ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೃಪ್ತಿ ಇದ್ದರೆ ದುರಾಸೆ ಬರಲ್ಲ: ಸಂತೋಷ ಹೆಗ್ಡೆ

Last Updated 2 ಜನವರಿ 2019, 16:09 IST
ಅಕ್ಷರ ಗಾತ್ರ

ಕಲಬುರ್ಗಿ: ‘ತೃಪ್ತಿ ಇದ್ದಾಗ ದುರಾಸೆ ಬರುವುದಿಲ್ಲ. ಆದ್ದರಿಂದ ಮಕ್ಕಳಲ್ಲಿ ತೃಪ್ತಿಯ ಭಾವವನ್ನು ಬೆಳೆಸಬೇಕು’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದರು.

ನಗರದ ನೂನತ ವಿದ್ಯಾಲಯ ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನೂತನ ವಿದ್ಯಾಲಯ ಪದವಿ ಕಾಲೇಜಿನ ನೂತನ ಫೆಸ್ಟ್–2019ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮೌಲ್ಯಗಳ ಕುಸಿತದಿಂದ ಸಮಾಜ ಅಧಃಪತನಕ್ಕೆ ಇಳಿದಿದೆ. ಆದ್ದರಿಂದ ಯುವ ಜನರಲ್ಲಿ ಮೌಲ್ಯಗಳನ್ನು ಬೆಳೆಸಬೇಕು. ಕ್ರಾಂತಿ ಮೂಲಕ ಬದಲಾವಣೆ ಬಂದರೆ ಮಧ್ಯಮ ವರ್ಗ ಸಂಕಷ್ಟಕ್ಕೆ ಸಿಲುಕುತ್ತದೆ. ದೊಡ್ಡವರು ದೇಶ ಬಿಟ್ಟು ಓಡಿ ಹೋಗುತ್ತಾರೆ. ಕೆಳವರ್ಗದವರಿಗೆ ಪೆಟ್ಟು ತಿಂದು ಅಭ್ಯಾಸವಾಗಿರುತ್ತದೆ. ಆದರೆ, ಮಧ್ಯಮ ವರ್ಗದವರಿಗೆ ಕಷ್ಟವಾಗುತ್ತದೆ. ಆದ್ದರಿಂದ ಶಾಂತಿ ಮೂಲಕ ಬದಲಾವಣೆ ತರಲು ಮುಂದಾಗಬೇಕು. ಈ ಕೆಲಸ ಯುವಕರಿಂದ ಮಾತ್ರ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿಲ್ಲ. ಅದು ಸೃಷ್ಟಿಕರ್ತನೇ ಸೃಷ್ಟಿಸಿರುವ ಪಿಡುಗು. ಈ ಮೊದಲು ಜನರಿಂದ, ಜನರಿಗಾಗಿ, ಜನರಿಗೋಸ್ಕರ ಸರ್ಕಾರ ಎಂದಿತ್ತು. ಈಗ ಕೆಲವರಿಂದ, ಕೆಲವರಿಗಾಗಿ, ಕೆಲವರಿಗೋಸ್ಕರ ಸರ್ಕಾರ ಎಂಬಂತಾಗಿದೆ. ಭ್ರಷ್ಟಾಚಾರದಲ್ಲಿ ಶೂನ್ಯಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ವ್ಯವಸ್ಥೆಯನ್ನು ಸರಿ ದಾರಿಗೆ ತರುವುದು ಯುವಕ, ಯುವತಿಯರ ಕೈಯಲ್ಲಿದೆ. ಆದ್ದರಿಂದ ಅವರಲ್ಲಿ ಮಾನವೀಯ ಮೌಲ್ಯ, ತೃಪ್ತಿ ಬೆಳೆಸಬೇಕು’ ಎಂದು ಹೇಳಿದರು.

ಮೀಸಲಾತಿ ಕುರಿತು ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಡಾ. ಬಿ.ಆರ್.ಅಂಬೇಡ್ಕರ್ ಅವರು 10 ವರ್ಷ ಮಾತ್ರ ಮೀಸಲಾತಿ ಕೊಡಿ ಎಂದಿದ್ದರು. ಆದರೆ, ಯಾವ ರಾಜಕೀಯ ಪಕ್ಷಗಳಿಗೂ ಅದನ್ನು ನಿಲ್ಲಿಸುವ ಮನಸ್ಸಿಲ್ಲ. ಮತ ಬ್ಯಾಂಕ್‌ಗಾಗಿ ಮೀಸಲಾತಿ ಮುಂದುವರಿಸಿಕೊಂಡು ಬಂದಿದ್ದಾರೆ. ಮೀಸಲಾತಿಯನ್ನು ಒಂದೇ ಸಾರಿಗೆ ನಿಲ್ಲಿಸುವ ಬದಲು, ಮೀಸಲಾತಿ ಪಡೆದವರ ಪಟ್ಟಿ ಸಿದ್ಧಪಡಿಸಬೇಕು. ತಂದೆ ಉನ್ನತ ಸ್ಥಾನದಲ್ಲಿದ್ದರೆ ಮಗನಿಗೆ ಮೀಸಲಾತಿ ಕೊಡಬಾರದು. ಅದರ ಬದಲು ಇನ್ನೊಬ್ಬ ಬಡವನಿಗೆ ಮೀಸಲಾತಿ ಕೊಡಬೇಕು’ ಎಂದು ತಿಳಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಖಜಾಂಚಿ ಕೆ.ಬಿ.ಶ್ರೀನಿವಾಸ ರೆಡ್ಡಿ ಮಾತನಾಡಿ, ‘371 (ಜೆ) ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಐಟಿ ಬಿಟಿ, ಆಟೊಮೊಬೈಲ್ ಉದ್ಯಮಗಳನ್ನು ಇಲ್ಲಿಗೆ ಕರೆತರಬೇಕು. ಸ್ಥಳೀಯವಾಗಿ ಉದ್ಯೋಗ ಲಭ್ಯವಾಗುವಂತೆ ನೋಡಿಕೊಳ್ಳಬೇಕು’ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಲ್ಲಮಪ್ರಭು ಪಾಟೀಲ, ಸಂಸ್ಥೆಯ ಉಪಾಧ್ಯಕ್ಷ ಪಿ.ವಿ.ದೇಶಪಾಂಡೆ, ಕಾರ್ಯದರ್ಶಿ ಡಾ. ಗೌತಮ ಆರ್.ಜಹಗೀರದಾರ, ಜಂಟಿ ಕಾರ್ಯದರ್ಶಿ ಸುಧಾ ಕರಲಗಿಕರ್, ಖಜಾಂಚಿ ಶ್ರೀಕಾಂತ ಕುಲಕರ್ಣಿ, ಟ್ರಸ್ಟ್ ಕಾರ್ಯದರ್ಶಿ ಶಾಮರಾವ ಖಣಗೆ, ಪ್ರಾಂಶುಪಾಲ ಡಾ. ಹೇಮಂತಕುಮಾರ ಕೊಲ್ಲಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT