ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲೇಗಾಂವ ಕೆರೆ ಭರ್ತಿ, ಮನೆಗಳಿಗೆ ನುಗ್ಗಿದ ನೀರು

ಧಾರಾಕಾರ ಮಳೆ; ಉದ್ದು, ತೊಗರಿ ಬೆಳೆಗೆ ಹಾನಿ
Last Updated 18 ಸೆಪ್ಟೆಂಬರ್ 2020, 2:57 IST
ಅಕ್ಷರ ಗಾತ್ರ

ಆಳಂದ: ತಾಲ್ಲೂಕಿನ ವಿವಿಧೆಡೆ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಹಳ್ಳಕೊಳ್ಳ ಭರ್ತಿಯಾಗಿ ಹರಿಯುತ್ತಿವೆ. ರಾಶಿಗೆ ಬಂದ ಉದ್ದು ಹಾಗೂ ಬೆಳೆದು ನಿಂತ ತೊಗರಿ, ಸೂರ್ಯಕಾಂತಿ, ಸೋಯಾಬಿನ್‌ ಬೆಳೆಯು ಮಳೆ ನೀರಿನಿಂದ ಹಾಳಾಗುವ ಆತಂಕ ರೈತರನ್ನು ಕಾಡುತ್ತಿದೆ.

ಖಜೂರಿ ವಲಯದಲ್ಲಿ ಮಳೆ ಅಧಿಕವಾದ ಪರಿಣಾಮ ಸಾಲೇಗಾಂವ ಕೆರೆ ಸಂಪೂರ್ಣ ಭರ್ತಿಯಾಗಿ ಹರಿದಿದೆ. ಇದರಿಂದ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಹೊಸ ಬಡಾವಣೆ ಹಾಗೂ ಹಳೆ ಗ್ರಾಮದ ನಡುವೆ ಹಳ್ಳ ತುಂಬಿ ಹರಿಯುತ್ತಿದೆ. ಗುರುವಾರ ದಿನವಿಡೀ ಗ್ರಾಮಸ್ಥರು ಆಳಂದ ಸೇರಿದಂತೆ ಯಾವುದೇ ಗ್ರಾಮಕ್ಕೆ ಸಂಚರಿಸಲು ಸಾಧ್ಯವಾಗಿಲ್ಲ. ಅಲ್ಲದೆ ಸುತ್ತಲಿನ ಹೊಲಗದ್ದೆಗಳಿಗೆ ತುಂಬಿದ ಕೆರೆ ನೀರು ನುಗ್ಗಿ ತೊಗರಿ, ಸೋಯಾಬಿನ್, ಉದ್ದು ಬೆಳೆಗಳು ನೀರಲ್ಲಿ ಮುಳಗಿವೆ ಎಂದು ಗ್ರಾಮದ ರೈತ ಚಂದುರಾವ ಬೇಡಗೆ ‘ಪ್ರಜಾವಾಣಿ’ಗೆ ತಿಳಿಸಿದರು.

ನರೋಣಾ: ಧಾರಾಕಾರ ಮಳೆಗೆ ನರೋಣಾ ಗ್ರಾಮದಲ್ಲಿ 40ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಮನೆಯಲ್ಲಿನ ನಿವಾಸಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೆರೆ ಅಂಬಲಗಾ, ತೆಲ್ಲೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ನೀರು ಹರಿದು ಬಂದು ಗ್ರಾಮದಲ್ಲಿ ನುಗ್ಗಿದೆ.

ಈ ಹೊಸ ಬಡವಾಣೆಗಳಲ್ಲಿ ಬಡ ಕುಟುಂಬಗಳು ಪತ್ರಾ ಸೆಡ್‌, ಗುಡಿಸಲು ಹಾಕಿಕೊಂಡು ವಾಸವಾಗಿದ್ದಾರೆ. ಮನೆಗಳ ಸಂಪರ್ಕಕ್ಕೆ ಸಮರ್ಪಕ ರಸ್ತೆ, ಚರಂಡಿ ನಿರ್ಮಿಸದ ಕಾರಣ ದಿನವೀಡಿ ಇಲ್ಲಿಯ ನೂರಕ್ಕೂ ಹೆಚ್ಚು ಜನರು ಮಳೆಯಲ್ಲಿ ದಿನ ಕಳೆಯುತ್ತಿದ್ದಾರೆ. ತಾಲ್ಲೂಕು ಆಡಳಿತವು ತಾತ್ಕಾಲಿಕವಾಗಿ ಸರ್ಕಾರಿ ಶಾಲೆಯಲ್ಲಿ ಆಶ್ರಯ ಒದುಗಿಸಲು ಕಾರ್ಮಿಕ ಮುಖಂಡ ಸುಧಾಮ ಧನ್ನಿ, ಪಾಂಡುರಂಗ ಮಾವಿನಕರೆ ಒತ್ತಾಯಿಸಿದ್ದಾರೆ.

ತಾಲ್ಲೂಕಿನ ಸರಸಂಬಾ ಗ್ರಾಮದ ಹೊಸ ಬಡವಾಣೆಯಲ್ಲಿಯೂ ನಾಗಲೇಗಾಂವ ಸಂಪರ್ಕ ಮಾರ್ಗದ ಮಳೆ ನೀರು ಹರಿದು ಸಂಪೂರ್ಣ ನೀರಿಗೆ ರಸ್ತೆ ತುಂಬಿ ನಿಂತಿದೆ. ಇದರಿಂದ ಇಲ್ಲಿಯ ನಿವಾಸಿಗಳು ಹೊರ ಬರಲು ಸಹ ಸಂಕಟ ಪಡುವ ಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನ ಕೆರೂರು, ನಿಂಬಾಳ, ಮದಗುಣಕಿ, ಶುಕ್ರವಾಡಿ, ತಡಕಲ, ಎಲೆ ನಾವದಗಿ, ಧುತ್ತರಗಾಂವ, ಧಂಗಾಪುರ, ಝಳಕಿ, ಹಳ್ಳಿ ಸಲಗರ, ದಣ್ಣೂರು ಗ್ರಾಮಗಳ ಕೆರೆಗಳು ಧಾರಾಕಾರ ಮಳೆಗೆ ಭರ್ತಿಯಾಗಿವೆ. ಸತತ ಮಳೆಯಿಂದ ವಿವಿಧ ಗ್ರಾಮದ ರಸ್ತೆಗಳು ಹಾಳಗಿದ್ದು, ವಾಹನಗಳು ಸಂಚಾರಕ್ಕೂ ಅಡ್ಡಿಯಾದ ಮಳೆಯಿಂದ ಆಳಂದ ವಾರದಸಂತೆ ಸಹ ಜನದಟ್ಟಣೆ ಇಲ್ಲದೆ ಬಿಕೋ ಎನ್ನುತ್ತಿತು.

ಇಂದಿನ ಮಳೆಯು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಸಂಭ್ರಮಕ್ಕೂ ಅಡ್ಡಿಯಾಗಿ ಎಲ್ಲಡೆ ಸರಳವಾಗಿ ಧ್ವಜಾರೋಹಣ ಕೈಗೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT