ಚಿತ್ತಾಪುರ: ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಯ ಚಿತ್ತಾಪುರ, ಶಹಾಬಾದ್ ಹಾಗೂ ಕಾಳಗಿ ತಾಲ್ಲೂಕುಗಳ ಸರ್ಕಾರಿ ಶಾಲೆಗಳು ಮೂಲಸೌಕರ್ಯಗಳ ಕೊರತೆಯಿಂದ ನಲುಗುತ್ತಿವೆ.
ಶಿಥಿಲಗೊಂಡ ತರಗತಿ ಕೋಣೆಗಳು, ಹಳೆಯ ಶಾಲಾ ಕಟ್ಟಡಗಳು, ಗ್ರಂಥಾಲಯ ಸಮಸ್ಯೆ, ಹದಗೆಟ್ಟಿರುವ ಶಾಲಾ ಪರಿಸರ, ಕ್ರೀಡಾ ಚಟುವಟಿಕೆಗಳಿಗೆ ಆಟದ ಮೈದಾನದ ಕೊರತೆ... ಹೀಗೆ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಸರ್ಕಾರಿ ಶಾಲೆಗಳಿಗೆ ಸೌಕರ್ಯಗಳಿಗಾಗಿ ಚಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದಾರೆ.
ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿಯ ಅಧೀನದಲ್ಲಿ 276 ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು, 49 ಸರ್ಕಾರಿ ಪ್ರೌಢ ಶಾಲೆಗಳು ಸೇರಿ ಒಟ್ಟು 325 ಶಾಲೆಗಳಿವೆ. 2024–25ನೇ ಸಾಲಿನಲ್ಲಿ 35,369 ಮಕ್ಕಳ ದಾಖಲಾಗಿದ್ದಾರೆ. 324 ತರಗತಿ ಕೋಣೆಗಳು ಶಿಥಿಲಗೊಂಡಿದ್ದು, ಅವುಗಳನ್ನು ತೆರವುಗೊಳಿಸಿ ಹೊಸದಾಗಿ ನಿರ್ಮಾಣ ಮಾಡಬೇಕಾಗಿದೆ.
ಕ್ರೀಡಾ ಚಟುವಟಿಕೆಗಾಗಿ 150 ಶಾಲೆಗಳಿಗೆ ಆಟದ ಮೈದಾನವಿದ್ದರೂ ನಿರ್ವಹಣೆಗಾಗಿ ಕಾಯುತ್ತಿವೆ. 175 ಶಾಲೆಗಳಿಗೆ ಆಟದ ಮೈದಾನಗಳೇ ಇಲ್ಲ. ಇದರಿಂದ ಪಠ್ಯೇತರ ಚಟುವಟಿಕೆಗೆ ತೊಂದರೆ ಆಗುತ್ತಿದೆ. ಸುಸಜ್ಜಿತ ಮೈದಾನ ಗಗನ ಕುಸುಮವಾಗಿದ್ದು, ಅವ್ಯವಸ್ಥೆಯಲ್ಲಿಯೇ ಕ್ರೀಡಾ ಚಟುವಟಿಕೆಗಳು ನಡೆಸುವ ಪರಿಸ್ಥಿತಿ ಇದೆ.
295 ಶಾಲೆಗಳಲ್ಲಿ ಗ್ರಂಥಾಲಯ ಸೌಲಭ್ಯವಿದ್ದು, 30 ಶಾಲೆಗಳಿಗೆ ಗ್ರಂಥಾಲಯದ ವ್ಯವಸ್ಥೆಯೇ ಇಲ್ಲ. ಪ್ರತಿಯೊಂದು ಶಾಲೆಯಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಆದರೆ, ನೀರಿನ ಕೊರತೆಯಿಂದಾಗಿ ಬಹುತೇಕ ನಿರುಪಯುಕ್ತವಾಗಿ ಪಾಳು ಬಿದ್ದಿವೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ ವ್ಯವಸ್ಥೆಯಿಲ್ಲದೆ ತೊಂದರೆಯಾಗುತ್ತಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಸಮರ್ಪಕವಾಗಿಲ್ಲ ಎಂಬುದು ವಿದ್ಯಾರ್ಥಿಗಳ ಅಳಲು.
ಬಹಳಷ್ಟು ಶಾಲೆಗಳಿಗೆ ಕಾಂಪೌಂಡ್ ಇಲ್ಲದೆ ಶಾಲಾ ಪರಿಸರ ಹಾಳಾಗುತ್ತಿದೆ. ಕಿಡಿಗೇಡಿಗಳು ಶಾಲಾ ಆವರಣದೊಳಗೆ ನುಗ್ಗಿ, ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದಾರೆ. ನರೇಗಾ ಯೋಜನೆಯಲ್ಲಿ ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ ಮಾಡಲು ಅವಕಾಶವಿದೆ. ಆದರೆ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ನಿರ್ಲಕ್ಷಿಸುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರು.
ಪಟ್ಟಣದಲ್ಲಿರುವ ಸರ್ಕಾರಿ ಬಾಲಕರ ಪ್ರೌಢ ಶಾಲೆ ಕಟ್ಟಡವು ಸಂಪೂರ್ಣವಾಗಿ ಶಿಥಿಲಗೊಂಡಿದೆ. ಸ್ವಲ್ಪವೇ ಮಳೆ ಬಿದ್ದರೆ ತರಗತಿ ಕೋಣೆಗಳು ಸೋರುತ್ತವೆ. ಮಳೆ ನೀರು ಹಿಡಿದ ಗೋಡೆಗಳು ತೇವಗೊಂಡಿವೆ. ನೀರಿನ ತೇವಾಂಶದಿಂದ ವಿದ್ಯುತ್ ಹರಿದರೆ ಅಪಾಯವಾಗುವ ಆತಂಕ ಪೋಷಕರಲ್ಲಿ ಕಾಡುತ್ತಿದೆ. ಸಿಮೆಂಟ್ ಕಾಂಕ್ರೀಟ್ ಛತ್ತಿನ ಮೇಲೆ ಹುಲ್ಲು, ಗಿಡಗಂಟಿ ಬೆಳೆದು ಮಳೆ ನೀರು ನಿಲ್ಲುತ್ತದೆ. ಕೋಣೆಯೊಳಗೆ ನೀರಿನ ಹನಿಗಳು ಬೀಳುವುದು ಸಾಮಾನ್ಯ.
ಶಾಲಾ ಕಟ್ಟಡ ಶಿಥಿಲ ತೆರವು ಮತ್ತು ಹೊಸ ಕಟ್ಟಡ ಕೋಣೆ ನಿರ್ಮಾಣ ಮೂಲಸೌಕರ್ಯದ ಮಾಹಿತಿ ಸಂಗ್ರಹಿಸಲಾಗಿದೆ. ಶೀಘ್ರದಲ್ಲೇ ಮೇಲಧಿಕಾರಿಗಳ ಮೂಲಕ ಪ್ರಸ್ತಾವ ಸಲ್ಲಿಸಲಾಗುವುದು
– ಮಲ್ಲಿಕಾರ್ಜುನ ಸೇಡಂ ಕ್ಷೇತ್ರ ಸಮನ್ವಾಯಾಧಿಕಾರಿ
ಸರ್ಕಾರಿ ಶಾಲೆಗಳು ಸೌಕರ್ಯಗಳ ಕೊರತೆಯಿಂದ ಮತ್ತು ಪಾಠಪ್ರವಚನಗಳಿಂದ ಜನಾಕರ್ಷಣೆ ಕಳೆದುಕೊಂಡು ದಾಖಲಾತಿಯೂ ಕುಸಿಯುತ್ತಿದೆ. ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ –ಮಲ್ಲಿಕಾರ್ಜುನ ಎಮ್ಮೆನೊರ್ ಭಂಕಲಗಾ ಗ್ರಾಮಸ್ಥ
-ಶಿಥಿಲಗೊಂಡಿರುವ ಶಾಲಾ ಕಟ್ಟಡ ಸಂಪೂರ್ಣ ತೆರವುಗೊಳಿಸಿ ಹೊಸದಾಗಿ ಸುಸಜ್ಜಿತ ಕಟ್ಟಡ ಕಟ್ಟಿಸಲು ಸಚಿವ ಪ್ರಿಯಾಂಕ್ ಖರ್ಗೆ ಅವರು ಸಂಬಂಧಿತರಿಂದ ನೀಲನಕ್ಷೆ ಯೋಜನೆ ಸಿದ್ಧಪಡಿಸಿದ್ದು ಎಂಜಿನಿಯರುಗಳು ಪರಿಶೀಲಿಸಿದ್ದಾರೆ
–ಕಾಶಿರಾಯ ಕಲಾಲ ಮುಖ್ಯ ಶಿಕ್ಷಕ ಸರ್ಕಾರಿ ಬಾಲಕರ ಪ್ರೌಢ ಶಾಲೆ ಚಿತ್ತಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.