ಗುರುವಾರ , ಜನವರಿ 23, 2020
28 °C
ಆಳಂದದಲ್ಲಿ ದರ್ಗಾಕ್ಕೆ ದೀಪಾಲಂಕಾರದ ಸೊಬಗು; ಗಮನಸೆಳೆದ ಖವ್ವಾಲಿ

ಲಾಡ್ಲೆ ಮಶಾಕರ ಸಂದಲ್‌ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಳಂದ: ಪಟ್ಟಣದಲ್ಲಿ ಸಾಮರಸ್ಯದ ಕೇಂದ್ರವಾದ ಹಜರತ್ ಖ್ವಾಜಾಶೇಖ ಮಕದೂಮ್ ಅಲ್ಲಾವುದ್ದಿನ್ ಅನ್ಸಾರಿ (ಲಾಡ್ಲೆ ಮಶಾಕರ) 664ನೇ ಉರುಸ್‌ ಅಂಗವಾಗಿ ಸಂದಲ್‌ನ ಮೆರವಣಿಗೆಯು ಶನಿವಾರ ಅದ್ಧೂರಿಯಾಗಿ ಜರುಗಿತು.

ತಹಶೀಲ್ದಾರ್‌ ಕಚೇರಿಯಲ್ಲಿ ಸಂಜೆ ಪ್ರಸಿದ್ಧ ಕಲಾವಿದರಿಂದ ಏರ್ಪಡಿಸಿದ ಖವ್ವಾಲಿಯು ಉರುಸ್‌ ಉತ್ಸವಕ್ಕೆ ಕಳೆ ಕಟ್ಟಿತು. ನಂತರ ಕಚೇರಿಯಲ್ಲಿ ಸಂಪ್ರಾದಾಯಿಕ ಪ್ರಾರ್ಥನೆ, ಕುರಾನ್‌ ಪಠಣ ಮತ್ತಿತರ ಧಾರ್ಮಿಕ ಪೂಜೆ ಸಲ್ಲಿಸಲಾಯಿತು.

ತಹಶೀಲ್ದಾರ್ ದಯಾನಂದ ಪಾಟೀಲ, ದರ್ಗಾ ಸಮಿತಿ ಅಧ್ಯಕ್ಷ ಹಮೀದ್‌ ಅನ್ಸಾರಿ, ಸಾದತ್ ಅನ್ಸಾರಿ, ಮೋಹಿಜ್ ಕಾರಬಾರಿ ಅವರು ತಲೆ ಮೇಲೆ ಸಂದಲ್‌ (ಗಂಧೋತ್ಸವ) ಹೊತ್ತು ಮೆರವಣಿಗೆಗೆ ಚಾಲನೆ ನೀಡಿದರು.

ಉಮರ್ಗಾ, ಸೋಲಾಪುರದಿಂದ ಕರೆತಂದ ಡಿಜೆ ಮತ್ತಿತರ ಭಾಜಾ ಭಜಂತ್ರಿಗಳೊಂದಿಗೆ ಉತ್ಸವದ ಸಡಗರ ಎದ್ದು ಕಂಡಿತು.

ನೂರಾರು ಭಕ್ತರು ಸಂದಲ್‌ ಮೆರವಣಿಗೆ ಮುಂದೆ ಊದು ಅರ್ಪಿಸಿದರೆ, ಇನ್ನು ಹಲವರು ತಲೆ ಮೇಲೆ ಸಂದಲ್‌ ಹೊತ್ತುಕೊಂಡು ಭಕ್ತಿ, ಶ್ರದ್ಧೆ ಮೆರೆದರು.

ಪಟ್ಟಣದ ಪ್ರಮುಖ ಬೀದಿ ಮೂಲಕ ಮೆರವಣಿಗೆ ಸಾಗಿತು. ತಾಲ್ಲೂಕಿನ ವಿವಿಧ ಗ್ರಾಮಗಳ ಜನ ಹಾಗೂ ದೂರದ ಯಾತ್ರಾರ್ಥಿಗಳು ಸಹ ಅಧಿಕ ಸಂಖ್ಯೆಯಲ್ಲಿ ಉರುಸ್‌ನಲ್ಲಿ ಪಾಲ್ಗೊಂಡಿದ್ದರು.

ಸಂದಲ್‌ ಮೆರವಣಿಗೆಯಲ್ಲಿ ಶಾಸಕ ಸುಭಾಷ ಗುತ್ತೇದಾರ, ಮಾಜಿ ಶಾಸಕ ಬಿ.ಆರ್‌ ಪಾಟೀಲ, ಅಹ್ಮದಲಿ ಚುಲಬುಲ್, ರಮ್ಮು ಅನ್ಸಾರಿ, ಮುಖಂಡ ಮೌಲಾ ಮುಲ್ಲಾ, ಅಫ್ಜಲ್ ಅನ್ಸಾರಿ, ಮೋಹಿಜ್ ಕಾರಬಾರಿ, ಫಿರ್ದೋಶಿ ಅನ್ಸಾರಿ, ಶಂಕರರಾವ ದೇಶಮುಖ, ಫಿರಾಸತ್ ಅನ್ಸಾರಿ, ಖಲೀಲ ಅನ್ಸಾರಿ, ದಯಾನಂದ ಶೇರಿಕಾರ, ಮಲ್ಲಿಕಾರ್ಜುನ ಕಂದಗೊಳೆ, ಯೂಸುಫ್ ಅನ್ಸಾರಿ, ವಿಜಯಕುಮಾರ ಕೋಥಳಿಕರ, ಶ್ರೀಮಂತ ನ್ಯಾಮಣೆ, ಗುಲಾಬಹುಸೇನ್‌ ಟಪ್ಪೆವಾಲೆ ಭಾಗಿಯಾಗಿದ್ದರು.

ರಾತ್ರಿಯಿಡೀ ನಡೆದ ಗಂಧೋತ್ಸವವು ನಸುಕಿನ ಜಾವ ಲಾಡ್ಲೆ ಮಶಾಕರ ದರ್ಗಾ ತಲುಪಿತು.

ಉರುಸ್‌ ನಿಮಿತ್ತ ದರ್ಗಾ ಹಾಗೂ ದರ್ಗಾದ ಮುಂದಿನ ಮೀನಾರ್‌ (ಗೋಪುರ) ಹಾಗೂ ರಸ್ತೆ ಮಾರ್ಗವು ವಿದ್ಯುತ್‌ ದೀಪಾಲಂಕಾರದಿಂದ ವಿಶೇಷವಾಗಿ ಆಕರ್ಷಿಸುತ್ತಿದೆ.

ಪ್ರತಿಕ್ರಿಯಿಸಿ (+)