ಆಳಂದ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡಿದ ರಾಜ್ಯಪಾಲ ತಾವರ್ ಚಂದ್ ಗೆಹಲೋತ್ ಅವರ ನಡೆ ಸಂವಿಧಾನ ವಿರೋಧಿಯಾಗಿದೆ’ ಎಂದು ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ, ಶಾಸಕ ಬಿ.ಆರ್.ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಗುರುಭವನದಲ್ಲಿ ಭಾನುವಾರ ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲ್ಲೂಕು ಘಟಕದಿಂದ ಹಮ್ಮಿಕೊಂಡ ಸಂಗೊಳ್ಳಿ ರಾಯಣ್ಣನವರ 228ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಕಪ್ಪುಚುಕ್ಕೆ ಹಚ್ಚುವ ದುರುದ್ದೇಶದಿಂದ ಮುಡಾ ಹಗರಣವನ್ನು ಬಿಜೆಪಿ, ಜೆಡಿಎಸ್ ರಾಜಕೀಯವಾಗಿ ಬಳಸಿಕೊಳ್ಳುತ್ತಿವೆ. ಇದರ ಹಿಂದೆ ಕೇಂದ್ರ ಸರ್ಕಾರದ ಸಂಚು ಅಡಗಿದೆ. ಸಿದ್ದರಾಮಯ್ಯ ಒಂದು ಸಮುದಾಯದ ನಾಯಕರಲ್ಲ, ನಾಡಿನ ಮುಖ್ಯಮಂತ್ರಿಯಾಗಿದ್ದು, ಕಾನೂನು ಹೋರಾಟ ಹಾಗೂ ಜನಾಂದೋಲನ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಚಿಂತಕ ನಿಕೇತರಾಜ್ ಮೌರ್ಯ ಮಾತನಾಡಿ, ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ತ್ಯಾಗ, ಶೌರ್ಯ ಹಾಗೂ ದೇಶಪ್ರೇಮವು ಸ್ಮರಣೀಯವಾಗಿದೆ. ಮಲ್ಲಪ್ಪಶೆಟ್ಟಿ ಮತ್ತು ವೆಂಕಣಗೌಡರ ಕುತಂತ್ರದಿಂದ ರಾಯಣ್ಣನು ಬ್ರಿಟಿಷರಿಗೆ ಸೆರೆಯಾಳು ಆದನು. ಇಂದು ಬಡವರು, ಶೋಷಿತರ ಧ್ವನಿಯಾಗಿರುವ ಸಿದ್ದರಾಮಯ್ಯನವರ ಶಕ್ತಿ ಕುಂದಿಸಲು ಮತ್ತೆ ಕೋಮುವಾದಿಗಳು ಸಂಚು ರೂಪಿಸುತ್ತಿದ್ದಾರೆ’ ಎಂದು ಆಪಾದಿಸಿದರು.
‘ಬಿಜೆಪಿ, ಜೆಡಿಎಸ್ ನಾಯಕರು ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ. ರಾಜ್ಯದ ಮೂಲೆ ಮೂಲೆಯಲ್ಲಿ ಸಿದ್ಧರಾಮಯ್ಯ ಪರವಾಗಿ ಹೋರಾಟ ನಡೆಯಲಿವೆ. ಕೇಂದ್ರದ ಕೈಗೊಂಬೆಯಾಗಿರುವ ರಾಜ್ಯಪಾಲ ಗೆಹಲೋತ್ ಗೋ ಬ್ಯಾಕ್ ಎಂದು ಜನರು ಬೀದಿಗೆ ಇಳಿದು ಕೂಗುತ್ತಿದ್ದಾರೆ. ವಿರೋಧಿಗಳು ಸಿದ್ದರಾಮಯ್ಯನವರ ನಾಯಕತ್ವಕ್ಕೆ ಬೆದರಿ ಅಪಪ್ರಚಾರದ ಹಾದಿ ತುಳಿಯುತ್ತಿದ್ದಾರೆ’ ಎಂದರು.
ಕೆಎಂಎಫ್ ನಿರ್ದೇಶಕ ಈರಣ್ಣಾ ಝಳಕಿ ಮಾತನಾಡಿ, ಹಾಲುಮತ ಸಮಾಜಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ 2 ಎಕರೆ ಜಮೀನು ನೀಡಲು ಶಾಸಕರಿಗೆ ಮನವಿ ಸಲ್ಲಿಸಿದರು.
ಮಾಡಿಯಾಳದ ಪ್ರಭುರಾಯ ಪೂಜಾರಿ, ಮಟಕಿಯ ಅಮೋಘಸಿದ್ದ ಮುತ್ತ್ಯಾ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಮಲ್ಲಿಕಾರ್ಜುನ ಬಿರಾದಾರ, ವಿಜಯಲಕ್ಷ್ಮಿ ಮುಗುಳಿ, ಗುರುನಾಥ ಪೂಜಾರಿ, ಜಗದೇವಪ್ಪ ಮುಗುಟಾ, ತುಕಾರಾಮ ವಗ್ಗೆ, ಶಿವಪುತ್ರಪ್ಪ ಕೋಟ್ರಕಿ, ಶಾರದಾ ಪೂಜಾರಿ, ಸಿದ್ದರಾಮ ಪ್ಯಾಟಿ, ಚಂದ್ರಕಾಂತ ಹತ್ತರಕಿ, ತಾಲ್ಲೂಕಾಧ್ಯಕ್ಷ ಸಿದ್ದರಾಮ ಪೂಜಾರಿ, ಯಲ್ಲಾಲಿಂಗ ಶಿರೂರು, ಪಾರ್ವತಿ ಜಿಡ್ಡಿಮನಿ, ವೈದ್ಯ ಆರ್.ಡಿ.ಸೇಂಡಗೆ, ಶಿವರಾಯ ಪೂಜಾರಿ, ಸಂಜಯ ನಾಯಕ ಭಾಗವಹಿಸಿದ್ದರು. ಬೀರಣ್ಣಾ ಕೌಲಗಿ ನಿರೂಪಿಸಿದರೆ, ಮಲ್ಲಿನಾಥ ಪಟ್ಟಣ ಸ್ವಾಗತಿಸಿದರು. ದೊಡ್ಡಪ್ಪ ಗೌಡೆ ವಂದಿಸಿದರು. ಈ ಮೊದಲು ಬಸ್ ನಿಲ್ದಾಣದಿಂದ ಗುರುಭವನದವರೆಗೂ ಸಂಗೊಳ್ಳಿ ರಾಯಣ್ಣನವರ ಭವ್ಯ ಪುತ್ಥಳಿ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಡೊಳ್ಳುಕುಣಿತ, ಯುವಕರ ಜೈಘೋಷಗಳು ಜಯಂತಿ ಸಂಭ್ರಮ ಹೆಚ್ಚಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.