ದೀಪಾವಳಿ: ಪಟಾಕಿ ಮಾರಾಟ ಜೋರು

7
ಶರಣಬಸವೇಶ್ವರ ದೇವಸ್ಥಾನದ ಎದುರು ಮಾರಾಟ; 36 ಮಳಿಗೆ ಸ್ಥಾಪನೆ

ದೀಪಾವಳಿ: ಪಟಾಕಿ ಮಾರಾಟ ಜೋರು

Published:
Updated:
Deccan Herald

ಕಲಬುರ್ಗಿ: ಬೆರಗು ಬೆಳಕಿನ ದೀಪಾವಳಿ ಹಬ್ಬ ಮತ್ತೆ ಬಂದಿದೆ. ಬಣ್ಣ ಬಣ್ಣದ ಪಟಾಕಿಗಳನ್ನು ಸಿಡಿಸಿ ಸಂತಸದ ಹೊನಲಿನಲ್ಲಿ ತೇಲಲು ಚಿಣ್ಣರು, ಯುವಕರು ಸನ್ನದ್ಧರಾಗಿದ್ದು ನಗರದಲ್ಲಿ ಪಟಾಕಿಗಳ ಮಾರಾಟ ಜೋರಾಗಿದೆ.

ಶ್ರೀ ಶರಣಬಸವೇಶ್ವರ ದೇವಸ್ಥಾನದ ಮುಂಭಾಗದ ಮೈದಾನದಲ್ಲಿ ಪಟಾಕಿ ವ್ಯಾಪಾರಿಗಳಿಗೆ 36 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಪಟಾಕಿ ಮಾರಾಟ ಮಾಡುವುದನ್ನು ನಿಷೇಧಿಸಲಾಗದು ಎಂದು ಹೇಳಿರುವ ಸುಪ್ರೀಂಕೋರ್ಟ್, ಪಟಾಕಿ ಹಾರಿಸುವ ಸಮಯವನ್ನು ರಾತ್ರಿ 8ರಿಂದ 10 ಗಂಟೆವರೆಗೆ ನಿಗದಿಪಡಿಸಿದೆ. ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದು, ‘ಬರ’ದ ಮಧ್ಯೆಯೇ ಸಾರ್ವಜನಿಕರು ಪಟಾಕಿ ಖರೀದಿಯಲ್ಲಿ ನಿರತರಾಗಿದ್ದಾರೆ.

ಬಗೆ ಬಗೆಯ ಪಟಾಕಿಗಳು: ರಾಕೆಟ್, ಲಕ್ಷ್ಮಿ, ಆಟಂಬಾಂಬ್, ಕಲರ್ ಚೈಂಜಿಂಗ್, ಡಿಸ್ಕೋ ಫ್ಲಾಶ್, ಟೈಗರ್ ಪಟಾಕಿ, ಸುರಳಿ ಬಾಂಬ್, ಚಟ್‌ಪಟ್‌, ಸುರಸುರ ಬತ್ತಿ, ಕಲರ್ ಬಾಂಬ್, ಕಲರ್ ಸ್ಮೋಕ್ ಮತ್ತು ಫ್ಲಾವರ್ ಪಾಟ್ ಸೇರಿದಂತೆ ತರಹೇವಾರಿ ಪಟಾಕಿಗಳು ಮಾರಾಟಕ್ಕೆ ಲಭ್ಯ ಇವೆ. ₹10 ರಿಂದ ₹400ವರೆಗೆ ದರ ಇದೆ.

ಪಟಾಕಿಗಳ ಜತೆಯಲ್ಲೇ ಚಿಕ್ಕಮಕ್ಕಳು ಬಳಸುವ ಪ್ಲಾಸ್ಟಿಕ್ ಪಿಸ್ತೂಲ್, ಗನ್‌ಗಳ ಮಾರಾಟವೂ ಜೋರಾಗಿದೆ. ₹25ರಿಂದ ₹200 ವರೆಗಿನ ಪಿಸ್ತೂಲ್ ಮತ್ತು ಗನ್‌ಗಳು ಮಾರಾಟಕ್ಕೆ ಇವೆ. ಮಕ್ಕಳನ್ನು ಸೆಳೆಯಲೆಂದು ಕೆಲವೆಡೆ ಪಿಸ್ತೂಲ್ ಖರೀದಿಗೆ ಒಂದು ಬಾಕ್ಸ್ ಪಟಾಕಿಗಳ ಡಬ್ಬಿ (ಕೇಪ್‌)ಯನ್ನು ವ್ಯಾಪಾರಿಗಳು ಉಚಿತವಾಗಿ ನೀಡುತ್ತಿದ್ದಾರೆ. ಶಾಲಾ–ಕಾಲೇಜುಗಳಿಗೆ ನವೆಂಬರ್ 8ರ ವರೆಗೆ ರಜೆ ಘೋಷಿಸಿರುವುದರಿಂದ ಮಕ್ಕಳು ಪಾಲಕರೊಂದಿಗೆ ಉತ್ಸಾಹದಿಂದ ಬಂದು ಪಟಾಕಿ ಖರೀದಿಸುತ್ತಿದ್ದಾರೆ.

‘ಪಟಾಕಿ ಮಾರಾಟ ಈಗಷ್ಟೇ ಆರಂಭವಾಗಿದೆ. 3–4 ದಿನಗಳ ಬಳಿಕ ವ್ಯಾಪಾರ ಹೇಗಾಗಲಿದೆ ಎಂಬುದು ಗೊತ್ತಾಗಲಿದೆ. ಜಿಎಸ್‌ಟಿ, ಬೆಲೆ ಏರಿಕೆ ಮತ್ತು ಶಿವಕಾಶಿಯಲ್ಲಿ ಪಟಾಕಿ ತಯಾರಿಕೆಗೆ ಸಾಕಷ್ಟು ನಿರ್ಬಂಧಗಳನ್ನು ವಿಧಿಸಿರುವುದರಿಂದ ಪಟಾಕಿ ಬೆಲೆ ಕೊಂಚ ಹೆಚ್ಚಳವಾಗಿದೆ. ನಾವು ಇದೇ ವ್ಯಾಪಾರವನ್ನು ನೆಚ್ಚಿಕೊಂಡಿರುವುದರಿಂದ ಬಂಡವಾಳ ಹೂಡಿದ್ದೇವೆ’ ಎಂದು ವ್ಯಾಪಾರಿಯೊಬ್ಬರು ಹೇಳಿದರು.

‘ಪರಿಸರ ಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ಘನತ್ಯಾಜ್ಯ ಮಾಲಿನ್ಯದ ಬಗ್ಗೆ ಸ್ಥಳೀಯ ಸಂಸ್ಥೆಗಳು ಮತ್ತು ಜಿಲ್ಲಾಡಳಿತ ಪ್ರತಿ ವರ್ಷ ಸಾಕಷ್ಟು ಜಾಗೃತಿ ಮೂಡಿಸುತ್ತಿವೆ. ಪರಿಸರ ಸ್ನೇಹಿ ದೀಪಾವಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಹೀಗಾಗಿ ಈ ಹಿಂದಿನಂತೆ ವ್ಯಾಪಾರವನ್ನು ನಿರೀಕ್ಷಿಸುವಂತಿಲ್ಲ. ಅಲ್ಲದೆ, ಈ ಬಾರಿ ಪಟಾಕಿ ಹಾರಿಸಲು ಸಮಯ ನಿಗದಿಪಡಿಸಿರುವುದರಿಂದ ವ್ಯಾಪಾರಕ್ಕೆ ಇನ್ನಷ್ಟು ಹಿನ್ನಡೆಯಾಗಬಹುದು’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !