ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಕಡತಕ್ಕೂ ಜೀವವಿದೆ, ಉದಾಸೀನ ಬೇಡ: ಉಮೇಶ ಜಾಧವ್

20 ಜನ ಅಧಿಕಾರಿಗಳು, ಸಿಬ್ಬಂದಿಗೆ ಸರ್ವೋತ್ತಮ ಪ್ರಶಸ್ತಿ ಪ್ರದಾನ
Last Updated 27 ಏಪ್ರಿಲ್ 2022, 4:22 IST
ಅಕ್ಷರ ಗಾತ್ರ

ಕಲಬುರಗಿ: ’ಅಧಿಕಾರಿಗಳು, ನೌಕರರ ಬಳಿ ಬರುವ ಪ್ರತಿ ಕಡತದ ಹಿಂದೆಯೂ ಒಂದು ಕುಟುಂಬದ ಭವಿಷ್ಯವಿರುತ್ತದೆ. ಹಾಗಾಗಿ, ಉದಾಸೀನ ಮಾಡದೇ ಆದ್ಯತೆಯ ಮೇರೆಗೆ ಅವುಗಳನ್ನು ವಿಲೇವಾರಿ ಮಾಡಿ’ ಎಂದು ಸಂಸದ ಡಾ. ಉಮೇಶ ಜಾಧವ್ ಸರ್ಕಾರಿ ನೌಕರರಿಗೆ ಸಲಹೆ ನೀಡಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕವು ನಗರದ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಶೇ 90ರಷ್ಟು ಕೆಲಸ ಸಲೀಸಾಗಿ ಆಗುತ್ತದೆ ಎಂದು ಕಿವಿಮಾತು ಹೇಳಿದ್ದರು. ಜಿಲ್ಲೆಯ ಉತ್ತಮ ಅಧಿಕಾರಿ ವರ್ಗವಿದೆ. ಆಡಳಿತದ ಮಾಹಿತಿಯೂ ಇದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಪ್ರತಿ ಕಡತವನ್ನೂ ಅತ್ಯಂತ ಕಾಳಜಿಯಿಂದ ನಿರ್ವಹಣೆ ಮಾಡಿ ಜನರ ಕೆಲಸಗಳನ್ನು ಮಾಡಿಕೊಡಬೇಕು’ ಎಂದರು.

‘ಸಿಬ್ಬಂದಿಯನ್ನು ಜೊತೆಯಲ್ಲಿ ಕರೆದೊಯ್ಯಬೇಕು. ಯಾರಾದರೂ ಮಾನಸಿಕ ಕಿರುಕುಳ ನೀಡುತ್ತಿದ್ದರೆ ನನ್ನ ಬಳಿ ಯಾವಾಗ ಬೇಕಾದರೂ ಬನ್ನಿ. ನಾನು ಅಂಥವರ ವಿರುದ್ಧ ಮುಲಾಜಿಲ್ಲದೇ ಕ್ರಮ ಜರುಗಿಸುತ್ತೇನೆ’ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ‘ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡಿದಾಗಲೇ ಎಲ್ಲ ಕೆಲಸಗಳು ಆಗುತ್ತವೆ. ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ಎಷ್ಟು ಅನುದಾನದ ಅಗತ್ಯವಿದ್ದರೂ ಅದನ್ನು ಕೊಡುವ ವ್ಯವಸ್ಥೆ ಮಾಡುತ್ತೇವೆ. ನಗರದಲ್ಲಿ ಒಂದು ಸುಸಜ್ಜಿತ ನೌಕರರ ಭವನ ನಿರ್ಮಾಣವಾಗಲಿ’ ಎಂದರು.

ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್‌,ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಪೊಲೀಸ್ ಕಮಿಷನರ್ ಡಾ. ವೈ.ಎಸ್. ರವಿಕುಮಾರ್ ಮಾತನಾಡಿದರು.

ಸರ್ವೋತ್ತಮ ಪ್ರಶಸ್ತಿ: ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ. ಅಲ್ಲಾಬಕಷ್, ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿ ರಮೇಶ ಸಂಗಾ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನವೀನ್ ಕುಮಾರ್ ಯು, ಜಿಲ್ಲಾ ಖಜಾನೆ ಇಲಾಖೆ ಉಪನಿರ್ದೇಶಕ ಅಶೋಕ ವಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಿರ್ದೇಶಕ ಚಂದ್ರಕಾಂತ ಜೀವಣಗಿ, ತಹಶೀಲ್ದಾರ್‌ಗಳಾದ ಬಸವರಾಜ ಬೆಣ್ಣೆಶಿರೂರ, ಮಹಾಂತೇಶ ಮುಡಬಿ, ನಾಗನಾಥ, ನಾಗಮ್ಮ ಕಟ್ಟಿಮನಿ, ಅಂಜುಮ್ ತಬಸ್ಸುಮ್, ಗ್ರೂಪ್ ‘ಸಿ’ ಸಿಬ್ಬಂದಿಯಾದ ರಾಘವೇಂದ್ರ ವಿಭೂತಿ, ಖಾಜಾ ಬಂದೇನವಾಜ್, ಸೂರ್ಯಕಾಂತ ಎಸ್‌. ಹಿಪ್ಪರಗಿ, ಅಂಬುಜಾ ಮಲ್ಲಿಕಾರ್ಜುನ, ರವಿ ಮಿರಸ್ಕರ್, ಅನುಪಮಾ, ಲಕ್ಷ್ಮಿ ಕೋರೆ, ಪುಷ್ಪಾ, ಗ್ರೂಪ್ ‘ಡಿ’ ಸಿಬ್ಬಂದಿಯಾದ ನಾಗಭೂಷಣ, ಜಗನ್ನಾಥ ಅವರಿಗೆ ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ನಾಗೇಂದ್ರಪ್ಪ ಔರಾದಿ, ಸಂಘದ ಜಿಲ್ಲಾ ಗೌರವಾಧ್ಯಕ್ಷ ಅಬ್ದುಲ್ ಅಜೀಂ, ರಾಜ್ಯ ಪರಿಷತ್ ಸದಸ್ಯ ಹಣಮಂತರಾಯ ಗೋಳಸಾರ, ಖಜಾಂಚಿ ಸತೀಶ ಕೆ. ಸಜ್ಜನ, ಕಾರ್ಯಾಧ್ಯಕ್ಷ ಚಂದ್ರಕಾಂತ ಏರಿ, ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗಯ್ಯ ಮಠಪತಿ, ಹಿರಿಯ ಉಪಾಧ್ಯಕ್ಷರಾದ ಬಾಬು ಎ. ಮೌರ್ಯ, ಉಮಾದೇವಿ ಜಿತೇಂದ್ರ ಹಾಗೂ ತಾಲ್ಲೂಕು ಘಟಕಗಳ ಅಧ್ಯಕ್ಷರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT