್ರೀಯ ವಿ.ವಿ. ಕುಲಸಚಿವ ಪ್ರೊ. ಬಸವರಾಜ ಡೋಣೂರ, ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಡಾ. ಜಯದೇವಿ ಗಾಯಕವಾಡ, ಮಾಧ್ಯಮ ಕ್ಷೇತ್ರದಲ್ಲಿ ಡಾ. ಸದಾನಂದ ಪೆರ್ಲ, ಹಣಮಂತರಾವ ಭೈರಾಮಡಗಿ, ಡಾ. ಬಿ.ಪಿ. ಬುಳ್ಳಾ, ಡಾ. ಅಶೋಕ ಕುಮಾರ, ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ, ಡಾ.ಅಮೋಲ ಪತಂಗೆ, ಅಜಯಕುಮಾರ ದಾಮರಗಿದ್ದಿ, ಡಾ. ರೆಹಮಾನ ಪಟೇಲ್ ಹಾಗೂ ವಿಜಯಲಕ್ಷ್ಮಿ ಕೆಂಗನಾಳ ಅವರಿಗೆ ಸಾಹಿತ್ಯ ಸಾರಥಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಿ.ಸಿ. ನಿಂಗಣ್ಣ ಸ್ವಾಗತಿಸಿದರೆ ಪ್ರಾಸ್ತಾವಿಕವಾಗಿ ಸಾಹಿತ್ಯ ಸಾರಥಿ ಸಂಪಾದಕ ಬಿ.ಎಚ್. ನಿರಗುಡಿ ಮಾತನಾಡಿ, ಸಾಹಿತ್ಯ ಕ್ಷೇತ್ರದ ಅಭಿವೃದ್ಧಿಗೆ ಮೀಸಲಿಟ್ಟಿರುವುದಾಗಿ ಜತೆಗೆ ಸಾಹಿತ್ಯ ವಾಗಿ ಪತ್ರಿಕೆ ಹೊಸಬರಿಗೆ ಅವಕಾಶ ಸಿಗುವ ನಿಟ್ಟಿನಲ್ಲಿ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು. ಶರಣಬಸಪ್ಪ ವಡ್ಡನಕೇರಿ ನಿರೂಪಿಸಿದರು.

ಶ್ರೀನಿವಾಸ ಸರಡಗಿಯ ರೇವಣಸಿದ್ದ ಸ್ವಾಮಿಗಳು ಆಶೀರ್ವಚನ ನೀಡಿದರು.ಅಧ್ಯಕ್ಷತೆಯನ್ನು ದಿಶಾ ಕಾಲೇಜಿನ ಮುಖ್ಯಸ್ಥ ಶಿವಾನಂದ ಖಜುರ್ಗಿ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT