ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಾಂಧತೆಯಿಂದ ದೂರವಿರಿ: ಡಾ. ಬೆಲ್ದಾಳ ಶರಣರು

ಕೆಪಿಟಿಸಿಎಲ್‌ ಎಸ್ಸಿ, ಎಸ್ಟಿ ನೌಕರರ ಕಲ್ಯಾಣ ಸಂಸ್ಥೆಯಿಂದ ಬುದ್ಧ, ಬಸವ, ಅಂಬೇಡ್ಕರ್ ಜಯಂತ್ಯುತ್ಸವ
Last Updated 18 ಮೇ 2022, 4:08 IST
ಅಕ್ಷರ ಗಾತ್ರ

ಕಲಬುರಗಿ: ‘ಇಂದು ಜನರ ಮನಸ್ಸುಗಳು ಸಂಕುಚಿತಗೊಳ್ಳುತ್ತಿದ್ದು, ಜಾತಿ ಹಾಗೂ ಧರ್ಮಾಂಧತೆಗೆ ಬಲಿಯಾಗುತ್ತಿದ್ದಾರೆ. ಇವುಗಳಿಂದ ದೂರವಿರುವುದೇ ಉತ್ತಮ’ ಎಂದು ಬಸವ ಕಲ್ಯಾಣದ ಬಸವ ಮಹಾಮನೆಯ ಡಾ. ಬೆಲ್ದಾಳ ಶರಣರು ಅಭಿಪ್ರಾಯಪಟ್ಟರು.

ಕೆಪಿಟಿಸಿಎಲ್ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆಯ ವತಿಯಿಂದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಬುದ್ಧ, ಬಸವ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಬುದ್ಧ, ಬಸವ, ಬಾಬಾಸಾಹೇಬರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಸಂಕುಚಿತ ಮನಸ್ಥಿತಿ ಕಂಡು ಬರುತ್ತಿರುವುದು ವಿಷಾದನೀಯ. ಇವರೆಲ್ಲ ವಿಶ್ವ ಮಾನವರು. ಜಾಗತಿಕ ಮೌಲ್ಯಗಳನ್ನು ಬಿತ್ತಿದವರು. ಹಾಗಾಗಿ, ಇವರ ವಿಚಾರಗಳನ್ನು ಅಧ್ಯಯನ ಮಾಡುವ ತುರ್ತು ಇಂದು ಇದೆ’ ಎಂದರು.

ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ ಮಾತನಾಡಿ, ‘ಬುದ್ಧ ಕೊನೆಯುಸಿರೆಳೆಯುವ ಹೊತ್ತಿನಲ್ಲಿ ಆತನ ಅನುಯಾಯಿಗಳು ಬಹಳ ಚಿಂತಿತರಾಗಿದ್ದರು. ಆ ಸಂದರ್ಭದಲ್ಲಿ ನಮ್ಮೊಳಗಿನ ಬೆಳಕು ನಮಗೆ ಸದಾ ಮಾರ್ಗದರ್ಶನ ನೀಡುತ್ತದೆ ಎಂದಿದ್ದರು. ಶೀಲವು ಆಭರಣದಂತೆ ಭೂಷಣಪ್ರಾಯವಾಗಿರುತ್ತದೆ ಎಂದಿದ್ದರು. ಹೀಗಾಗಿ, ಸಚ್ಚಾರಿತ್ರ್ಯದ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.

ವಿಶೇಷ ಉಪನ್ಯಾಸ ನೀಡಿದ ಚಿಂತಕಿ ಡಾ. ಶಾಂತಾ ಅಷ್ಠಗಿ, ‘ಜಗಜ್ಯೋತಿ ಬಸವಣ್ಣನವರು 770 ಅಮರ ಗಣಂಗಳು, 330 ವಚನಕಾರರು ಹಾಗೂ 33 ವಚನಕಾರ್ತಿಯರನ್ನು ಸಜ್ಜುಗೊಳಿಸುವ ಮೂಲಕ ಅನುಭವ ಮಂಟಪವನ್ನು ಕಟ್ಟಿದವರು. ಯಾವ ಭೇದ ಭಾವವನ್ನೂ ಎಣಿಸದೇ ಎಲ್ಲರನ್ನೂ ಹತ್ತಿರಕ್ಕೆ ಕರೆತಂದವರು. ಬಸವಣ್ಣನವರ ವಚನಗಳ ಸಾರ ಸಂವಿಧಾನದಲ್ಲಿದೆ’ ಎಂದು ಹೇಳಿದರು.

‘ಡಾ.ಬಿ.ಆರ್. ಅಂಬೇಡ್ಕರ್ ಅವರು ಮಹಿಳೆಯರಿಗೆ ಸಿಗಬೇಕಾದ ಆಸ್ತಿಯನ್ನು ಕೊಡಿಸಲು ಹಿಂದೂ ಕೋಡ್ ಬಿಲ್ ಪ್ರಸ್ತಾಪಿಸಿದ್ದರು. ಉದ್ಯೋಗಸ್ಥ ಮಹಿಳೆಯರಿಗೆ ಹೆರಿಗೆ ರಜೆಯನ್ನೂ ಕಲ್ಪಿಸುವ ಐತಿಹಾಸಿಕ ಕೊಡುಗೆಯನ್ನು ನೀಡಿದರು. ಅಂದಿನ ಸ್ಫೂರ್ತಿಯಿಂದಾಗಿಯೇ ಇಂದು ಹೆರಿಗೆ ರಜೆಯ ಅವಧಿ ಮೂರು ತಿಂಗಳಿಂದ ಆರು ತಿಂಗಳಿಗೆ ವಿಸ್ತರಣೆಯಾಗಿದೆ. ಮಹಿಳೆಯರ ಕಷ್ಟಗಳನ್ನು ಅಂಬೇಡ್ಕರ್ ಅರಿತಿದ್ದರು. ಹೀಗಾಗಿ, ಸಮಾನ ಕೆಲಸಕ್ಕೆ ಸಮಾನ ವೇತನದ ಪರಿಕಲ್ಪನೆಯನ್ನು ಮಂಡಿಸಿದ್ದರು’ ಎಂದರು.

‘ಬುದ್ಧ ಅವರ ಅನುಯಾಯಿಗಳಿಗೆ, ಬಸವಣ್ಣ ಲಿಂಗಾಯತರಿಗೆ, ಅಂಬೇಡ್ಕರ್ ದಲಿತರಿಗೆ ಸೀಮಿತವಾಗಿದ್ದಾರೆ. ಅಂಬೇಡ್ಕರ್ ಅವರನ್ನು ದಲಿತರ ನಾಯಕ ಎಂದು ಕರೆಯುವುದು ತಪ್ಪು’ ಎಂದು ಹೇಳಿದರು.

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ ಮಾತನಾಡಿ, ‘ನಾವು ಮೂವರೂ ಮಹನೀಯರ ದಾರಿಯಲ್ಲಿ ನಡೆಯಬೇಕು. ಆದರೆ, ಸಾಧ್ಯವಾಗುತ್ತಿಲ್ಲ. ಬುದ್ಧ, ಬಸವ, ಅಂಬೇಡ್ಕರರು ಶ್ರೇಷ್ಠ ಅರ್ಥಶಾಸ್ತ್ರಜ್ಞರಾಗಿದ್ದರು. ಸಂವಿಧಾನದಿಂದಾಗಿ ಎಲ್ಲರಿಗೂ ಶಿಕ್ಷಣ ಹಾಗೂ ಸಮಾನ ಹಕ್ಕುಗಳು ಸಿಕ್ಕಿವೆ. ಆದ್ದರಿಂದ ಕೆಪಿಟಿಸಿಎಲ್ ನೌಕರರು ತಮ್ಮ ಮಕ್ಕಳು ಉನ್ನತ ಹುದ್ದೆ ಪಡೆಯುವ ನಿಟ್ಟಿನಲ್ಲಿ ಉತ್ತಮ ಶಿಕ್ಷಣ ಕೊಡಿಸಬೇಕು’ ಎಂದರು.

ಬೀದರ್ ಜಿಲ್ಲೆ ಅಣದೂರಿನ ವರಜ್ಯೋತಿ ಥೇರಾ ಭಂತೇಜಿ, ಸೊನ್ನ ವಿರಕ್ತಮಠದ ಡಾ. ಶಿವಾನಂದ ಸ್ವಾಮೀಜಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ ವೃತ್ತ ಸಮಿತಿಯ ಅಧ್ಯಕ್ಷ ಸಾಯಬಣ್ಣ ಕಾಳೆ, ವಿಚಾರವಾದಿ ಡಾ. ದತ್ತಾತ್ರೇಯ ಇಕ್ಕಳಕಿ ಹಾಗೂ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT