ಕಲಬುರಗಿ: ಅಲ್ಲಿ ಶ್ರಮದ ಬೆವರಿಗೆ ಚಪ್ಪಾಳೆಯ ಪ್ರೋತಾಹ ದೊರೆಯಿತು. ಪರಿಶ್ರಮಪಟ್ಟು ಮಾಡಿದ ಸಾಧನೆಗೆ ನಗದು ಪುರಸ್ಕಾರವೂ ಸಂದಿತು. ತಲೆಬಾಗಿಸಿ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳು, ಹೆಮ್ಮೆಯಿಂದ ಪ್ರೋತ್ಸಾಹದ ಪುಳಕದಲ್ಲಿ ಮಿಂದೆದ್ದರು...
ಇಂಥ ಅಪೂರ್ವ ಕ್ಷಣಗಳು ನಗರದ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಭಾನುವಾರ ನಡೆದ ‘ಎಸ್‌ಬಿಆರ್ ಮಿನಿ ಘಟಿಕೋತ್ಸವ’ದಲ್ಲಿ ಕಂಡು ಬಂದವು. 2024ನೇ ಶೈಕ್ಷಣಿಕ ಸಾಲಿನ ನೀಟ್, ಜೆಇಇ ಹಾಗೂ ದ್ವಿತೀಯ ಪಿಯುಸಿ ಲಿಖಿತ ಪರೀಕ್ಷೆಯಲ್ಲಿ ಉತ್ಕೃಷ್ಟ ರ‍್ಯಾಂಕ್ ಪಡೆದ ಪ್ರತಿಭಾನ್ವಿತರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಒಟ್ಟು 36 ಸಾಧಕ ವಿದ್ಯಾರ್ಥಿಗಳಿಗೆ ಸುಮಾರು ₹ 7 ಲಕ್ಷ ಬಹುಮಾನ ವಿತರಿಸಲಾಯಿತು.
ನೀಟ್ ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕ್ಕೆ ಪ್ರಥಮ ರ‍್ಯಾಂಕ್ ಪಡೆದ ವಿನಯಕುಮಾರ ಕಸಬೇಗೌಡರಗೆ ₹ 1.11 ಲಕ್ಷ ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಕಲ್ಯಾಣ ಕರ್ನಾಟಕ್ಕೆ ದ್ವಿತೀಯ ರ‍್ಯಾಂಕ್ ಪಡೆದ ಪಂಚಾಕ್ಷರಿ ರಾಜಶೇಖರಗೆ ₹ 1 ಲಕ್ಷ ಮತ್ತು ನೆನಪಿನ ಕಾಣಿಕೆ ಕೊಟ್ಟು ಗೌರವಿಸಲಾಯಿತು. ಮೂರನೇ ಸ್ಥಾನ ಪಡೆದ ಸಚ್ಚಿದಾನಂದ ಡಿ. ಅವರಿಗೆ ₹ 25 ಸಾವಿರ ಬಹುಮಾನ ನೀಡಲಾಗಿತು.
ನೀಟ್‌ನಲ್ಲಿ 650ಕ್ಕೂ ಹೆಚ್ಚು ಅಂಕ ಸಾಧನೆ ಮಾಡಿದ 27 ವಿದ್ಯಾರ್ಥಿಗಳಿಗೆ ತಲಾ ₹10 ಸಾವಿರ ಬಹುಮಾನ ನೀಡಿ ಗೌರವಿಸಲಾಯಿತು. ಜೊತೆಗೆ ನೀಟ್‌ನಲ್ಲಿ 600ಕ್ಕೂ ಹೆಚ್ಚು ಅಂಕ ಗಳಿಸಿದ 121 ವಿದ್ಯಾ ರ್ಥಿಗಳಿಗೆ ನೆನಪಿನ ಕಾಣಿಕೆ ಹಾಗೂ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಜೆಇಇ ಅಡ್ವಾನ್ಸಡ್ ಪರೀಕ್ಷೆ ಉತ್ತಮ ರ‍್ಯಾಂಕ್‌ನೊಂದಿಗೆ ವಿವಿಧ ಐಐಟಿಗೆ ಆಯ್ಕೆಯಾಗಿರುವ ಶರಣರಾಜ ಸಿದ್ದಣ್ಣ, ರೋಹನ್ ರಾಜಶೇಖರ, ಹರ್ಷ ಹೊಳಕುಂದ ಅವರಿಗೆ ತಲಾ ₹ 25 ಸಾವಿರ ಬಹುಮಾನ, ನೆನಪಿನ ಕಾಣಿಕೆ ಹಾಗೂ ಶಾಲು ಹೊದಿಸಿ ಸನ್ಮಾನಿಸಬೇಕಿತ್ತು. ಆದರೆ, ಅವರು ವಿವಿಧ ಐಐಟಿಗಳಿಗೆ ಹೋಗಿದ್ದರಿಂದ ಮೂವರು ಸಾಧಕರ ಪರವಾಗಿ ಅವರ ಪೋಷಕರನ್ನು ಗೌರವಿಸಲಾಯಿತು.
ಪ್ರೊ.ಎಸ್.ಬಿ.ಪತಂಗಿ ಸ್ಮಾರಕ ಪ್ರಶಸ್ತಿಯ ₹ 50 ಸಾವಿರ ಹಾಗೂ ಪ್ರೊ.ಎಲ್.ಎಸ್.ಬಿರಾದಾರ ಪ್ರಶಸ್ತಿಯ ₹ 5 ಸಾವಿರ ಬಹುಮಾನವನ್ನೂ ಶರಣರಾಜ ಅವರಿಗೆ ಹೆಚ್ಚುವರಿಯಾಗಿ ಪ್ರದಾನ ಮಾಡಲಾಯಿತು.
ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಸಮರ್ಥ ಭಾಕರೆಗೆ ₹ 25 ಸಾವಿರ, ಬನಶಂಕರಿ ಎನ್.ಗೆ ₹ 20 ಸಾವಿರ ಹಾಗೂ ಸ್ನೇಹಾ ಬಿ.ಕೆ. ಅವರಿಗೆ ₹ 10 ಸಾವಿರ ಬಹುಮಾನ ಹಾಗೂ ಸನ್ಮಾನ ಪಡೆದರು.
ಮುಗಳನಾಗಾಂವಿಯ ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ, ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅಧ್ಯಕ್ಷತೆ ವಹಿಸಿದ್ದರು. ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಅನಿಲಕುಮಾರ ಬಿಡವೆ ಮಾತನಾಡಿದರು. ಶ್ರೀಶೈಲ್ ಹೊಗಾಡೆ ಸ್ವಾಗತಿಸಿದರು. ಚಂದ್ರಕಾಂತ ಪಾಟೀಲ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.