ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಾಪುರ: ಸುಳ್ಳು ದಲಿತ ದೌರ್ಜನ್ಯ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ

Last Updated 27 ಮಾರ್ಚ್ 2018, 11:35 IST
ಅಕ್ಷರ ಗಾತ್ರ

ಸಿದ್ದಾಪುರ: ಸಿದ್ದಾಪುರದ ‘ಪ್ರಜಾವಾಣಿ’ ಅರೆಕಾಲಿಕ ವರದಿಗಾರ ಸಂದೇಶ್ ಶೆಟ್ಟಿ ಆರ್ಡಿ ಅವರ ಮೇಲೆ ಎರಡನೇ ಬಾರಿ ಸುಳ್ಳು ದಲಿತ ದೌರ್ಜನ್ಯ ಪ್ರಕರಣ ದಾಖಲಿಸಿರುವುದಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ವಿಧಿಸಿದೆ.

ಬೆಳ್ವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಟುಬೀಳು ಯಶೋದಾ ಕೃಷ್ಣ ನಾಯ್ಕ ಎಂಬವರು ಸಿಎನ್‌ಡಿ ಭೂಮಿ ಒತ್ತುವರಿ ಹಾಗೂ ಅಕ್ರಮ ಬೋರ್‌ವೆಲ್‌ ಕೊರೆದ ಸ್ಥಳ ಪರಿಶೀಲನೆಗೆ ಸೆಪ್ಟೆಂಬರ್ 4 ರಂದು ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ವಲಯ ಅರಣ್ಯಾಧಿಕಾರಿ, ಇತರೆ ಅಧಿಕಾರಿಗಳು ಬಂದಾಗ ವರದಿಗೆ ತೆರಳಿದ ವರದಿಗಾರನ ಮೇಲೆ ಸುಳ್ಳು ದಲಿತ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಗೊಳಿಸಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಗಾದ ಅನ್ಯಾಯದ ಕುರಿತು ಹೈಕೋರ್ಟ್ ಮೆಟ್ಟಿಲೇರಿದ್ದು, ಈಗಾಗಲೇ ತಡೆಯಾಜ್ಞೆ ವಿಧಿಸಿದೆ.

ಪುನಃ ಡಿಸೆಂಬರ್ 5 ರಂದು ಸಂದೇಶ್ ಶೆಟ್ಟಿಯವರು ಜಿಲ್ಲಾಧಿಕಾರಿ, ತಹಶೀಲ್ದಾರ್‌, ಕುಂದಾಪುರ ಉಪವಿಭಾಗಾಧಿಕಾರಿಯ ಕಚೇರಿಗೆ ತೆರಳಿದ್ದಾಗ ಅದೇ ದಿನ ಯಶೋದಾ ಕೃಷ್ಣ ನಾಯ್ಕ ಎಂಬವರು ಕೊಂಜಾಡಿ ಪರಿಸರದಲ್ಲಿ ಸಂದೇಶ್ ಶೆಟ್ಟಿ ತನ್ನ ಮಾನಭಂಗಕ್ಕೆ ಯತ್ನಿಸಿದ್ದ ಹಾಗೂ ಸಾಕ್ಷಿ ನಾಶಕ್ಕೆ ಪ್ರಯತ್ನಿಸಿದ್ದ ಎಂದು ಶಂಕರನಾರಾಯಣ ಠಾಣೆಯಲ್ಲಿ ಸುಳ್ಳು ದಲಿತ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಅದರಂತೆ ಶಂಕರನಾರಾಯಣ ಪೊಲೀಸರು ಆ ದಿನ ರಾತ್ರಿ ವರದಿಗಾರನನ್ನು ಬಂಧಿಸಿ, ಮರುದಿನ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಉಡುಪಿ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದ ನಂತರ ಸಂದೇಶ್ ಶೆಟ್ಟಿ ಅವರು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗೆ ನಿಷ್ಪಾಕ್ಷಪಾತ ತನಿಖೆ ನಡೆಸುವಂತೆ ಮನವಿ ಮಾಡಿದ್ದರು. ಅಲ್ಲದೆ ಪದೇ ಪದೇ ತನ್ನ ಮೇಲೆ ದಲಿತ ದೌರ್ಜನ್ಯ ಪ್ರಕರಣ ದಾಖಲಾಗುತ್ತಿರುವ ಕುರಿತು ನ್ಯಾಯಕ್ಕಾಗಿ ಹೈಕೋರ್ಟ್ ಮೊರೆಹೋಗಿದ್ದರು.

ಕಕ್ಷಿದಾರರ ಪರ ವಾದಿಸಿದ ವಕೀಲ ಎಚ್.ಪವನಚಂದ್ರ ಶೆಟ್ಟಿ ಅವರು, ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ನಿರಪರಾಧಿಗಳ ಮೇಲೆ ದಲಿತ ದೌರ್ಜನ್ಯ ಪ್ರಕರಣ ದುರುಪಯೋಗವಾಗುತ್ತಿರುವ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪು ಹಾಗೂ ಸಂವಿಧಾನದ ಪರಿಚ್ಛೇದ 21ರ ಮೇಲೆ ಯಾವ ರೀತಿ ಪ್ರಭಾವ ಬೀರುತ್ತಿದೆ. ಇದರಿಂದ ನಿರಪರಾಧಿಗಳಿಗೆ ತೊಂದರೆಯಾಗುತ್ತಿದೆ ಎಂದು ವಾದಿಸಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ನ್ಯಾಯಪೀಠವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT